Sunday, April 24, 2016

ಕಾಂಗ್ರೆಸ್ ಮುಕ್ತ ಸುಳ್ಯದಲ್ಲಿ ಅರಳಿದ ಕಮಲ

                                 








                     ಸುಳ್ಯ- ಇಂದು ಇದು ರಾಜಕೀಯವಾಗಿ ದಕ್ಷಿಣಕನ್ನಡಕ್ಕೆ ಸೇರಿದರೂ, ಇನ್ನೂ ಕೊಡಗಿನ ಕೆಲವು ಸಂಪ್ರದಾಯವನ್ನು ಉಳಿಸಿಕೊಂಡು ಬಂದ ಪ್ರದೇಶ. ಕರ್ನಾಟಕದ ಪ್ರಮುಖ ತೀರ್ಥಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಹೊಂದಿರುವ ತಾಲೂಕು. ಅತ್ತ ಮಂಗಳೂರಿನಂತೆ ಸಮತಟ್ಟಾಗಿರದೆ , ಕೊಡಗಿನಂತೆ ಸಣ್ಣ ಬೆಟ್ಟ-ಗುಡ್ಡ ವನ್ನು ಹೊಂದಿರೋ ಪ್ರದೇಶ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹಸಿರು ಸಿರಿಯಲ್ಲಿ  ಮಲಗಿರುವ ಊರು. ಇಲ್ಲಿನ ಜನ ಸ್ವಾಭಿಮಾನಿಗಳು , 1837 ರಲ್ಲಿ ನಡೆದ ಅಮರ ಸುಳ್ಯದ ರೈತ ದಂಗೆ ಇದಕ್ಕೆ ಸಾಕ್ಷಿ. ಅಂದು ತಮ್ಮನಾಳುತ್ತಿದ್ದ ಬ್ರಿಟಿಷರ ವಿರುದ್ದ ಕಂದಾಯ ಪಾವತಿ , ಕೊಡಗಿನ ಅರಸ ಚಿಕ್ಕವೀರರಾಜೇಂದ್ರನ ಪದಚ್ಯುತಿ ಕಾರಣಕ್ಕಾಗಿ ದಂಗೆ ಎದ್ದ ರೈತರು ಮಂಗಳೂರಿಗೆ ಮುತ್ತಿಗೆ ಹಾಕಿದ್ದರು. ಮೊದಲು ಮಂಗಳೂರನ್ನು ಗೆದ್ದರೂ ನಂತರ ಆಂಗ್ಲರಿಗೆ ಬಿಟ್ಟು ಕೊಡಬೇಕಾಯಿತು.


                  ಸುಳ್ಯದ ಜನ ಪ್ರಜ್ಞಾವಂತರು , ದೇಶದ ಪ್ರತಿ ವಿದ್ಯಮಾನವನ್ನು ಸೂಕ್ಷ್ಮ ಕಣ್ಣಿನಿಂದಲೇ ಗಮನಿಸಿ ತಕ್ಕನಾಗಿ ಪ್ರತಿಸ್ಪಂದಿಸುತ್ತಾರೆ. ೫೦ ವರ್ಷದ ಹಿಂದೆ ಮಲೇರಿಯಾ ಮೊದಲಾದ ರೋಗಗಳಿಂದ , ಬಡತನದಿಂದ ಬಳಲುತ್ತಿದ್ದ ಊರು ಈಗ ಬದಲಾಗಿದೆ .  ಬಹುತೇಕ ಗ್ರಾಮೀಣ ಪ್ರದೇಶವನ್ನು ಹೊಂದಿದ್ದರೂ ಕೂಡ 86.35% ರಷ್ಟು ಸಾಕ್ಷರತೆಯನ್ನು ಹೊಂದಿದೆ. ಅಧುನಿಕ ಸುಳ್ಯದ ನಿರ್ಮಾತೃ ದಿ. ಕುರುಂಜಿ ವೆಂಕಟರಮಣ ಗೌಡರು ಕಟ್ಟಿ ಬೆಳೆಸಿದ ಕೆ.ವಿ.ಜಿ ಕ್ಯಾಂಪಸ್ನಲ್ಲಿ ಎಲ್ಲ ತೆರನಾದ ಶಿಕ್ಷಣದ ವ್ಯವಸ್ಥೆ ಇದೆ. ಇಂಜಿನಿಯರಿಂಗ್ , ಮೆಡಿಕಲ್ , ಆಯುರ್ವೇದ, ದಂತ ವೈದ್ಯಕೀಯ ಕಾಲೇಜ್ ಇದೆ. ೩೦೦೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.  ಕೆಲವರಲ್ಲಿ ಇನ್ನು ಒಂದು ಭಾವನೆಯಿದೆ ,ಏನೆಂದರೆ ಬುದ್ದಿವಂತರು ಅಥವಾ ಬುದ್ದಿಜೀವಿಗಳ(?) ಪಕ್ಷ ಕಾಂಗ್ರೆಸ್ ಎಂದು. ಅದರೆ ಇಷ್ಟೆಲ್ಲಾ ಶೈಕ್ಷಣಿಕವಾಗಿ ಮುಂದಿರುವ ಊರಲ್ಲಿ ಇಂದು ಕಮಲ ಅರಳಿದೆ ಎಂದರೆ ಅದಕ್ಕೆ ಸುಳ್ಯದ ನಾಗರಿಕರ ಅಜ್ಞಾನ ಕಾರಣವಲ್ಲ ಬದಲಾಗಿ , ದೇಶದ ಮೇಲಿರುವ ಅಭಿಮಾನ ಅವರನ್ನು ಬಿ.ಜೆ.ಪಿ ಯತ್ತ ವಾಲುವಂತೆ ಮಾಡಿದೆ. ಅದಕ್ಕೆ ಇಷ್ಟೆಲ್ಲಾ ಹೇಳಬೇಕಾಗಿ ಬಂತು.


