ದೇವರಾಜಾರಸ್.ಕಂ ಮಾರಾಟಕ್ಕಿದೆ
ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ 'ಭೂಸುಧಾರಣೆಯ ಹರಿಕಾರ' ಎಂದು ಕರೆಯಲ್ಪಡುವವರು ಡಿ.ದೇವರಾಜ್ ಅರಸ್. ಅದುವರೆಗಿನ ಅನೇಕ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದ ಹಿಂದುಳಿದ-ಶೋಷಿತ ವರ್ಗಗಳಿಗಾಗಿ, ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದ ಇವರು ಹಿಂದುಳಿದ ವರ್ಗಗಳ ಹರಿಕಾರರೆಂದು ಹೆಸರಾದವರು. ಮೈಸೂರಿನ ಕಲ್ಲಹಳ್ಳಿಯಲ್ಲಿ 20-08-1915 ರಂದು ಜನಿಸಿದ ಅರಸ್, ಎಸ್.ನಿಜಲಿಂಗಪ್ಪ ನಂತರ ಅತಿ ಹೆಚ್ಚು ಅವಧಿಗೆ (1972-80) ಮುಖ್ಯಮಂತ್ರಿಯಾದವರು. ವೃಕ್ಷ ಸಂರಕ್ಷಣಾ ಯೋಜನೆ, ಜೀತ ಪದ್ಧತಿ ನಿಷೇಧ, ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಮೊದಲಾದವನ್ನು ಜಾರಿಗೆ ತಂದು ಜನಮಾನಸದಲ್ಲಿ ನೆಲೆಯಾದರು. ಇಂದು ಬೆಂಗಳೂರಿನಲ್ಲಿ ಅನೇಕ ವಿದೇಶಿ ಕಂಪೆನಿಗಳು ಇರುವ, ರಾಜ್ಯಕ್ಕೆ ಕೊಟ್ಯಾಂತರ ರೂ. ಆದಾಯ ನೀಡುತ್ತಿರುವ ಇಲೆಕ್ಟ್ರಾನಿಕ್ ಸಿಟಿಯ ನಿರ್ಮಾತೃ. ಸ್ವಪಕ್ಷಿಯರಿಂದಲೇ ವಿರೋಧವಿದ್ದರೂ, ಜಾರಿಗೆ ತಂದ ಭೂಸುಧಾರಣಾ ಕಾಯಿದೆ ಹಾಗೂ ಅದರ ವ್ಯಾಜ್ಯ ವನ್ನು ಬಗೆಹರಿಸಲು ಭೂಸುಧಾರಣಾ ನ್ಯಾಯಮಂಡಲಿ ಸ್ಥಾಪಿಸಿದರು. ಅ ಕಾಲದಲ್ಲಿ ಕರ್ನಾಟಕ ಕಾಂಗ್ರೆಸ್ ನ ಬಹುದೊಡ್ಡ ನಾಯಕರಾಗಿ ಮೆರೆದರೂ ಕೊನೆಗೆ ಇಂದಿರಾಗಾಂಧಿಯ ವಿರೋಧ ಕಟ್ಟಿಕೊಂಡು ರಾಜಕೀಯವಾಗಿ ಮೂಲೆಗುಂಪಾದರು. ಕೊನೆಗೆ 1982 ರ ಜೂನ್ 6 ರಂದು ವಿಧಿವಶರಾದರು.
