Thursday, October 19, 2017

ನಿಮ್ಮ ಕಾಲ ಕೆಳಗೆ ಏನಿದೆ?... ಇಲ್ಲಿ ನೋಡಿ!


"ನೀವು ಹಾಕಾಂಗ್ ನಲ್ಲಿ ನೆಲ ಹೊಕ್ಕರೆ ದ-ಅಮೇರಿಕಾದಲ್ಲಿ ಹೊರಬರಬಹುದು!"ನಿಮಗೆಲ್ಲಾ ಚಿಕ್ಕಂದಿನಿಂದಲೂ ಒಂದು ಆಸೆ ಇರಬಹುದು, ಕೆಲವರಿಗೆ ಈಗ ಅರಿವಾಗಿರಬಹುದು. ನಮ್ಮ ಕಾಲ ಕೆಳಗಿನಿಂದ ಭೂಮಿಯನ್ನು ಕೊರೆಯುತ್ತ ಆಳಕ್ಕೆ ಹೋದರೆ, ಇನ್ನೊಂದು ಬದಿಯಲ್ಲಿ ಏನು? ಇರಬಹುದು ಎಂದು!. ಪ್ರಾಕ್ಟಿಕಲ್ ಅಗಿ ಇದು ಕಾರ್ಯಸಾಧ್ಯವಾಗಲಾರದು.ಸರಾಸರಿ 12,742 ಕಿ.ಮೀ ಇರುವ ಭೂಮಿಯ ಎರಡು ಮೇಲ್ಮೈ ಆಂತರವನ್ನು ಕೊರೆಯುವುದು, ಸದ್ಯ ಲಭ್ಯವಿರುವ ಯಾವ ಯಂತ್ರದಿಂದಲೂ ಸಾಧ್ಯವಿಲ್ಲ ಬಿಡಿ.

"ಕೋಲ ಸೂಪರ್-ಡೀಪ್ ಪ್ರೊಜೆಕ್ಟ್" ಎನ್ನುವ ಹೆಸರಿನಲ್ಲಿ, ಸೊವಿಯತ್ ರಷ್ಯಾ ಎಪ್ಪತ್ತರ ದಶಕದಲ್ಲಿ ಇಂತಹದೊಂದು ಯೋಜನೆಯನ್ನು ಕೈಗೆತ್ತಿಕೊಂಡಿತು. ರಷ್ಯಾದ 'ಕೋಲ ಪೆನಿಸುನ್ ' ಎನ್ನುವ ಸ್ಥಳದಲ್ಲಿ  ಭೂಮಿ ಕೊರೆಯುವ ಯೋಜನೆ ಆರಂಭಗೊಂಡು, 1994 ರವರೆಗೆ, ಭರ್ತಿ 24 ವರ್ಷ ಎಡೆಬಿಡದೆ 23 ಸೆ.ಮೀ ಅಗಲವಾಗಿ ಕೊರೆದರೂ ಕೂಡ, ಕೊರೆದ ಆಳವೆಷ್ಟು ಗೊತ್ತೆ? 12,262 ಮೀ, ಅರ್ಥಾತ್ 12 ಕಿ.ಮೀ! ಕೊನೆಗೆ 180 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ಭೂಮಿ ಕೊರೆಯುವ ಉಪಕರಣಗಳೂ ಹಾಳಾಗಿ ಯೋಜನೆಯನ್ನು ಸ್ಥಗಿತಗೊಳಿಸ ಬೇಕಾಗಿ ಬಂತು. 2008 ರವರೆಗೆ ಇದೇ ಭೂಮಿಯ ಅತಿ ದೊಡ್ಡ ಮಾನವ ನಿರ್ಮಿತ ಬಾವಿಯಾಗಿತ್ತು. ನಂತರ ಕತಾರ್ ಹಾಗೂ ರಷ್ಯಾದ ತೈಲಬಾವಿಗಳು ಇದನ್ನು ಹಿಂದಿಕ್ಕಿದವು.