                   ಮೊನ್ನೆ ನಡೆದ ಜಿ. ಪಂ , ತಾ. ಪಂ ಚುನಾವಣೆಗಳಲ್ಲಿ ಬಿ.ಜೆ.ಪಿ ಮತ್ತೆ ಜಯಭೇರಿ ಭಾರಿಸಿತು. ಜಿ.ಪಂ ನ 4 ಕ್ಷೇತ್ರದಲ್ಲಿ 4 ಹಾಗು ತಾ.ಪಂನ 13 ಕ್ಷೇತ್ರದಲ್ಲಿ 9 ರಲ್ಲಿ ಜಯಶಾಲಿ ಆಯಿತು. ಅಲ್ಲದೆ 28 ಗ್ರಾಂ.ಪ ನಲ್ಲಿ  23 ನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಲ್ಲದೆ ಸುಳ್ಯ ಪಟ್ಟಣ ಪಂಚಾಯತ್ ಹಾಗು ಬಹುತೇಕ ಸಹಕಾರಿ ಬ್ಯಾಂಕ್ ಹೀಗೆ ಸಂಪೂರ್ಣ ಕಮಲಮಯವಾಗಿದೆ . ಮೀಸಲು ಕ್ಷೇತ್ರವಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಸತತ 5 ಭಾರಿ ಶಾಸಕ ಎಸ್. ಅಂಗಾರರು ಪ್ರತಿನಿಧಿಸುತ್ತಿದ್ದಾರೆ. 1983 ರಲ್ಲಿ ಬಾಕಿಲ ಹುಕ್ರಪ್ಪರು ಮೊದಲ ಭಾರಿಗೆ ಬಿ.ಜೆ.ಪಿ ಯಿಂದ ಆಯ್ಕೆಯಾದರು. ನಂತರ ಮತ್ತೆ ಕಾಂಗ್ರೇಸ್ ವಶವಾದ ಕ್ಷೇತ್ರವನ್ನು 1994 ರಲ್ಲಿ ಗೆದ್ದ ಅಂಗಾರರು ನಂತರ ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ.


             2013 ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅದಿಕಾರಕ್ಕೆ ಬಂದಿತ್ತು. ಸ್ವಜನ ಪಕ್ಷಪಾತ,   ಭ್ರಷ್ಟಚಾರ , ಹಗರಣಗಲಿಂದಾಗಿ ಕರಾವಳಿ ಕರ್ನಾಟಕದಲ್ಲಿ ಬಿ.ಜೆ.ಪಿ ಮಕಾಡೆ ಮಲಗಿತ್ತು. ದಕ್ಷಿಣ ಕನ್ನಡದ ವಿಧಾನಸಭಾ 8 ಕ್ಷೇತ್ರದಲ್ಲಿ 7 ಕಾಂಗ್ರೆಸ್ ಪಾಲಾಗಿತ್ತು. ಆದರೆ ಸುಳ್ಯ ವಿಧಾನಸಭಾ ಕ್ಷೇತ್ರ  'ಕೈ'ಗೆಟಕಲೇ ಇಲ್ಲ. 1000ಕ್ಕೂ ಹೆಚ್ಚು ಮತಗಳಿಂದ ಸುಳ್ಯದಲ್ಲಿ ಗೆದ್ದ ಬಿ.ಜೆ.ಪಿ ಕ್ಲೀನ್ ಸ್ವೀಪ್ ಮಾಡುವ ಕಾಂಗ್ರೆಸ್ ಆಸೆಗೆ ತಣ್ಣಿರೇರಚಿತು. ಅಂಗಾರರ ಸರಳ ಸ್ವಭಾವ, ಭ್ರಷ್ಟಾಚಾರ ಮುಕ್ತ ಬದುಕು ಅವರನ್ನು 22 ವರ್ಷಗಳಿಂದ ಶಾಸಕರನ್ನಾಗಿ ಮಾಡಿದೆ. ಅಂತೆಯೇ ರಾಜ್ಯದ ಮಾಜಿ ಮುಖ್ಯಮಂತ್ರಿ , ಹಾಲಿ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡರ ಹುಟ್ಟಿದ ಊರು. ಹಾಗೇ ಮಾಜಿ ಇಂಧನ ಸಚಿವೆ , ಉಡುಪಿ- ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ ಯವರ ತವರೂರು ಸುಳ್ಯ. ಅಗೊಮ್ಮೆ-ಈಗೊಮ್ಮೆ  ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟರು ಸಹ ಬಿ.ಜೆ.ಪಿ ಕೈ ಬಿಟ್ಟಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ರಿಗೆ 25,000 ಮತಗಳ ಮುನ್ನಡೆ ದೊರಕಿಸಿಕೊಟ್ಟ ಸುಳ್ಯ ಕಾಂಗ್ರೆಸ್ ನಾಯಕರ ಪಾಲಿಗೆ ಬಿಸಿತುಪ್ಪವಾಗಿದೆ. ಸುಳ್ಯದ ಈ ವಿಜಯಗಳಿಗೆ ಬಿ.ಜೆ.ಪಿ  ಮಾತೃಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾತ್ರ ಬಹಳವಿದೆ . ಸಂಘದ ಶಾಖೆಗಳ ಮೂಲಕ ಇಂದಿಗೂ ಯುವಜನರಲ್ಲಿ ರಾಷ್ರಭಕ್ತಿ ಮೂಡಿಸುತಿದೆ.


