Friday, September 22, 2017

ಕಾಡಿನಲ್ಲಿ ಒಂಟಿ ವೈಮಾನಿಕ

ಅಂದು ಬೋಸ್ನಿಯಾ ದೇಶದ ಕಾಡೊಂದರ ಆಗಸದಲ್ಲಿ ಭಾರಿ ಸದ್ದು ಮಾಡುತ್ತಾ ಹೆಲಿಕ್ಯಾಪ್ಟರ್ ಗಳು ಹಾರುತ್ತಿದ್ದವು. ಇತ್ತ ನೆಲದಲ್ಲಿ ಬೋಸ್ನಿಯಾ ಪೊಲೀಸ್, ಮಿಲಿಟರಿ ಪಡೆ, ಅರೆಸೇನಾ ಪಡೆ ಹಾಗು ಇನ್ನು ಅನೇಕ ಬಂದೂಕುಧಾರಿಗಳು ಶೋಧಕಾರ್ಯದಲ್ಲಿ ತೊಡಗಿದ್ದರು. 'ಬೇಟೆ ಸಮೀಪದಲ್ಲೇ ಇದೆ' ಎಂದೂ ಅವರಿಗೆ ಗೊತ್ತಿತ್ತು. ಆದರೆ ನಿಖರ ಸ್ಥಳ ಗೊತ್ತಿರಲಿಲ್ಲ. ಇತ್ತಕಡೆ ಬೇಟೆಗೆ, ತನ್ನ ಸಾವಿನ ಸಮಯ ದೂರವಿಲ್ಲ ಎನ್ನುವುದು ತಿಳಿದಿತ್ತು. ಯಾವ ಕ್ಷಣದಲ್ಲಾದರೂ ಅವರು ತನ್ನನ್ನು ಕಂಡುಹಿಡಿದು, ಸುಟ್ಟುಬಿಡಬಹುದೆಂದು ಗೊತ್ತಿದ್ದರೂ, ಜೀವ ಸಾವನ್ನು ತಪ್ಪಿಸಲು ಹೆಣಗುತ್ತಿತ್ತು. 5 ಮೀಟರ್ ಸಮೀಪದಲ್ಲಿ ಶೋಧ ತಂಡದ ಕೆಲವರು ಕಂಡಾಗ ಜೀವವೇ ಬಾಯಿಗೆ ಬಂದ ಹಾಗಾಯಿತು. ಅಷ್ಟಕ್ಕೂ ಇವರೆಲ್ಲರೂ ಒಂದು ಕಾಡು ಪ್ರಾಣಿಯಂತೆ ಹುಡುಕುತ್ತಿದ್ದದು, ಸ್ಕಾಟ್- ಓ- ಗ್ರಡಿ ಎನ್ನುವ ಅಮೆರಿಕನ್ ಯುದ್ಧ ವಿಮಾನದ ಪೈಲಟ್ ಅನ್ನು.

ಅದು ಬೋಸ್ನಿಯಾ-ಹರ್ಜೆಗೊವಿನಾ; 51,197 Km ^2 ವಿಸ್ತೀರ್ಣದ ಯೂರೋಪ್ ಖಂಡದ ಒಂದು ದೇಶ. 1992ರಲ್ಲಿ ಆರಂಭವಾದ ಜನಾಂಗೀಯ ಹೋರಾಟ ಇನ್ನು ಮುಗಿದಿರಲಿಲ್ಲ. ಸರ್ಬಿಯನ್ ಪ್ರೇರಿತ ಸರ್ಬ್ ಜನಾಂಗದ ಹೋರಾಟಗಾರರು ಬೋಸ್ನಿಯಾದಲ್ಲಿದ್ದ ಬೋಸ್ನಿಯನ್, ಕ್ರೋಟ್ ಜನಾಂಗದ ಮೇಲೆ ಧಾಳಿ ಮಾಡಿದ್ದರು. ಈ ಜನಾಂಗೀಯ ಹೋರಾಟದಲ್ಲಿ ಅನೇಕ ಮುಸ್ಲಿಮರು ಹತರಾದರು. ವಿಶ್ವಸಂಸ್ಥೆಯ ನೇತೃತ್ವದಲ್ಲಿ 1994ರ ಹೊತ್ತಿಗೆ ನ್ಯಾಟೋ ( NATO) ಮಧ್ಯಪ್ರವೇಶಿಸಿ, ಬೋಸ್ನಿಯಾ ನಾಗರೀಕರಿಗೆ ಹಲ್ಲೆ ಮಾಡುತ್ತಿದ್ದ ಸರ್ಬ್ ಪಡೆಗಳ ಮೇಲೆ ಧಾಳಿ ಆರಂಭಿಸಿತು.