ಭೂಮಿಯ ಆಳಕ್ಕೆ ಹೋದಂತೆ ತಾಪ ಆಧಿಕವಾಗುವುದ್ದರಿಂದ ಇವುಗಳ ಕಾರ್ಯಸಾಧ್ಯತೆ ಸುಲಭವಲ್ಲ. ಇನ್ನು ನೀವು ಭೂಮಿಯ ಒಳಗಿನಿಂದ ಆಚೆ ಮೇಲ್ಮೈಯನ್ನು ತಲುಪಲು ಸಾಗುವಾಗ ಸಿಗುವ, ಭೂಮಿಯ ಕೇಂದ್ರ ಭಾಗದ ಉಷ್ಣಾಂಶ ಎಷ್ಟುಗೊತ್ತೆ? 7000 ಡಿಗ್ರಿ ಸೆಲ್ಸಿಯಸ್ ಅಷ್ಟೇ. 35-40 °C ಯ ಬಿಸಿಲಿಗೆ ಬೆವರುವ ನಾವುಗಳು ಅಷ್ಟೊಂದು ತಾಪಕ್ಕೆ ಉಳಿಯಲು ಉಂಟೇ? ಇಷ್ಟು ಆಳಕ್ಕೆ ತಲುಪುವ ಮೊದಲೇ ಉಕ್ಕಿಬರುವ ಲಾವಾರಸದಿಂದ ಪಾರಾಗುವುದು ಹೇಗೆ?
ಇನ್ನೂ ನಮ್ಮ ಕಾಲ ಕೆಳಗೆ, ಅಂದರೆ ಭೂಮಿಯ ಇನ್ನೊಂದು ಬದಿಯಲ್ಲಿ ಏನಿದೆ ಎಂದು ತಿಳಿಸಿಕೊಡುವ ನಕ್ಷೆಗೆ "ಆ್ಯಂಟಿಪೊಡೆಸ್ ಮ್ಯಾಪ್" ಎಂದು ಹೆಸರು. ಇದರ ಮೂಲನಾಮ 'ಆ್ಯಂಟಿಪೋಡ್' ಗ್ರೀಕ್ ನ antípous ಎನ್ನುವ ಶಬ್ದದಿಂದ ಬಂದಿದೆ. ಗೋಳಕಾರವಾಗಿರುವ ಭೂಮಿಯಲ್ಲಿ ನೀವು ನಿಂತಿರುವ ಬಿಂದುವಿನಿಂದ, ಭೂಕೇಂದ್ರೀಯ ಭಾಗಕ್ಕೆ ಎಳೆದ ರೇಖೆಯ ಮುಂದೆ ಕಾಣಸಿಗುವ ಬಿಂದು/ಪ್ರದೇಶವೇ ನಿಮ್ಮ ಆ್ಯಂಟಿಪೋಡ್. ಒಂದು ಪ್ರದೇಶ ಹಾಗೂ ಅದರ ಆ್ಯಂಟಿಪೋಡ್ ಪ್ರದೇಶದ ನಡುವೆ ಸಾಮಾನ್ಯವಾಗಿ 12 ಗಂಟೆಗಳ ವ್ಯತ್ಯಾಸ ಇರುತ್ತದೆ (ಓರೆಕೋರೆಯಾಗಿ ಎಳೆದ 0+ Standard Time ರೇಖೆಯ ಕೆಲವು ಪ್ರದೇಶವನ್ನು ಹೊರತುಪಡಿಸಿ).

ಸಮಭಾಜಕ ವೃತ್ತದಿಂದ ಉತ್ತರ ಭಾಗದಲ್ಲಿರುವ ಭಾರತದ ಆ್ಯಂಟಿಪೋಡ್, ದಕ್ಷಿಣ ಆಮೇರಿಕಾ ಖಂಡವನ್ನು ಆವರಿಸಿರುವ ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿದೆ. ಈ ಪ್ರದೇಶ ದಕ್ಷಿಣ ಧ್ರುವದಲ್ಲಿರಲು ಕಾರಣ, ಭೂಮಿಯ ಆಕ್ಷಾಂಶ 23.5ಡಿಗ್ರಿಗಳಷ್ಟು ವಾಲಿರುವುದು. ಇದರಿಂದಾಗಿ ಭೂಮಧ್ಯ ರೇಖೆಯ ಉತ್ತರದ ಪ್ರದೇಶಗಳ antipode ದಕ್ಷಿಣ ಭಾಗದಲ್ಲಿರುತ್ತದೆ, ಹಾಗು ದಕ್ಷಿಣದ ಪ್ರದೇಶಗಳ ಆ್ಯಂಟಿಪೋಡ್ ಉತ್ತರಭಾಗದಲ್ಲಿದೆ. ಪೆರು ದೇಶದ ತೀರದಿಂದ ಅಂದಾಜು 2000 ಕಿ.ಮೀ ದೂರದಲ್ಲಿ ಭಾರತದ ಆ್ಯಂಟಿಪೋಡ್ ಇದೆ. ಭಾರತೀಯರ ಕಾಲಕೆಳಗೆ ಏನಿದೆ ಎನ್ನುವ ಪ್ರಶ್ನೆಗೆ ಉತ್ತರ- ದಕ್ಷಿಣ ಪೆಸಿಫಿಕ್ ಮಹಾಸಾಗರ.