          ಯಾವ ಟಿಪ್ಪು ಜಯಂತಿಯ ಕಾರಣಕ್ಕೆ ಕೊಡಗಿನಲ್ಲಿ ಮೊನ್ನೆ ಬಿ.ಜೆ.ಪಿ ಗೆ ಜನ ಮತ ಕೊಟ್ಟರೋ , ಅದರ ಪ್ರಭಾವ ಸುಳ್ಯದ ಮೇಲಾಗಿದೆ.  ಏಕೆಂದರೆ ಒಂದು ಕಾಲದಲ್ಲಿ ಟಿಪ್ಪು ಕೂಡ ಸುಳ್ಯದ ಮುಖಾಂತರ ದಂಡಯಾತ್ರೆ ಮಾಡಿದವನೆ . ತನ್ನ ನೆತ್ತಿ ಮೇಲಿರುವ ಕೊಡಗಿನಂತೆ ಎಲ್ಲ ಕಡೆ ಬಿ.ಜೆ.ಪಿ ಸದಸ್ಯರನ್ನು ಹೊಂದಿರುವ ಸುಳ್ಯ ಕಾಂಗ್ರೆಸ್ ಮುಕ್ತವಾಗುವತ್ತ ಹೊರಟಿದೆ. ಎಂದೋ ನಡೆಯುವ ಬಂದ್ ಗಳನ್ನೂ ಗಲಭೆಯೇನೋ ಎಂಬಂತೆ ಬಿಂಬಿಸುವವರ ಮದ್ಯೆ ,  ಬಿ.ಜೆ.ಪಿ ಕೊಮುವಾದಿಯಂತೆ , ಜಾತಿವಾದಿಯಂತೆ ಎನ್ನುವ ಅಂತೆ ಕಂತೆಗಳ ನಡುವೆ ಸುಳ್ಯ ನಿಶ್ಚಿಂತೆಯಾಗಿದೆ. ದೆಹಲಿಯ ಆಗು-ಹೋಗುಗಳಿಗೆ ಧ್ವನಿಯಾಗುತ್ತ



                                                                                                         -Tharanatha Sona

Friday, February 12, 2016

ಹಿಂದೂಸ್ತಾನವು ಎಂದು ಮರೆಯದ ಭಾರತರತ್ನ

           "ಹಿಂದೂಸ್ತಾನವು ಎಂದೂ ಮರೆಯದ ಭಾರತರತ್ನವು ಜನ್ನಿಸಲಿ, ಈ ಕನ್ನಡ ಮಾತೆಯ ಮಡಿಲಲ್ಲಿ " - ಅಮೃತಘಳಿಗೆ ಚಿತ್ರದ ಈ ಹಾಡನ್ನು ನಾವೆಲ್ಲ ಕೇಳಿದ್ದೇವೆ. ಅದರಂತೆ ನಮ್ಮ ಭಾರತಮಾತೆಯ ಮಡಿಲಲ್ಲಿ ಇಂಥ ಸಾವಿರಾರು ರತ್ನಗಳು ಸಾವಿರಾರು ವರ್ಷಗಳಿಂದ ಜನಿಸುತ್ತಿದ್ದಾರೆ. ಮುಂದೆಯೂ ಜನಿಸಲಿದ್ದಾರೆ. ಇಂತಹ  ರತ್ನಗಳನ್ನು ಗೌರವಿಸಲು 1954 ರಲ್ಲಿ ಕೇಂದ್ರಸರ್ಕಾರ ಭಾರತರತ್ನ ಪ್ರಶಸ್ತಿ ಸ್ಥಾಪಿಸಿತು.