ನೀಲನಕ್ಷೆ  

ಅದು ಜೂನ್ ಎರಡು, 1995 ಮಧ್ಯಾಹ್ನ 1.15ರ ಸಮಯ. ಇಟಲಿಯ ಅವಿಯನೋ ವಾಯುಕೇಂದ್ರದಿಂದ ಅಮೆರಿಕನ್ ಸೇನೆಯ ಎರಡು F-16 ಯುದ್ಧ ವಿಮಾನಗಳು ಬೋಸ್ನಿಯಾದ "No Fly Zone'' ಪ್ರದೇಶದತ್ತ ಹೊರಟವು. ಒಂದನ್ನು ರಾಬರ್ಟ್ ರೈಟ್ ಚಲಾಯಿಸುತ್ತಿದ್ದರೆ, ಇನ್ನೊಂದು ಸ್ಕಾಟ್- ಓ- ಗ್ರಡಿಯ ನಿಯಂತ್ರಣದಲ್ಲಿತ್ತು. ಗಂಟೆಗೆ 2000 km ವೇಗದಲ್ಲಿ ಸಾಗಬಲ್ಲ ಕಂಪ್ಯೂಟರ್ ಚಾಲಿತ F- 16 ಯುದ್ಧ ವಿಮಾನ ತನ್ನೆಡೆಗೆ ಹಾರಿಬರುವ ಕ್ಷಿಪಣಿಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿತ್ತು. ಗಂಟೆಗೆ 500 km ವೇಗದಲ್ಲಿ ದೈನಂದಿನ ಹಾರಾಟ ಮಾರ್ಗದಲ್ಲೇ ಎಂಟು ಸಾವಿರ mtr ಎತ್ತರದಲ್ಲೇ ಹಾರುತಿದ್ದರು. 40 km ಸುತ್ತಳತೆಯಲ್ಲೇ ಸರ್ಬ್ ಸೇನೆಯ ಚಟುವಟಿಕೆಗಳನ್ನು ಗಮನಿಸುತ್ತಾ ಸಾಗಿದ್ದರು. ನೆಲದಲ್ಲಿ ದಿನಾಲೂ ಒಂದೇ ಪಥದಲ್ಲಿ ಹಾರುತ್ತ ತಮ್ಮ ಮೇಲೆ ಧಾಳಿ ಮಾಡುತ್ತಿದ್ದ, ವಿಮಾನಗಳನ್ನು ಸರ್ಬ್ ಗಳು ಗಮನಿಸುತ್ತಿದ್ದರು. ಮರ್ಕೋಜಿಕ್ ಗ್ರಾಡ್ ಬಳಿ ಪ್ರತೀಕಾರಕ್ಕಾಗಿ ಕಾಯುತ್ತಿದ್ದ, ಸರ್ಬ್ ಪಡೆಯ ಕರ್ನಲ್ ಬಳಿ ರಷ್ಯನ್ ನಿರ್ಮಿತ SA-6 ಕ್ಷಿಪಣಿ ಇತ್ತು. ಇದರ ರೇಡಾರ್ 75km ದೂರದ 10,000 ಮೀಟರ್ ಎತ್ತರದಲ್ಲಿದ್ದ ವಿಮಾನಗಳನ್ನು ಗುರುತಿಸುವ ಸಾಮರ್ಥ್ಯವಿತ್ತು. 3 ಶಕ್ತಿ ಶಾಲಿ ಆಟೋ ಡಿಟೆಕ್ಟೆಡ್ ಕ್ಷಿಪಣಿಯಿರುವ ಇದನ್ನು "Wings Of Death'' ಎಂದು ಕರೆಯುತ್ತಿದ್ದರು.