ಕೆಂಪು ಭಾಗದ ಆಂಟಿಪೋಡ್ಸ್ ಹಳದಿ ಭಾಗದಲ್ಲಿದೆ

ಅಂದ ಹಾಗೆ, ನಿಮ್ಮ ವಿರುದ್ಧ ಮೇಲ್ಮೈನಲ್ಲಿ ಭೂಮಿಯಲ್ಲಿ ಯಾವ ಪ್ರದೇಶವಿದೆ ಎಂದೂ ತಿಳಿಯಲು "http://antipodr.com" ಎನ್ನುವ ಜಾಲತಾಣವಿದೆ.                        -Tharanatha Sona

Wednesday, October 4, 2017

ಕಾಡಿನಲ್ಲಿ ಒಂಟಿ ವೈಮಾನಿಕ ಭಾಗ-2


ತಮ್ಮ ಸೇನೆಯ ಯುದ್ಧ ವಿಮಾನ ನೆಲಕ್ಕುರುಳಿದ ಸುದ್ದಿ ಲಂಡನ್ನಲ್ಲಿದ್ದ ನ್ಯಾಟೋ ಕೇಂದ್ರಕ್ಕೆ ತಲುಪಿತ್ತು. ಒಂದು ವೇಳೆ ಪೈಲಟ್ ಬದುಕಿದ್ದರೆ, ಸಂಪರ್ಕಿಸಲು ಸಾಧ್ಯವಾಗುವಂತೆ  'US- Kearsarge'  ಎನ್ನುವ ನೌಕಾಪಡೆ ಕಾವಲು ನೌಕೆಯನ್ನು ಬೋಸ್ನಿಯಾದ ಸಮುದ್ರ ತೀರದತ್ತ ಕಳುಹಿಸಲಾಯಿತು. ರಾತ್ರಿಯವರೆಗೆ ಅಡಗಿದ ಸ್ಥಳದಿಂದ ಏಳದೇ, 11 ಗಂಟೆ ಸಮಯದಲ್ಲಿ ಪೈಲಟ್ ತನ್ನ ರೇಡಿಯೋ ಉಪಕರಣ ಹೊರತೆಗೆದರು. ಅದರಿಂದ ಕಳುಹಿಸಿದ ಸಂಕೇತಗಳು 160 km ದೂರ ಸಾಗಬಲ್ಲ ಶಕ್ತಿ ಹೊಂದಿದ್ದವು ದುರಾದೃಷ್ಟವಶಾತ್ ಸಂಪರ್ಕ ಸಾಧ್ಯವಾಗಲಿಲ್ಲ. ಗುಣಮಟ್ಟದ ಸಂಕೇತ ಸಿಗಬೇಕಾದರೆ ಎತ್ತರದ ಪ್ರದೇಶಕ್ಕೆ ಚಲಿಸಬೇಕಿತ್ತು. ಮರುದಿ ಸರ್ಬ್ ಸೇನೆ ಹಾಗೂ ಪೊಲೀಸ್ ರಿಗೆ ನೀವು ಬಿದ್ದ ಪೈಲಟ್ ನ್ನು ಹುಡುಕುವ ಕೆಲಸ ನಿಲ್ಲಿಸಬೇಕೆಂದು ಆದೇಶ ಬಂತು. -ಗ್ರೇಡಿ ಪಾಲಿಗೆ ಇದು ಅಪಾಯಕಾರಿಯಾಗಿತ್ತು, ಆಶ್ಚರ್ಯವಾಯಿತೇ!!!. ಇನ್ನು ಹುಡುಕಾಟದ ಕೆಲಸವನ್ನು ಅರೆಸೇನೆ ಹಾಗು ಕೆಲವು ಶಶಸ್ತ್ರ ಕ್ರಿಮಿನಲ್ ಗ್ಯಾಂಗ್ ಗಳು ನಡೆಸುತ್ತವೆ ಎಂದು ಇದರ ಅರ್ಥ. ಬೊಸ್ನಿಯಾದ ನೆಲ ಅಂದು ಅಂತಹ ಅರಾಜಕತೆಯನ್ನು ಕಂಡಿತ್ತು. ಅಕಸ್ಮಾತ್ ಇವರ ಕೈಗೆ ಸಿಕ್ಕು ಬಿದ್ದರೆ ಕಥೆ ಮುಗಿದಂತೆಯೇ. ಇವರು ತಮ್ಮ ಶತ್ರುಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಮುಗಿಸಬೇಕೆಂಬ ಮನಸ್ಥಿತಿ ಉಳ್ಳವರು. ಸೆರೆಸಿಕ್ಕ ಯುದ್ಧ ಕೈದಿಯ ಜೀವ ಉಳಿಸಬೇಕೆನ್ನುವ ಯಾವ ಯದ್ದಕಾಲದ ನಿಯಮ ಇವರಿಗಿರಲಿಲ್ಲ.