            ಅಮೆರಿಕಾದ  "Presidential Medal  of  Freedom"  ಮತ್ತು   "Congressional Gold Medal"  ಹಾಗೆ  ಇಂಗ್ಲೆಂಡ್ನ "George Cross " ಮೊದಲಾದ ಅತ್ತ್ಯುತ್ತಮ ನಾಗರೀಕ ಪ್ರಶಸ್ತಿಯಂತೆ ಭಾರತರತ್ನ ಭಾರತದ ಅತಿ ದೊಡ್ಡ ನಾಗರೀಕ ಪ್ರಶಸ್ತಿ. ಇದು ಕಲೆ, ಸಾಹಿತ್ಯ,ವಿಜ್ಞಾನ ಹಾಗೂ ಸಮಾಜ ಸೇವೆ ಈ ಸಂಗತಿಗಳಲ್ಲಿ ವಿಶೇಷ ಸಾಧನೆಮಾಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ( 2011 ರಲ್ಲಿ ಇದಕ್ಕೆ ತಿದ್ದುಪಡಿ ತಂದು ಯಾವುದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿ ಎನ್ನಲಾಗಿದೆ).  ಜನವರಿ 2, 1954 ರಲ್ಲಿ ರಾಷ್ಟ್ರಪತಿಗಳ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿ ಭಾರತರತ್ನ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಸ್ಥಾಪಿಸಲಾಗಿದೆ ಎಂದು ಘೋಷಿಸಿದರು.ಅಂತೆಯೇ C. ರಾಜಗೋಪಾಲಚಾರಿ ,ಸರ್ C.V  ರಾಮನ್  ಮತ್ತು ಸರ್ವೆಪಲ್ಲಿ ರಾಧಾಕೃಷ್ಣನ್ ಪ್ರಥಮ ಪುರಸ್ಕೃತರಾದರು . ಮರುವರ್ಷ 1955 ರಲ್ಲಿ ಪದ್ಮವಿಭೂಷಣವನ್ನು     ಪದ್ಮವಿಭೂಷಣ, ಪದ್ಮಭೂಷಣ ಹಾಗು ಪದ್ಮಶ್ರೀ ಎಂದು ವಿಂಘಡಿಸಲಾಯಿತು .
ಪ್ರಶಸ್ತಿಯ ವಿಶೇಷತೆಗಳು:- 
             ಸಾಮಾನ್ಯವಾಗಿ ಜನವರಿಯಲ್ಲಿ ಪ್ರಶಸ್ತಿಗೆ ಆಯ್ಕೆಯಾದವರನ್ನು ಘೋಷಿಸಲಾಗುತ್ತದೆ, ಪ್ರಧಾನಮಂತ್ರಿಗಳು ರಾಷ್ಟ್ರಪತಿಗಳಿಗೆ  ಹೆಸರನ್ನೂ ಸೂಚಿಸುತ್ತಾರೆ ರಾಷ್ಟ್ರಪತಿಗಳು ಅನುಮೋದಿಸುತ್ತಾರೆ. ನಿಯಮದಂತೆ ವರ್ಷಕ್ಕೆ 3ರಂತೆ ಪ್ರಶಸ್ತಿ ನೀಡಬಹುದಾದರೂ 1999ರಲ್ಲಿ 4 ಜನ ಆಯ್ಕೆಯಾಗಿದ್ದರು. ಪ್ರಶಸ್ತಿಯೂ ಪ್ರಮಾಣಪತ್ರ , ಪದಕ ಹಾಗು ನಗದನ್ನು ಒಳಗೊಂಡಿದೆ. ಇತ್ತೀಚಿನ ವರ್ಷದಲ್ಲಿ  ನಗದು ಮೊತ್ತ 2,57,732 ರೂ ಆಗಿತ್ತು . ಪದಕವನ್ನು ಕೊಲ್ಕತ್ತಾದ ಸರ್ಕಾರೀ ಟಂಕಶಾಲೆ ಯಲ್ಲಿ ತಯಾರಿಸಲಾಗುತ್ತದೆ. ಪದಕವು  ಅಶ್ವತ್ಥ ಮರದ ಎಲೆಯ ಆಕಾರದಲ್ಲಿ ಇರುತ್ತದೆ. 5.8cm  ಎತ್ತರ 4.7cm ಅಗಲ ಹಾಗು 3.1mm ದಪ್ಪವಿರುತ್ತದೆ. ಪದಕದ ಒಂದು ಬದಿ ಸೂರ್ಯನ ಸಂಕೇತವಿದ್ದು ಭಾರತ ಎಂದು ಹಾಗೂ ಇನ್ನೊಂದು ಬದಿ 4 ಸಿಂಹಗಳ ಲಾಂಛನವಿದ್ದು ಸತ್ಯಮೇವ ಜಯತೇ ಎಂದು ಬರೆದಿರುತ್ತಾರೆ ಮತ್ತು ಅಕ್ಷರಗಳು ದೇವನಾಗರಿ ಲಿಪಿಯಲ್ಲಿ ಇರುತ್ತದೆ.  ಪದಕವು ಬೆಳ್ಳಿಯಿಂದ ತಯಾರಾಗಿದ್ದು, ನಡುವೆ ಪ್ಲಾಟಿನಂನಿಂದ ಸಂಕೇತ ಕೊರೆಯುತ್ತಾರೆ. 

           ಪ್ರಶಸ್ತಿಯನ್ನು ರಾಷ್ಟ್ರಪತಿಭವನದಲ್ಲಿ ಪ್ರಧಾನಮಾಡಲಾಗುತ್ತದೆ. ರಾಷ್ಟ್ರಪತಿಗಳಿಗೆ ಸಂವಿಧಾನದಲ್ಲಿ ಮೊದಲನೇ ಸ್ಥಾನಮಾನವಿದ್ದಂತೆ  ಭಾರತರತ್ನ ವಿಜೇತರಿಗೆ 7A ಸ್ಥಾನವಿರುತ್ತದೆ. ಅಂತೆಯೇ ದೇಸಿ ವಿಮಾನದಲ್ಲಿ ಉಚಿತ ಪ್ರಯಾಣ, ವಿದೇಶಿ ಪ್ರವಾಸಕ್ಕೆ ರಾಜತಾಂತ್ರಿಕ ಪಾಸ್ಪೋರ್ಟ್, V.I.P ಸ್ಥಾನಮಾನ ದೊರೆಯುತ್ತದೆ. ಇವರು ಯಾವ ರಾಜ್ಯದಲ್ಲಿ ವಾಸ್ತವ್ಯಹೂಡುತ್ತಾರೊ ಅ ರಾಜ್ಯಕ್ಕೆ ಇವರು ವಿಶೇಷ ಅತಿಥಿಯಾಗಿರುತ್ತಾರೆ. 

