ಭಾಗ 2 - ವ್ರಾತ್ ಆಫ್ ಗಾಡ್ / ಆಪರೇಷನ್ ಬಯೋನೆಟ್
ಪ್ರಧಾನಿ ಗೋಲ್ಡಾ ಮಿರ್ ನೇತೃತ್ವದಲ್ಲಿ ರಚನೆಯಾದ ಕಮಿಟಿ- X ಹತ್ಯಾಕಾಂಡದ ರೂವಾರಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲು ನಿರ್ಧರಿಸಿತು. ಈ ರೂವಾರಿಗಳು ವಿವಿಧ ಉದ್ಯೋಗಗಳನ್ನು ಮಾಡುತ್ತ ವಿಶ್ವದೆಲ್ಲೆಡೆ ಹಂಚಿ ಹೋಗಿದ್ದರು, ಇವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ ಕೃತ್ಯಕ್ಕೆ ಸಹಕರಿಸಿದ್ದರು. ಇವರುಗಳನ್ನು ಸುಮ್ಮನೆ ಬಿಟ್ಟರೆ ಇನ್ನಷ್ಟು ಇಸ್ರೇಲ್ ವಿರೋಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವ ಸಂಭವವಿತ್ತು. ಹೀಗೆ ಬೇರೆ ದೇಶಗಳಲ್ಲಿ ಇದ್ದವರನ್ನು ಮುಗಿಸಿಬಿಡುವುದು ಸುಲಭದ ಮಾತಲ್ಲ. ಸ್ಥಳೀಯ ಕಾನೂನು , ಮಾನವ ಹಕ್ಕು, ರಾಜಕೀಯ ಎಲ್ಲವೂ ಅಡ್ಡಬರುತ್ತದೆ. ಎಲ್ಲಿಯೂ ಇಸ್ರೇಲ್ ಸರ್ಕಾರದ ಹೆಸರು ಕೇಳಿ ಬಾರದಂತೆ ಅನಧಿಕೃತ ತಂಡವೊಂದನ್ನು ,ಮೋಸ್ಸಾದ್ (ಇಸ್ರೇಲ್ ಬೇಹುಗಾರಿಕಾ ಪಡೆ ) ಕಟ್ಟಿತ್ತು. ಮೋಸ್ಸಾದ್ ನ ಏಜೆಂಟ್ ಮಿಚೆಲ್ ಹರಾರಿ ಎನ್ನುವವರ ನೇತೃತ್ವದಲ್ಲಿ ಅಂದಾಜು 15 ಮಂದಿಯ ಸ್ವತಂತ್ರ ತಂಡ ತಯಾರಾಯಿತು. ಈ ತಂಡಕ್ಕೆ ಮೋಸ್ಸಾದ್ ಪ್ರಪಂಚದಾದ್ಯಂತ ಇರುವ ತನ್ನ ಏಜೆಂಟ್ಗಳನ್ನು ಬಳಸಿ ಸಂಚಿನ ಶಂಕಿತ ರೂವಾರಿಗಳ ಮಾಹಿತಿ ಒದಗಿಸಿತ್ತು. ಅಂದಾಜು 20 ಕ್ಕೂ ಹೆಚ್ಚು ಮಂದಿ ಶಂಕಿತರಿದ್ದರು. ಅಲಿ ಹಸನ್ ಸಲೇಮಿ ಎನ್ನುವಾತ ಇದರಲ್ಲಿ ಅತಿ ಮುಖ್ಯವಾಗಿದ್ದ. ಇವರ ಕುರಿತು ಎಲ್ಲ ಮಾಹಿತಿಗಳು ಸಿಕ್ಕ ಮೇಲೆ ಪ್ಯಾರಿಸ್ ನ್ನು ಕೇಂದ್ರವಾಗಿಸಿ ಭೂಗತ ಕಾರ್ಯಾಚರಣೆಗೆ ಇಳಿದರು.