 ಓ-ಗ್ರೇಡಿ ಯಾರಿಗೂ ತಿಳಿಯದಂತೆ ರಾತ್ರಿ ಮಾತ್ರ ಚಲಿಸಲು ನಿರ್ಧರಿಸಿದರು. ಕಾಡಿನಲ್ಲಿ ಎರಡು ದಿನ ಇದ್ದು ಹಸಿವು ಹಾಗು ಬಾಯಾರಿಕೆ ಶುರುವಾಯಿತು. ಕಿಸೆಯಲ್ಲಿ ಉಳಿದಿದ್ದ 3 ಪಾಕೆಟ್ ನೀರು ಖಾಲಿಯಾಯಿತು. ಹಸಿವಿಗೆ ಎಲೆ,ಗೆಡ್ಡೆ ಹಾಗು ಇರುವೆಗಳನ್ನು ಕೂಡ ಸೇವಿಸಿದರುಮೂರನೇ ದಿನದ ಸಂಜೆ ಬಿದ್ದ ಸ್ವಲ್ಪ ಮಳೆ ಅವರ ದಾಹ ತೀರಿಸಿತು. ನಾಲ್ಕನೇ ದಿನ ಬೆಟ್ಟದತ್ತ ರಾತ್ರಿ ಚಲಿಸುತ್ತಿದ್ದಾಗ ಆಕಾಶದಲ್ಲಿ ಅಮೆರಿಕನ್ ಸೇನೆಯ ಮಿಗ್ ವಿಮಾನವೊಂದು ಕಾಣಿಸಿತು. ಆದರೆ ಸಂಪರ್ಕ ಸಾಧ್ಯವಾಗಲಿಲ್ಲ. ನೀರು-ಆಹಾರವಿಲ್ಲದೆ ದೇಹ ಶಕ್ತಿ ಗುಂದಿತ್ತು. ಸೇನೆಯಲ್ಲಿ ಪಡೆದ ಕಠಿಣ ತರಬೇತಿ ಮಾತ್ರ ಅವರನ್ನು ಜೀವಂತವಾಗಿಟ್ಟಿತು. ಇನ್ನು ಎತ್ತರದ ಬೆಟ್ಟದತ್ತ ನಡೆದರೆ ಮಾತ್ರ ಗುಣಮಟ್ಟದ ಸಂಕೇತ ಸಿಗುತಿತ್ತು. ಇನ್ನೂ ಇವರು ಬದುಕಿರುವ ವಿಷಯ ನ್ಯಾಟೊ ಸೇನೆಗೆ ಖಚಿತವಾಗಿರಲಿಲ್ಲ, ಅದರೆ ಮಾಹಿತಿ ಗೊತ್ತಿದ್ದ ಸರ್ಬ್ ಸೇನೆ ಹುಡುಕುತ್ತಿತ್ತು. ಪೈಲಟ್ ರೇಡಿಯೋ ಉಪಕರಣ ಕಳುಹಿಸುತಿದ್ದ ಸಿಗ್ನಲ್ ಗಳನ್ನು ಅವರು ಕೂಡ ಸ್ವೀಕರಿಸುವ ಸಂಭವವಿತ್ತು.