            ಇಂದಿನವರೆಗೆ 45 ಮಂದಿ ಗಣ್ಯರು ಭಾರತರತ್ನ ಪಡೆದಿರುತ್ತಾರೆ . ಇವರಲ್ಲಿ ಇಬ್ಬರು ವಿದೇಶಿಯರು ಹಾಗು 12 ಮಂದಿಗೆ ಮರಣೋತ್ತರವಾಗಿ ನೀಡಲಾಗಿದೆ.  ಕ್ರಿಕೆಟ್ ಲೋಕದ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಇದನ್ನು ಪಡೆದ ಅತಿ ಕಿರಿಯರು . ಇಂಥಹ ಮೌಲ್ಯಯುತ ಪ್ರಶಸ್ತಿ ವಿವಾದಗಳಿಂದ ಮುಕ್ತವಾಗಿಲ್ಲ. ಮಹಾತ್ಮಾ ಗಾಂಧಿ, ವಿಕ್ರಮ್ ಸಾರಾಭಾಯಿ , ಹೋಮಿ ಬಾಬಾ ಮೊದಲಾದ ಸಾಧಕರಿಗೆ ಪ್ರಶಸ್ತಿ ಸಿಗದಿರುವುದು ಇನ್ನು ವಿಪರ್ಯಾಸವಾಗಿದೆ . ನೆಹರೂ ಹಾಗು ಇಂದಿರಾ ಗಾಂಧಿ ತಮಗೆ ತಾವೇ ಭಾರತರತ್ನರಾದರು. ಅಂತೆಯೇ 1976ರಲ್ಲಿ ತಮಿಳುನಾಡಿನ ರಾಜಕಾರಣಿ ಕಾಂಗ್ರೆಸ್ಸ್ ನಾಯಕ K. ಕಾಮರಾಜ್ ಗೆ ಮರಣೋತ್ತರವಾಗಿ, 1988 ರಲ್ಲಿ ಚಿತ್ರನಟ ರಾಜಕಾರಣಿ M.G.R ಗೆ ಮರಣೋತ್ತರವಾಗಿ ನೀಡಲಾಯಿತು . ತಮಿಳುನಾಡು ವಿಧಾನಸಭೆ ಚುನಾವಣೆಗೆ ಮೊದಲು ನೀಡಿದ ಈ ಎರಡು  ಪ್ರಶಸ್ತಿಗಳು  ರಾಜಕೀಯ ಕಲ್ಲೋಲಕ್ಕೆ ಕಾರಣವಾದವು . ಅಂಬೇಡ್ಕರ್(1990) ಹಾಗೂ  ವಲ್ಲಭಬಾಯಿ ಪಟೇಲರಿಗೆ(1991) ಕೊಟ್ಟು ದೇಶ ಕಟ್ಟುವಿಕೆಯಲ್ಲಿ ಇವರು ಮಾಡಿದ ಸೇವೆಗಳನ್ನು 40 ವರ್ಷದ ನಂತರ ಅರಿತದ್ದು ಮತ್ತೊಂದು ವಿವಾದಕ್ಕೆ ದಾರಿಮಾಡಿತು.

 ಭಾರತರತ್ನದ ಅತೀ ದೊಡ್ಡ ಕಪ್ಪುಮಸಿ ಎಂದರೆ ನೇತಾಜಿ ಸುಭಾಷ್ಚಂದ್ರ ಬೋಸ್ ರ ಪ್ರಕರಣ . 1992 ರಲ್ಲಿ ಪ್ರಶಸ್ತಿ ಘೋಷಿಸಿದ್ದ ತಕ್ಷಣ ಅನೇಕ ವಿವಾದಗಳು ಎದ್ದವು. ಸ್ವಾತಂತ್ರ್ಯ ಹೋರಾಟದಲ್ಲಿ ಬೋಸ್ ರ ಕೊಡುಗೆಯನ್ನು ಇಷ್ಟು ಕಾಲ ಪರಿಗಣಿಸದೆ ಇದ್ದದು ಹಾಗು ಅವರ ಮರಣ ದಿನಾಂಕ 18-08-1945 ಎಂದು ಪರಿಗಣಿಸಿದ್ದು ವಿವಾದಕ್ಕೆ ಕಾರಣವಾಯಿತು. ಅಲ್ಲಿಂದ ಇದು ಕೋರ್ಟ್ ಮೆಟ್ಟಿಲೇರಿ ಕೊನೆಗೆ 1997 ರವರೆಗೆ ಪ್ರಶಸ್ತಿ ರದ್ದು ಮಾಡಲಾಯಿತು. ಹಾಗೆ ಬೋಸರು ಭಾರತರತ್ನದಿಂದ ವಂಚಿತರಾದರು. ಬಹುಶಃ ಅವರು ಭಾರತ ರತ್ನಕ್ಕಿಂತಲೂ ಮಿಗಿಲಾದ ವ್ಯಕ್ತಿತ್ವ ಹೊಂದಿದರು . ಮುಂದೆ 2013ರಲ್ಲಿ ದ್ಯಾನ್ಚಂದ್ ರನ್ನು ಕಡೆಗಣಿಸಿ ಸಚಿನ್ಗೆ ನೀಡಿದ್ದು ಸಣ್ಣ ಅಸಮಾಧಾನಕ್ಕೆ ಕಾರಣವಾಯಿತು. 