ಸೋವಿಯತ್ ನಿರ್ಮಿತ SA-6 ಕ್ಷಿಪಣಿ ವಾಹಕ 


ಮಧ್ಯಾಹ್ನ 2.50 ರ ಸಮಯ, ಎರಡು ವಿಮಾನಗಳು 2 km ಅಂತರದ ನಡುವೆ ಹಾರುತ್ತಿದ್ದಾಗ, ರಾಬರ್ಟ್ ರೈಟ್ ನ ವಿಮಾನಕ್ಕೆ ರೇಡಾರ್ ಒಂದರ ತರಂಗಗಳು ತಲುಪಿದವು. ನೆಲದ ಮೇಲೆಲ್ಲೋ ವಿಮಾನ ನಿರೋಧಕ ಕ್ಷಿಪಣಿ ಇದೆ ಎಂದು ರೈಟ್ ಅಂದಾಜಿಸಿ ಅದನ್ನು ಸ್ಕಾಟ್- ಓ- ಗ್ರಡಿಗೆ ತಿಳಿಸಿದರು. ಅವರ ಊಹೆ ಸರಿಯಾಗಿತ್ತು, ಮರುಕ್ಷಣದಲ್ಲಿ ರಾಡಾರ್ ಸಂಕೇತ ಸ್ಥಗಿತವಾಯಿತು. ನೆಲದಲ್ಲಿ ಕರ್ನಲ್ ಅಪಾಯಕಾರಿ ಆಟಕ್ಕೆ ಕೈ ಹಾಕಿದ್ದರು. ಕರ್ನಲ್ ನಿರಂತರವಾಗಿ ರೇಡಾರ್ ನ್ನು ಚಾಲುಗೊಳಿಸಿದ ಪಕ್ಷದಲ್ಲಿ ಮೇಲೆ ವಿಮಾನದಲ್ಲಿ ರೇಡಾರ್ ಪ್ರತಿಬಂಧಕ ಇದನ್ನು ಗ್ರಹಿಸಬಹುದು. ಹೀಗಾದಾಗ ವಿಮಾನದ ಬಾಂಬ್ ರೇಡಾರ್ ನ್ನು ನಾಶಮಾಡಬಹುದು. ಇದರ ಬದಲಾಗಿ ರಾಡಾರ್ ಆನ್ ಮಾಡದೆಯೇ ಕ್ಷಿಪಣಿಯೊಂದನ್ನು ಮೇಲಕ್ಕೆ ಹಾರಿಸಿದರು. ಕೇವಲ ಹತ್ತು ಸೆಕೆಂಡನಲ್ಲಿ ಅದು ಎರಡು ವಿಮಾನದ ನಡುವೆ ಸ್ಫೋಟಗೊಂಡಿತ್ತು. ಮೊದಲನೇ ಕ್ಷಿಪಣಿ ಹಾರಿದ 5 ಸೆಕೆಂಡ್ ನಲ್ಲಿ ರಾಡಾರ್ ಆನ್ ಮಾಡಿ ಇನ್ನೊಂದು ಕ್ಷಿಪಣಿ ಹಾರಿಸಿದ್ದರು. ತನ್ನೆಡೆಗೆ ಬರುತ್ತಿದ್ದ ಮೊದಲನೇ ಕ್ಷಿಪಣಿಯಿಂದ ಬಚಾವಾದ ಸ್ಕಾಟ್ ಗೆ ಈಗ ಪಾರಾಗಲು ಸಮಯವೇ ಉಳಿದಿರಲಿಲ್ಲ. ಕ್ಷಿಪಣಿ ಸ್ಪೋಟಕ್ಕೆ ವಿಮಾನ ಹೋಳಾಗಿ ಪೈಲಟ್ ಸ್ಕಾಟ್- ಓ- ಗ್ರಡಿ ಹೊರ ಹಾರಿದ್ದರು. ಗಂಟೆಗೆ 190 km ವೇಗದಲ್ಲಿ ಭೂಮಿಗೆ ಧಾವಿಸುತ್ತಿದ್ದ ಅವರು, 4000 ಮೀಟರ್ ಎತ್ತರಕ್ಕೆ ತಲುಪಿದಾಗ ಪ್ಯಾರಾಚೂಟ್ ಬಿಚ್ಚಿದರು. ಪ್ಯಾರಾಚೂಟ್ ತೆರೆದುಕೊಳ್ಳದ ಪಕ್ಷದಲ್ಲಿ, ಅವರು ಭೂಮಿಗೆ ಅಪ್ಪಳಿಸುವ ಸಂಭವವಿತ್ತು. ರಾಬರ್ಟ್ ರೈಟ್ ತನ್ನ ಸಹಚರನ ವಿಮಾನ ನೆಲಕ್ಕೆ ಬಿದ್ದ ಸಂಗತಿಯನ್ನು ವಾಯುನೆಲೆಗೆ ಮುಟ್ಟಿಸಿದರು .