ಜೂನ್ ಎಂಟರಂದು ರಾತ್ರಿ ಕಷ್ಟಪಟ್ಟು ಪೈಲಟ್ ಬೆಟ್ಟದ ತುದಿಗೆ ಹತ್ತಿದ್ದರು. ರಾತ್ರಿ 1.12 ಸಮಯ, ಫ್ಲಾಶ್-ಮ್ಯಾನ್ ಗುಪ್ತನಾಮ ಹೊಂದಿದ್ದ ಲಾಂಗ್-ರೈಟ್ ಚಲಾಯಿಸುತ್ತಿದ್ದ ವಿಮಾನ ಮರ್ಕೋಜಿಕ್-ಗ್ರಾಡ್ ಬಳಿ ಹಾರುತಿತ್ತು. ಕಳೆದ ಆರು ದಿನಗಳಿಂದ -ಗ್ರೇಡಿಯಾ ಸುಳಿವು ಇರಲಿಲ್ಲ. ದೈನಂದಿನ ಹಾರಾಟದಂತೆ ಮೂರು ಗಂಟೆಯಿಂದ ಹಾರುತ್ತಿದ್ದ ವಿಮಾನದಲ್ಲಿ ಇಂಧನ ಮುಗಿದು ರಿಸರ್ವ್ ಆಗಿದ್ದರು ಕೂಡ, ಇನ್ನು ಸ್ವಲ್ಪ ಸಮಯ ಹುಡುಕಲು ನಿರ್ಧರಿಸಿದರು. ಇತ್ತ ಕೆಳಗಡೆಯಿಂದ ವಿಮಾನ ನೋಡಿದ -ಗ್ರೇಡಿ ಸಂಪರ್ಕಿಸಲು ಪ್ರಯತ್ನಿಸಿದರು. ಲಾಂಗ್-ರೈಟ್ರ Headphone ನಲ್ಲಿ "ನಾನು ಬಾಷರ್ ಮ್ಯಾನ್-52 ಮಾತನಾಡುತ್ತಿದ್ದೇನೆ'' ಎಂದು ಕೇಳಿದಾಗ ನಂಬಲು ಸಾಧ್ಯವಾಗಲೇ ಇಲ್ಲ. ಅದು ಪೈಲಟ್ ಓ-ಗ್ರೇಡಿಯ ಗುಪ್ತ ನಾಮ. ಲಾಂಗ್ ರೈಟ್ ಕೂಡಲೇ ವಿಷಯವನ್ನು ನ್ಯಾಟೋ ವಾಯುನೆಲೆಗೆ ತಿಳಿಸಿದರು. ಅಷ್ಟರಲ್ಲಿ ಇಂಧನ ಮುಗಿಯುತ್ತ ಬಂದಿದ್ದರಿಂದ ವಾಯುನೆಲೆಗೆ ಹಿಂತಿರುಗಲೇ ಬೇಕಾಯಿತು. ಕಾಡಿನಲ್ಲಿದ್ದ ಪೈಲಟ್ಗೆ ನ್ಯಾಟೋ ವಿಮಾನದೊಂದಿಗೆ ಸಂಪರ್ಕ ಸಾಧ್ಯವಾದ ವಿಷಯ ಸರ್ಬ್ ಸೇನೆಗೆ ತಿಳಿದು ಅವರು ಚುರುಕಾದರು. ಇತ್ತ ಲಂಡನ್ನಲ್ಲಿದ್ದ ನ್ಯಾಟೋ ಅಡ್ಮಿರಲ್ ಲೈಗ್ಟನ್ ಸ್ಮಿತ್ ರಿಗೆ ವಿಷಯ ತಿಳಿಯಿತು. ಕೂಡಲೇ ಅವರು "US- Kearsarge" ನಲ್ಲಿದ್ದ ಅಮೆರಿಕಾದ ನೌಕಾಸೇನೆಯ ಕರ್ನಲ್ ಮಾರ್ಟಿನ್ ಬರ್ನ್ಟ್ ರಿಗೆ ಕಾರ್ಯಾಚರಣೆ ಆರಂಭಿಸಲು ತಿಳಿಸಿದರು. ಯಾವುದೇ ಪೂರ್ವಸಿದ್ಧತೆಗಳು ಇಲ್ಲದಿದ್ದರೂ ತಕ್ಷಣದ ಕಾರ್ಯಾಚರಣೆ ಅಗತ್ಯವಾಗಿತ್ತು. ಯಾವುದೇ ಸಮಯದಲ್ಲಿ ಪೈಲಟ್ ಸರ್ಬ್ ಸೇನೆಯ ಕೈಗೆ ಸಿಕ್ಕಿ ಬೀಳುವ ಸಂಭವವಿತ್ತು.


.
ಬೆಳಿಗ್ಗೆ 5.05ಕ್ಕೆ ಎರಡು Sea Stallion ಹೆಲಿಕಾಪ್ಟರ್ನಲ್ಲಿ 43 ನೌಕಾಪಡೆಯ ಸ್ಪೆಷಲ್ ತಂಡ ಹೊರಟಿತ್ತು . ಬೆನ್ನಹಿಂದೆಯೇ ಎರಡು ಸೂಪರ್ ಕೋಬ್ರಾ ಹೆಲಿಕ್ಯಾಪ್ಟರ್ , ಹರಿಯೆರ್ ಜೆಟ್ ವಿಮಾನಗಳು ಹಾಗು ಟ್ಯಾಂಕ್ ನಿರೋಧಕ ವಿಮಾನಗಳು ಹೊರಟವು. ಹಗಲಿನ ಸಮಯದಲ್ಲಿ ಪೈಲಟ್ ನ್ನು ರಕ್ಷಿಸಲು ಬರುತ್ತಿರುವ ಹೆಲಿಕ್ಯಾಪ್ಟರ್ ಮೇಲೆ ಸರ್ಬ್ ಸೇನೆ ಸುಲಭವಾಗಿ ಧಾಳಿ ಮಾಡುವ ಸಂಭವವಿತ್ತು, ಅದಕ್ಕೆ ಇಷ್ಟು ವಿಮಾನಗಳ ವ್ಯೂಹ ರಚಿಸಿ
ಶತ್ರುಗಳ ನೋಟವನ್ನು ತಪ್ಪಿಸುತ್ತಾ -ಗ್ರಡಿ ಅಡಗಿದ್ದ ಸ್ಥಳಕ್ಕೆ ಹೆಲಿಕ್ಯಾಪ್ಟರ್ ತಲುಪಿದಾಗ ಸಮಯ ಬೆಳಿಗ್ಗೆ 6.42. 