                                                                                          -Tharantha Sona

Sunday, September 6, 2015

ಪ್ಲಿಪ್ಕಾರ್ಟ ಹೆಜ್ಜೆ ಗುರುತು

   
       ಆಧುನಿಕ ಜಗತ್ತಿನ ಆವಿಷ್ಕಾರಗಳಲ್ಲಿ ಅಂತರ್ಜಾಲವು ಒಂದು. ನಮ್ಮ ದೈನಂದಿನ  ಅಗತ್ಯಗಳಿಗೆ ನಾವು ಅಂತರ್ಜಾಲವನ್ನು ಅವಲಂಬಿಸಿದ್ದೇವೆ.ಇಂತಹ ಅಂತರ್ಜಾಲದೊಂದಿಗೆ ಬೆಳೆದು ಬಂದ ಮತ್ತೊಂದು ಪದವೆ ಇ-ಮಾರುಕಟ್ಟೆ ಅಥವಾ e-commerce. ಇಂತಹ ಸಾಧ್ಯತೆಯನ್ನು  ಭಾರತದಲ್ಲಿ ತೆರೆದಿಟ್ಟ ಕೀರ್ತಿ ಪ್ಲಿಪ್ಕಾರ್ಟಗೆ ಸಲ್ಲುತ್ತದೆ. www.flipkart.com ಎಂಬುವುದು ಇಂದು ಎಲ್ಲರಿಗೂ ಗೊತ್ತಿರುವ ಜಾಲತಾಣ.ನಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ನೆರವಾಗುವ ತಾಣ, ಇದರ ಸ್ಥಾಪಕರು ನಮ್ಮ ನಿಮ್ಮಂತೆ ಇರುವ ಯುವಕರು.
             ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಎಂಬ ಚಂಢಿಗಡ ಮೂಲದ ಗೆಳೆಯರು ದಿಲ್ಲಿ  ಐ.ಐ.ಟಿ ಯಲ್ಲಿ ಸಹಪಾಠಿಗಳಾಗಿದ್ದರು.2005ರಲ್ಲಿ ಪದವಿ ವ್ಯಾಸಂಗದ ನಂತರ ಇಬ್ಬರ ದಾರಿ ಬೇರೆ ಬೇರೆಯಾಯಿತು. 18 ತಿಂಗಳ ನಂತರ ಇಬ್ಬರು ಮತ್ತೆ ಅಮೆರಿಕ ಮೂಲದ ಆನ್ಲೈನ್ ಮಾರಾಟ ಸಂಸ್ಥೆ ಅಮೆಜಾನ್ ನಲ್ಲಿ ಜೊತೆಯಾದರು. ಇಲ್ಲಿ ಕಂಡುಕೊಂಡ ಕೆಲವು ಸಂಗತಿಗಳು ಅವರನ್ನು ಹೊಸದಾದ ಕಾರ್ಯಗಳಿಗೆ ಪ್ರೇರೇಪಿಸಿತು.ಅ ಸಮಯದಲ್ಲಿ ಭಾರತದ ಅಂತರ್ಜಾಲ ವ್ಯವಸ್ಥೆ ಇಷ್ಟು ಮುಂದುವರಿದಿರಲಿಲ್ಲ. ಅನ್ಲೈನ್ ಮಾರುಕಟ್ಟೆಯ ಬಗ್ಗೆ ಜನರಿಗೆ ತಿಳುವಳಿಕೆ ಇರಲಿಲ್ಲ. ಪಾವತಿಗೆ ಬೇಕಾಗುವ ಡೆಬಿಟ್,ಕ್ರೆಡಿಟ್ ಕಾರ್ಡ್ ನ್ನು ಜನ ಹೊಂದಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಇದರ ಬಗೆಗೆ ಜನರಲ್ಲಿ  ನಂಬಿಕೆ ಇರಲಿಲ್ಲ. ಏಕೆಂದರೆ ಭಾರತದ ಜನ ವಸ್ತುವನ್ನು ಕೊಳ್ಳುವ ಮುನ್ನ ಹಲವಾರು ಬಾರಿ ಪರೀಕ್ಷಿಸಿ ನೊಡುವಂತಹ ಮನಸ್ಥಿತಿ ಉಳ್ಳವರು.