1915 ರಲ್ಲಿ ಜನಿಸಿದ ಅರಸರ ಜನ್ಮ ಶತಮಾನದ ಅಚರಣೆಗೆ, ಅವರ ಹಾದಿಯಲ್ಲಿಯೇ ನಡೆಯಬೇಕೆಂದುಕೊಂಡಿರುವ ಇಂದಿನ ಘನ(!) ಸರ್ಕಾರ, ಅರಸರ ಕುರಿತಾಗಿ ಸಮಗ್ರ ಮಾಹಿತಿಯನ್ನು ಒಳಗೊಂಡ ವೆಬ್ಸೈಟ್ ಒಂದನ್ನು ಆರಂಭಿಸಿತು. ಜೂನ್ 6ರಂದು ಇದನ್ನು ಲೋಕಾರ್ಪಣೆ ಮಾಡಿದವರು, ಘನ ಸರ್ಕಾರದ ಸಮಾಜಕಲ್ಯಾಣ ಮಂತ್ರಿಗಳು. ಈಗ ಆಗಸ್ಟ್ 17, ನಾಳೆ ಅರಸರ ಪುಣ್ಯತಿಥಿ. ಅರಸರ ನೆನಪಿಗೆ ಅರಂಭಿಸಿದ "www.devrajurs.com" ಎನ್ನುವ ನಾಮಪದ ಈಗ ಮಾರಾಟಕ್ಕೆ ಇದೆ, ಅದು ಕೂಡ ಕೇವಲ 577 ರೂ ಗಳಿಗೆ. ಎಕರೆಗಟ್ಟಲೆ ಭೂಮಿಯನ್ನು ರೈತರಿಗೆ ಒದಗಿಸಿದ ಅರಸರಿಗೆ ಅಂತರ್ಜಾಲದಲ್ಲೊಂದು ಜಾಗವಿಲ್ಲ. ದೇವರಾಜಾರಸ್.ಕಂ ಎನ್ನುವ ಜಾಲತಾಣ,ಇಂದು ಅಂತರ್ಜಾಲದಲ್ಲಿ ಕಾಣಿಸುತ್ತಿಲ್ಲ.ಅಲ್ಲಿಗೆ ಅರಸು ಅವರ ಸಾಧನೆಯನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಲು ಸರ್ಕಾರದ ಪ್ರಯತ್ನ ವ್ಯರ್ಥವಾಯಿತು. ಜಾಲತಾಣ ಸ್ಥಗಿತಗೊಂಡರೆ ಹೊಗಲೀ, ಕನಿಷ್ಟ ಪಕ್ಷ ಹೆಸರನ್ನಾದರು (Domain Name) ಉಳಿಸಿಕೊಳ್ಳುವ ಕಾಳಜಿ ತೊರಲಿಲ್ಲ.
ತಲೆಬರಹಕ್ಕೂ -ಲೇಖನಕ್ಕೂ ಸಂಬಂಧವಿಲ್ಲ ಅಂದುಕೊಳ್ಳಬೇಡಿ; ಸಂಬಂಧ ಇದೆ. ವಾರದ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಲತಾಣ ಕಾಲಕಾಲಕ್ಕೆ ಅಪ್ಡೇಟ್ (Update) ಅಗುತ್ತಿಲ್ಲ ಎಂದು ಚರ್ಚೆಯಾಯಿತು (ಅದು ಕೂಡ ಎರಡು ವರ್ಷಗಳಿಂದ). ಆಗ ಪ್ರವಾಸೋದ್ಯಮ ಇಲಾಖೆಯ ಆಧಿಕಾರಿಗಳು ಉತ್ತರಿಸಿ, "ಜಾಲತಾಣವನ್ನು ಹೊಸದಾಗಿ ವಿನ್ಯಾಸಗೊಳಿಸಲು ಸುಮಾರು 10 ಕೋಟಿ ರೂಪಾಯಿಗಳ ಯೋಜನೆಯನ್ನು ರೂಪಿಸಿದ್ದು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ, ಅದೇಶ ಬಂದರೆ 2 ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಲತಾಣವನ್ನು ಮರುವಿನ್ಯಾಸಗೊಳಿಸಲಾಗುವುದು". ಇದು ನಮ್ಮ ನಾಡಿನ ಸಂಸ್ಕೃತಿಯನ್ನು, ಪ್ರಸಿದ್ಧ ಸ್ಥಳಗಳನ್ನು ವಿಶ್ವಕ್ಕೆ ಪರಿಚಯಿಸಲು ಸಂಪರ್ಕ ಸೇತುವಾಗುವ ಜಾಲತಾಣದ ಸ್ಥಿತಿಗತಿ. ಅಂದ ಹಾಗೆ ಒಂದು ವೆಬ್ಸೈಟ್ ಆರಂಭಕ್ಕೆ ಹತ್ತು ಕೋಟಿ ಬೇಕಾ? ಎಂಬ ಪ್ರಶ್ನೆಗೆ ಉತ್ತರ ಮೇಲೆಯೇ ನೀಡಿದ್ದೇನೆ.