ಜಿ.ಪಿ.ಎಸ್ (G.P.S) ಉಪಕರಣದ ಸಹಾಯದಿಂದ ತನ್ನ ಸ್ಥಾನ ತಿಳಿಸಿದ -ಗ್ರಡಿ, ತನ್ನ ಇರುವಿಕೆಯನ್ನು ತೋರಿಸಲು ಹೆಲಿಕ್ಯಾಪ್ಟರ್ ಹತ್ತಿರ ಬರುತ್ತಿದ್ದಂತೆಯೇ ಹಳದಿ ಬೆಳಕನ್ನು ಹೊತ್ತಿಸಿದರು. ಹೆಲಿಕಾಪ್ಟರ್ನಿಂದ ಇಳಿದ ವಿಶೇಷ ರಕ್ಷಣಾ ತಂಡದ ಸದಸ್ಯರು ಪೈಲಟ್ ನ್ನು ಹೆಲಿಕ್ಯಾಪ್ಟರ್ಗೆ ಹತ್ತಿಸಿದರು. ಒಂದು ವಾರದಿಂದ ಸರ್ಬ್ ಸೇನೆ ಹುಡುಕುತ್ತಿದ್ದ ಪೈಲಟ್ ನ್ನು ಕೇವಲ 7 ನಿಮಿಷದ ಹುಡುಕಿ ರಕ್ಷಿಸಿದರು. ಸುತ್ತಲೂ ಕಾದು ಕುಳಿತಿದ್ದ ಸರ್ಬ್ ಸೇನೆ ಹೆಲಿಕಾಪ್ಟರ್ನತ್ತ ಗುಂಡಿನ ಮಳೆಗೆರೆಯಿತುಕ್ಷಿಪಣಿಗಳ ರಾಡಾರ್ ಗಳಿಗೆ ಸಿಗದಂತೆ ಕೆಳಭಾಗದಲ್ಲಿ ವೇಗವಾಗಿ ಹಾರಿದ ಹೆಲಿಕ್ಯಾಪ್ಟರ್ 7.30 ಹೊತ್ತಿಗೆ ಸಮುದ್ರ ತೀರದಲ್ಲಿದ್ದ ವಿಮಾನ ವಾಹಕ ಹಡಗಿನಲ್ಲಿ ಇಳಿಯಿತು. ಯಾವುದೇ ಪ್ರಾಣಹಾಣಿಯಿಲ್ಲದೇ ಕಾರ್ಯಾಚರಣೆ ಯಶಸ್ವಿಯಾಯಿತು. ಯಾವುದೇ ಮಾಹಿತಿ ಇಲ್ಲದಿದ್ದರೂ ತನ್ನ ಪೈಲಟ್ ಬದುಕಿರಬಹುದೆಂಬ ಆಶಾಭಾವನೆ ಹಾಗೂ ತನ್ನ ರಕ್ಷಣೆಗೆ ತನ್ನವರು ಬಂದೆ ಬರುತ್ತಾರೆ ಎನ್ನುವ ನೀರಿಕ್ಷೆ ಸಾಫಲ್ಯ ಕಂಡಿತು.


ತನ್ನ ಯೊಧನೊಬ್ಬನನ್ನು ರಕ್ಷಿಸಲು ಸಾಧ್ಯವಾಗಿದ್ದಕ್ಕೆ ಅಮೆರಿಕಾ ಅತೀವ ಹೆಮ್ಮೆಪಟ್ಟಿತ್ತು. ತಮ್ಮ ಕೈಯಿಂದ ತಪ್ಪಿಸಿಕೊಂಡು ಪಾರಾದ ಪೈಲಟ್ ಕುರಿತು ಅಂದು ಸರ್ಬ್ ಸೇನೆಯಲ್ಲಿದ್ದ ಅಧಿಕಾರಿ ಹೇಳುವುದಿಷ್ಟು, ''ಒಬ್ಬ ಮನುಷ್ಯನಾಗಿ ನಾನು ಅವರ ಸಾಹಸವನ್ನು ಮೆಚ್ಚುತ್ತೇನೆ , ಆದರೆ ಕರ್ತ್ಯವ್ಯದ ವಿಷಯ ಬಂದಾಗ, ಇದು ನಮ್ಮದೇ ಲೋಪ. ಅವರಿದ್ದ ಸ್ಥಳದ ಇಂಚಿಂಚು ಮಾಹಿತಿ ನಮ್ಮಲ್ಲಿದ್ದರೂ ಕೂಡ ಹಿಡಿಯಲು ಸಾಧ್ಯವಾಗಲಿಲ್ಲ".