ಭೂಮಿಗೆ ಬೀಳುತ್ತಿದ್ದ ಪೈಲಟ್ ಗೆ ತಾನು ಸರ್ಬ್ ಸೇನೆಯ ನಿಯಂತ್ರಣದಲ್ಲಿದ್ದ ಪ್ರದೇಶಕ್ಕೆ ಬೀಳುತ್ತಿದ್ದೇನೆಂದು ಗೊತ್ತಾಯಿತು. ಅವರ ಕೈಗೆ ಸಿಕ್ಕು ಬಿದ್ದರೆ, ತನ್ನನ್ನು ಉಳಿಸಲಾರರೆಂದು ಗೊತ್ತಾಯಿತು. ಸರ್ಬ್ ಅರೆಸೇನಾಪಡೆಗಳು ಯುದ್ಧ ಕಾಲದ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ವಾಹನಗಳಲ್ಲಿ ಪ್ಯಾರಾಮಿಲಿಟರಿ ಪಡೆಗಳು ಇವರತ್ತ ಧಾವಿಸುತ್ತಿದ್ದರು, ಆದರೆ ಆಗ ಬೀಸಿದ ಗಾಳಿ ಇವರನ್ನು ಸ್ವಲ್ಪ ದೂರ ಎಳೆದೊಯ್ಯಿತ್ತು. 3.35ಕ್ಕೆ ನೆಲಕ್ಕೆ ಬಿದ್ದ ತಕ್ಷಣ ಪ್ಯಾರಾಚೂಟ್ ನಿಂದ ಕಳಚಿಕೊಂಡು ಓಡಲೂ ಹವಣಿಸಿದರು. ಕೆಲವೇ ಕ್ಷಣಗಳಲ್ಲಿ ಸರ್ಬ್ ಪಡೆ ಇವರನ್ನು ಹುಡುಕಿಕೊಂಡು ಬರುತ್ತಿದ್ದರು. 200 mtr ಓಡಿದ ನಂತರ ನೆನಪಾಯಿತು. ತಮ್ಮ ಸಲಕರಣೆ ಚೀಲವನ್ನು ಅಲ್ಲೇ ಮರೆತು ಬಂದಿದ್ದರು. ತಿರುಗಿ ಹೋಗುವಂತೆ ಇರಲಿಲ್ಲ, ಅದಾಗಲೇ ಪೊಲೀಸರು ಆ ಸ್ಥಳವನ್ನು ತಲುಪಿಯು ಆಗಿತ್ತು. ಅಲ್ಲೇ ಮರೆಯಲ್ಲೇ ಅಡಗಿಕೊಂಡು ಗಮನಿಸತೊಡಗಿದರು.........

                                                                                                               -Tharanatha Sona