               ಇಂತಹ ಸಮಯದಲ್ಲಿ ಈ ರಂಗಕ್ಕೆ ಇಳಿಯಲು ನಿರ್ಧರಿಸಿದ ನಂತರ 2007 ರ ಸೆಪ್ಟೆಂಬರ್  5ರಂದು  “ಪ್ಲಿಪ್ಕಾರ್ಟ” ಎಂಬ ಕಂಪೆನಿಯನ್ನು ಆರಂಭಿಸಿದರು. ತಮ್ಮ ದುಡಿಮೆಯ ಹಣ 4 ಲಕ್ಷ ರೂಪಾಯಿಗಳನ್ನು ಆರಂಭಿಕ ಬಂಡವಾಳವನ್ನಾಗಿ ತೊಡಗಿಸಿದರು. ಬೆಂಗಳೂರಿನ ಕೋರಂಮಂಗಲದಲ್ಲಿರುವ ತಮ್ಮ ಮನೆಯಲ್ಲಿ 2 ಕಂಪ್ಯೂಟರ್ ಗಳನಿಟ್ಟು 2007 ಅಕ್ಟೋಬರ್ 15 ರಂದು www.flipkart.com ಎಂಬ ನಾಮದ ಜಾಲತಾಣ ಆರಂಭಿಸಿದರು. ಆರಂಭದ ದಿನಗಳಲ್ಲಿ ಕೇವಲ ಪುಸ್ತಕಗಳನ್ನು ಮಾರಾಟ ಮಾಡಲು ನಿರ್ಧರಿಸಿದರು. ಏಕೆಂದರೆ ಪುಸ್ತಕಗಳ ಸಾಗಣಿಕೆ ಸುಲಭ ಹಾಗು ಬೆಲೆ ಕಡಿಮೆ ಇರುವುದು. ಬೆಂಗಳೂರಿನ ಚರ್ಚ್ ರಸ್ತೆ ಯ ಗಂಗರಾಂ ಪುಸ್ತಕ ಮಳಿಗೆಯ ಎದುರು ನಿಂತು ಪುಸ್ತಕ ಖರೀದಿಸಿ ಹೊರಬರುವ ಗ್ರಾಹಕರಿಗೆ ತಮ್ಮ ಜಾಲತಾಣದ ಬುಕ್ ಮಾರ್ಕ್ ನೀಡಿ ಪ್ರಚಾರ ಆರಂಭಿಸಿದರು. ತಾಣ ಆರಂಭವಾದ 10 ದಿನದ ನಂತರ ಜಾನ್ ವುಡ್ ಬರೆದ  “ಲಿವಿಂಗ್ ಮೈಕ್ರೊಸಾಪ್ಟ್ ಟು ಛೆಂಜ್ ದ ವಲ್ಡ್” ಎಂಬ ಪುಸ್ತಕ ಖರೀದಿಸಿದ ಆಂಧ್ರಪ್ರದೇಶದ ವಿ.ವಿ.ಕೆ ಚಂದ್ರ ಎಂಬವರು ಪ್ರಥಮ ಗ್ರಾಹಕರಾದರು.
             ಆರಂಭದ ದಿನಗಳು ಕಷ್ಟಕರವಾಗಿದ್ದವು, ಕ್ಲಪ್ತ ಸಮಯದಲ್ಲಿ ವಸ್ತುಗಳನ್ನು ಸಾಗಿಸಲು ಸಾಗಾಣಿಕ  ಜಾಲ ನಿರ್ಮಿಬೇಕಿತ್ತು. ಹಣ ಪಾವತಿಗೆ ಬೇಕಾದ ಸುರಕ್ಷಾಮಾರ್ಗ ಬೇಕಿತ್ತು . ಆಕ್ಸಿಸ್ ಬ್ಯಾಂಕ್ ಈ ಸೇವೆಯನ್ನು ನೀಡಲು ಮುಂದೆ ಬಂತು. ಹೆಚ್ಚಿನ ಗ್ರಾಹಕರಲ್ಲಿ ಡೆಬಿಟ್ ಕ್ರೆಡಿಟ್ ಕಾರ್ಡ್ ಇರಲಿಲ್ಲ. ಇದ್ದರೂ ಕೂಡ ನಂಬಿಕೆಯ ಕೊರತೆ ಇತ್ತು. ಗ್ರಾಹಕರ ವಿಶ್ವಾಸ ಗಳಿಸುವುದು ಹಾಗು ಉಳಿಸುವುದು ಮುಖ್ಯವಾಗಿತ್ತು. ಅದಕ್ಕಾಗಿ ತಂದ “ಕ್ಯಾಶ್ ಅನ್ ಡೆಲಿವಲಿ” ವ್ಯವಸ್ಥೆ ಭಾರತದಲ್ಲಿ  ಪ್ರಥಮವಾಗಿತ್ತು.ಹಾಗೂ ಜನಮನ್ನಣೆಯನ್ನು ಗಳಿಸಿತ್ತು.ಪ್ರಾರಂಭವಾದ ಆರು ತಿಂಗಳ ನಂತರ ದೇಶದ ಮೂರು ನಗರಗಳಲ್ಲಿ ತನ್ನ ಸೇವೆಯನ್ನು  ಆರಂಭಿಸಿದರು. ಹಣ ಪಾವತಿಗೆ ತನ್ನದೇ ಆದ “ಪೇಜಿಪ್ಪಿ” (payzippy) ಎಂಬ ವ್ಯವಸ್ಥೆ  ಸ್ಥಾಪಿಸಿದರು.  2009 ರಲ್ಲಿ ಎಸೆಲ್  ಇಂಡಿಯಾ  ೧ ಮಿಲಿಯನ್  ಡಾಲರ್  2011 ರಲ್ಲಿ ಟೈಗರ್ ಗ್ಲೊಬಲ್  30 ಮಿಲಿಯನ್  ಡಾಲರ್ ಹಣ ಹೂಡಿಕೆ ಮಾಡಿದವು. ಐ.ಐ.ಟಿ ಕರಗ್ ಪುರದ ಪದವಿಧರ ಅಮೋದ್ ಮಾಳವಿಯ ಕಂಪನಿಯ ಮುಖ್ಯ ಸಾಗಣಿಕ ಅಧಿಕಾರಿಯದರು.