1989 ರಲ್ಲಿ ಅಮೆರಿಕನ್ ವಾಯುಸೇನೆಗೆ ಸೇರಿದ್ದ 51 ಹರೆಯದ ಸ್ಕಾಟ್--ಗ್ರಡಿ ಈಗ ನಿವೃತ್ತರಾಗಿ ಅಮೇರಿಕಾದಲ್ಲಿ ನೆಲೆಸಿದ್ದಾರೆ. ತಮ್ಮ ಸಾಹಸದ ಕುರಿತು "Return With HonorBasher Five-Two speaker" ಎಂಬ ಎರಡು ಪುಸ್ತಕ ಬರೆದಿದ್ದಾರೆ, ಹಾಗೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸಾವು ಬೆನ್ನ ಹಿಂದಿದ್ದರೂ, ಬದುಕಿ ಬರಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ. ತಮ್ಮ ಉಪನ್ಯಾಸಗಳಲ್ಲಿ ಕೊನೆಗೆ ಅವರು ಹೇಳುವುದಿಷ್ಟು '' Never Give Up''!!!

Friday, September 22, 2017

ಹತ್ತು ಕೋಟಿಯಾದರೇನು? ಸಿದ್ದ! ಲಕ್ಷ ಕೋಟಿಯಾದರೇನು ಸಿದ್ದ! ನಾವು ನುಂಗೊದಂತು ಶತಃಸಿದ್ದ!!

                                                           ದೇವರಾಜಾರಸ್.ಕಂ  ಮಾರಾಟಕ್ಕಿದೆ


ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ 'ಭೂಸುಧಾರಣೆಯ ಹರಿಕಾರ' ಎಂದು ಕರೆಯಲ್ಪಡುವವರು ಡಿ.ದೇವರಾಜ್ ಅರಸ್. ಅದುವರೆಗಿನ ಅನೇಕ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದ ಹಿಂದುಳಿದ-ಶೋಷಿತ ವರ್ಗಗಳಿಗಾಗಿ, ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದ ಇವರು ಹಿಂದುಳಿದ ವರ್ಗಗಳ ಹರಿಕಾರರೆಂದು ಹೆಸರಾದವರು. ಮೈಸೂರಿನ ಕಲ್ಲಹಳ್ಳಿಯಲ್ಲಿ 20-08-1915 ರಂದು ಜನಿಸಿದ ಅರಸ್, ಎಸ್.ನಿಜಲಿಂಗಪ್ಪ ನಂತರ ಅತಿ ಹೆಚ್ಚು ಅವಧಿಗೆ (1972-80) ಮುಖ್ಯಮಂತ್ರಿಯಾದವರು. ವೃಕ್ಷ ಸಂರಕ್ಷಣಾ ಯೋಜನೆ, ಜೀತ ಪದ್ಧತಿ ನಿಷೇಧ, ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಮೊದಲಾದವನ್ನು ಜಾರಿಗೆ ತಂದು ಜನಮಾನಸದಲ್ಲಿ ನೆಲೆಯಾದರು. ಇಂದು ಬೆಂಗಳೂರಿನಲ್ಲಿ ಅನೇಕ ವಿದೇಶಿ ಕಂಪೆನಿಗಳು ಇರುವ, ರಾಜ್ಯಕ್ಕೆ ಕೊಟ್ಯಾಂತರ ರೂ. ಆದಾಯ ನೀಡುತ್ತಿರುವ ಇಲೆಕ್ಟ್ರಾನಿಕ್ ಸಿಟಿಯ ನಿರ್ಮಾತೃ. ಸ್ವಪಕ್ಷಿಯರಿಂದಲೇ ವಿರೋಧವಿದ್ದರೂ, ಜಾರಿಗೆ ತಂದ  ಭೂಸುಧಾರಣಾ ಕಾಯಿದೆ ಹಾಗೂ ಅದರ ವ್ಯಾಜ್ಯ ವನ್ನು ಬಗೆಹರಿಸಲು ಭೂಸುಧಾರಣಾ ನ್ಯಾಯಮಂಡಲಿ ಸ್ಥಾಪಿಸಿದರು. ಅ ಕಾಲದಲ್ಲಿ ಕರ್ನಾಟಕ ಕಾಂಗ್ರೆಸ್ ನ ಬಹುದೊಡ್ಡ ನಾಯಕರಾಗಿ ಮೆರೆದರೂ ಕೊನೆಗೆ ಇಂದಿರಾಗಾಂಧಿಯ ವಿರೋಧ ಕಟ್ಟಿಕೊಂಡು ರಾಜಕೀಯವಾಗಿ ಮೂಲೆಗುಂಪಾದರು. ಕೊನೆಗೆ 1982 ರ ಜೂನ್ 6 ರಂದು ವಿಧಿವಶರಾದರು.