                ನಂತರದ ದಿನಗಳಲ್ಲಿ ಇಲೆಕ್ಟ್ರಾನಿಕ್ ವಸ್ತು, ಮೊಬೈಲ್ ಟಿವಿ,ಗೃಹಪಯೋಗಿ  ವಸ್ತು ಮೊದಲಾದವುಗಳನ್ನು ಮಾರಾಟ ಮಾಡಲು ಶುರು ಮಾಡಿದರು. ದೇಶದೆಲ್ಲೆಡೆ ಸಂಗ್ರಹಣ ಗೊದಾಮು ಸ್ಥಾಪಿಸಿ ಗ್ರಾಹಕರಿಗೆ 2-3 ದಿನದಲ್ಲಿ ಬಯಸಿದ ವಸ್ತು ಸಿಗುವಂತೆ ಮಾಡಿದರು.ಇಂದು ಪ್ಲಿಪ್ಕಾರ್ಟ್  ಪುರುಷ ಮಹಿಳೆ,ಮಕ್ಕಳು, ಗೃಹಪಯೋಗಿ, ಆರೋಗ್ಯ ಮುಂತಾದ ವಿಭಾಗದಲ್ಲಿ ಮಾರಾಟ ಮಾಡುತ್ತಿದೆ. ತಾನು ಇಚ್ಚೆಪಟ್ಟ ವಸ್ತುವನ್ನು ಇತರ ವಸ್ತುಗಳೊಂದಿಗೆ ಹೋಲಿಕೆ ಮಾಡಲು, ಅದರ ಸದ್ಯದ ಸ್ಥಿತಿಗತಿ (ಟ್ರ್ಯಾಕ್)ತಿಳಿಯಲು ಸಾಧ್ಯವಾಗಿದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್,ನೆಟ್ ಬ್ಯಾಂಕಿಂಗ್,ಇ-ಗಿಫ್ಟ್ ವೋಚೆರ್ , ಕ್ಯಾಶ್ ಅನ್ ಡೆಲಿವರಿ ಮೊದಲಾದ ಸೇವೆ ಯನ್ನು ಒದಗಿಸುತ್ತಿದೆ. ಭವಿಷ್ಯದಲ್ಲಿ ಮೊಬೈಲ್ ಹಾಗೂ ಅಂತರ್ಜಾಲದ ಸಂಖ್ಯೆ ಹೆಚ್ಚಾಗುವ ಲಕ್ಷಣ ಇರುವುದರಿಂದ 2013ರಲ್ಲಿ ಮೊಬೈಲ್ ಅಪ್ಲಿಕೇಶನ್ ಆರಂಭಿಸಿತು. ಇನ್ನೊಂದು ಅನ್ಲೈನ್ ಸಂಸ್ಥೆ “ಮೈಂತ್ರ ” (www.myntra.com) ವನ್ನು 2014 ರಲ್ಲಿ  ಕೊಂಡು ಕೊಂಡಿದೆ .ಫ್ಲಿಪ್ಕಾರ್ಟ್ ತನ್ನ  ಅನ್ಲೈನ್ ಮಾರುಕಟ್ಟೆಯ ನಿಜವಾದ ಸಾಮರ್ಥ್ಯವನ್ನು  2014 ಅಕ್ಟೋಬರ್   6 ರಂದು ತೋರಿಸಿತ್ತು ಅಂದು ಕೇವಲ 10 ಗಂಟೆಯಲ್ಲಿ 650 ಕೋಟಿ ರೂ. ವಸ್ತುಗಳನ್ನು ಮಾರುವ ಮೂಲಕ ಎಲ್ಲರ ಗಮನ ಸೆಳೆಯಿತು. ಅಂತೆಯೇ ಮಾಲ್ ಗಳ ಸರ್ಕಾರದ  ಹಾಗೂ ವರ್ತಕರ ಕೆಂಗಣ್ಣಿಗೆ ಗುರಿಯಾಯಿತು.
                           ಗ್ರಾಹಕರಿಗೆ ಉತ್ತಮವಾದ ವಸ್ತುಗಳು ಸುಲಭವಾಗಿ  ಸಿಗಬೇಕೆಂದು ಆರಂಭ ವಾದ ತಾಣ ಇಂದು 33000 ಸಾವಿರ ಜನರಿಗೆ ಉದ್ಯೋಗವನ್ನು ನೀಡಿದೆ. ಕೋಟ್ಯಾಂತರ ಗ್ರಾಹಕರಿಗೆ ಸೇವೆ ಯನ್ನು ನೀಡಿದೆ. ಭಾರತದ ನಂ.1 ಆನ್ಲೈನ್ ಮಾರುಕಟ್ಟೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾನು ಮಾಡಿದ ತಪ್ಪುಗಳಿಂದ ಪಾಠವನ್ನು ಕಲಿತಿದೆ. ಉತ್ತಮ ತಾಂತ್ರಿಕತೆ ಹಾಗೂ ಗ್ರಾಹಕ ಸ್ನೇಹಿ ಜಾಲತಾಣ ದ ಸಹಾಯದಿಂದ ಸೋಲಿನಿಂದ ಎದ್ದು ಬಂದಿದೆ. 2015 ರಲ್ಲಿ   2846 ಕೊ. ರೂ ಆದಾಯ ಗಳಿಸಿದೆ. ಪ್ರತಿಸ್ಪರ್ಧಿ ಕಂಪನಿಗಳಾದ ಇಬೇ ,ಅಮಜಾನ್, ಜಂಗ್ಲಿ, ಹೊಂಮ್ಶಾಪ್18  ಗಳಿಂದ ಕಠಿನ ಸ್ಪರ್ಧೆ ಎದುರಿಸುತ್ತಿದೆ.ಚೀನಾದ ಅನ್ಲೈನ್ ದೈತ್ಯ “ಅಲಿಬಾಬ” ದೊಂದಿಗೆ ಮಾರುಕಟ್ಟೆ ಪೈಪೋಟಿ  ನಡೆಸಲು ಸಜ್ಜಾಗಿದೆ. ಭಾರತದಲ್ಲಿ ಅಂತರ್ಜಾಲಕೆ ಉತ್ತಮ ಭವಿಷ್ಯ ಇರುವುದರಿಂದ ಹಾಗೂ ಡಿಜಿಟಲ್ ಇಂಡಿಯಾಕೆ ಸಜ್ಜಾಗಿರುವುದು, ಕಂಪನಿಯ ಭವಿಷ್ಯ ಚೆನ್ನಾಗಿರುವ ಸೂಚನೆ ಇದೆ. ತನ್ನ ಘೋಷವಾಕ್ಯ. “Flipping thing into your Kart” ದೊಂದಿಗೆ ರಾರಾಜಿಸಲಿದೆ.  


                             ಸಂಪದ.ನೆಟ್ ನಲ್ಲಿ ಪ್ರಕಟಗೊಂಡ ನನ್ನ ಲೇಖನ ಪ್ಲಿಪ್ಕಾರ್ಟನ‌ ಸಾಹಸಗಾಥೆ          



                                                                                                -Tharanatha Sona