1915 ರಲ್ಲಿ ಜನಿಸಿದ ಅರಸರ ಜನ್ಮ ಶತಮಾನದ ಅಚರಣೆಗೆ, ಅವರ ಹಾದಿಯಲ್ಲಿಯೇ ನಡೆಯಬೇಕೆಂದುಕೊಂಡಿರುವ ಇಂದಿನ ಘನ(!) ಸರ್ಕಾರ, ಅರಸರ ಕುರಿತಾಗಿ ಸಮಗ್ರ ಮಾಹಿತಿಯನ್ನು ಒಳಗೊಂಡ ವೆಬ್ಸೈಟ್ ಒಂದನ್ನು ಆರಂಭಿಸಿತು. ಜೂನ್ 6ರಂದು ಇದನ್ನು ಲೋಕಾರ್ಪಣೆ ಮಾಡಿದವರು, ಘನ ಸರ್ಕಾರದ ಸಮಾಜಕಲ್ಯಾಣ ಮಂತ್ರಿಗಳು. ಈಗ ಆಗಸ್ಟ್ 17, ನಾಳೆ ಅರಸರ ಪುಣ್ಯತಿಥಿ. ಅರಸರ ನೆನಪಿಗೆ ಅರಂಭಿಸಿದ "www.devrajurs.com" ಎನ್ನುವ ನಾಮಪದ ಈಗ ಮಾರಾಟಕ್ಕೆ ಇದೆ, ಅದು ಕೂಡ ಕೇವಲ 577 ರೂ ಗಳಿಗೆ. ಎಕರೆಗಟ್ಟಲೆ ಭೂಮಿಯನ್ನು ರೈತರಿಗೆ ಒದಗಿಸಿದ ಅರಸರಿಗೆ ಅಂತರ್ಜಾಲದಲ್ಲೊಂದು ಜಾಗವಿಲ್ಲ. ದೇವರಾಜಾರಸ್.ಕಂ ಎನ್ನುವ ಜಾಲತಾಣ,ಇಂದು ಅಂತರ್ಜಾಲದಲ್ಲಿ ಕಾಣಿಸುತ್ತಿಲ್ಲ.ಅಲ್ಲಿಗೆ ಅರಸು ಅವರ ಸಾಧನೆಯನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಲು ಸರ್ಕಾರದ ಪ್ರಯತ್ನ ವ್ಯರ್ಥವಾಯಿತು. ಜಾಲತಾಣ ಸ್ಥಗಿತಗೊಂಡರೆ ಹೊಗಲೀ, ಕನಿಷ್ಟ ಪಕ್ಷ  ಹೆಸರನ್ನಾದರು (Domain Name)  ಉಳಿಸಿಕೊಳ್ಳುವ ಕಾಳಜಿ ತೊರಲಿಲ್ಲ.ತಲೆಬರಹಕ್ಕೂ -ಲೇಖನಕ್ಕೂ ಸಂಬಂಧವಿಲ್ಲ ಅಂದುಕೊಳ್ಳಬೇಡಿ; ಸಂಬಂಧ ಇದೆ. ವಾರದ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಲತಾಣ ಕಾಲಕಾಲಕ್ಕೆ ಅಪ್ಡೇಟ್ (Update) ಅಗುತ್ತಿಲ್ಲ ಎಂದು ಚರ್ಚೆಯಾಯಿತು (ಅದು ಕೂಡ ಎರಡು ವರ್ಷಗಳಿಂದ).  ಆಗ ಪ್ರವಾಸೋದ್ಯಮ ಇಲಾಖೆಯ ಆಧಿಕಾರಿಗಳು ಉತ್ತರಿಸಿ, "ಜಾಲತಾಣವನ್ನು ಹೊಸದಾಗಿ ವಿನ್ಯಾಸಗೊಳಿಸಲು ಸುಮಾರು 10 ಕೋಟಿ ರೂಪಾಯಿಗಳ ಯೋಜನೆಯನ್ನು ರೂಪಿಸಿದ್ದು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ, ಅದೇಶ ಬಂದರೆ 2 ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಲತಾಣವನ್ನು ಮರುವಿನ್ಯಾಸಗೊಳಿಸಲಾಗುವುದು". ಇದು ನಮ್ಮ ನಾಡಿನ ಸಂಸ್ಕೃತಿಯನ್ನು, ಪ್ರಸಿದ್ಧ ಸ್ಥಳಗಳನ್ನು ವಿಶ್ವಕ್ಕೆ ಪರಿಚಯಿಸಲು ಸಂಪರ್ಕ ಸೇತುವಾಗುವ ಜಾಲತಾಣದ ಸ್ಥಿತಿಗತಿ. ಅಂದ ಹಾಗೆ ಒಂದು ವೆಬ್ಸೈಟ್ ಆರಂಭಕ್ಕೆ ಹತ್ತು ಕೋಟಿ ಬೇಕಾ? ಎಂಬ ಪ್ರಶ್ನೆಗೆ ಉತ್ತರ ಮೇಲೆಯೇ ನೀಡಿದ್ದೇನೆ.