ಇಸ್ರೇಲ್ ಪ್ರಧಾನಿ ಗೋಲ್ಡಾ ಮೆಯ್ರ್ |
ಮಿಚೆಲ್ ಹರಾರಿ |
ಈ ತಂಡದ ಮೊದಲ ಬಲಿ ಅಬ್ದುಲ್ ವೇಲ್ ಜುವೈಟರ್ ಎನ್ನುವ ಲಿಬಿಯಾನ್ ವಿದೇಶಾಂಗ ಇಲಾಖೆಯ ದುಬಾಷಿ. 1972ರ ಅಕ್ಟೋಬರ್ 16 ರಂದು ರಾತ್ರಿ ರೋಮ್ ನಗರದಲ್ಲಿನ ತನ್ನ ನಿವಾಸಕ್ಕೆ ಮರಳುತ್ತಿದ್ದಾಗ 11 ಸುತ್ತು ಗುಂಡುಗಳನ್ನು (ಈ ಹನ್ನೊಂದು ಗುಂಡುಗಳು ಮ್ಯೂನಿಚ್ ನಲ್ಲಿ ಬಲಿಯಾದ 11 ಅಥ್ಲೆಟ್ಗಳಿಗಳ ನೆನಪಿಗಾಗಿ ) ಹಾರಿಸಿ ಹತ್ಯೆಮಾಡಿದ್ದರು. ಈತ P. L.O ದ ರೋಮ್ ಘಟಕದ ಮುಖ್ಯಸ್ಥ ಎಂದು ಮೊಸಾದ್ ನಂಬಿತ್ತು. ಅದೇ ವರ್ಷದ ಡಿಸೆಂಬರ್ 8 ರಂದು ಫ್ರಾನ್ಸ್ನಲ್ಲಿ ಮೊಹಮ್ಮದ್ ಹಾಂಶರಿ ಎನ್ನುವ P. L.O ಫ್ರಾನ್ಸ್ ಘಟಕದ ಪ್ರತಿನಿಧಿ ಮೇಲೆ ಧಾಳಿ ಮಾಡಲಾಯಿತು. ತನ್ನನ್ನು ಪತ್ರಕರ್ತ ಎಂದು ಪರಿಚಯಿಸಿಕೊಂಡ ಏಜೆಂಟ್ ಒಬ್ಬನೊಂದಿಗೆ ಹಾಂಶರಿ ಟೆಲಿಫೋನ್ನಲ್ಲಿ ಮಾತಾಡುತ್ತಿದ್ದಾಗ , ಮೊದಲೇ ಟೆಲಿಫೋನ್ನಲ್ಲಿ ಅಳವಡಿಸಿದ್ದ ಬಾಂಬ್ ಅನ್ನು ಟೆಲಿಫೋನ್ ಸಿಗ್ನಲ್ ಮೂಲಕ ಸ್ಪೋಟಿಸಲಾಯಿತು. ಧಾಳಿ ನಡೆದ ತಿಂಗಳ ನಂತರ ಹಾಂಶರಿ ಆಸ್ಪತ್ರೆಯಲ್ಲಿ ಮೃತನಾದ. 1973 ರ ಜನವರಿ 24 ರಂದು ಸೈಪ್ರಸ್ ನಲ್ಲಿ ಬೆಡ್ ಕೆಳಗೆ ರಿಮೋಟ್ ಬಾಂಬ್ ಸ್ಪೋಟಿಸಿ ಹುಸೇನ್ ಅಲ್ ಬಷೀರ್ ಎನ್ನುವ ಬ್ಲಾಕ್ ಸೆಪ್ಟೆಂಬರ್ ಸಂಘಟನೆಯ ಸೈಪ್ರಸ್ ಪ್ರತಿನಿಧಿ ಹತ್ಯೆಯಾದ. ಬಸೀಲ್ ಅಲ್ ಕುಬೈಸಿ ಹೆಸರಿನ ಕಾನೂನು ಪ್ರೊಫೆಸರ್ ನ್ನು ಪ್ಯಾರಿಸ್ ನಲ್ಲಿ ಏಪ್ರಿಲ್ 6ರಂದು 12 ಸುತ್ತು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಈತ ಬ್ಲಾಕ್ ಸೆಪ್ಟೆಂಬರ್ ಸಂಘಟನೆಗೆ ಶಸ್ತ್ರಾಸ್ತ್ರ ಒದಗಿಸಿದ ಎಂದು ಮೋಸ್ಸಾದ್ ನಂಬಿದೆ.
.
ಇಸ್ರೇಲ್ ಪ್ರಧಾನಿ ಯಾಹೂದ್ ಬರಾಕ್ |
ರೆಡ್ ಪ್ರಿನ್ಸ್ ಯಾನೆ ಅಲಿ ಹಸನ್ ಸಲೇಮಿ |
ಜರ್ಮನ್ ಜೈಲಿಂದ ಬಿಡುಗಡೆಯಾದ್ ಜಮಾಲ್ ಅಲ್ ಘಶಿ ,ಮೊಹಮ್ಮದ್ ಸಫಾದಿ ಮತ್ತು ಅದ್ನಾನ್ ಅಲ್ ಘಶಿ ಗಾಗಿ ಮೊಸಾದ್ ಕೊನೆಯವರೆಗೂ ಹುಡುಕಾಟ ನಡೆಸಿತ್ತು. ಇದರಲ್ಲಿ ಜಮಾಲ್ ಅಲ್ ಘಶಿ 1999ರಲ್ಲಿ " ಒನ್ ಡೇ ಇನ್ ಸೆಪ್ಟೆಂಬರ್ '' ಎನ್ನುವ ಡಾಕ್ಯುಮೆಂಟರಿಗೆ ಸಂದರ್ಶನವನ್ನು ನೀಡಿದ್ದ. 2010ರಲ್ಲಿ ಮೃತನಾದ ಅಬು ದಾವೋದ್ ಎನ್ನುವ ಮುಖ್ಯ ಸಂಚುಕೋರನಿಗೆ ಕೊನೆಯವರೆಗೆ ಮೊಸಾದ್ ಹುಡುಕಾಟ ನಡೆಸಿತ್ತು.
ಈ ಭೂಗತ ತಂಡ ಇನ್ನು ಹಲವಾರು ವ್ಯಕ್ತಿಗಳನ್ನು ರಹಸ್ಯ ಹತ್ಯೆ ಮಾಡಿದೆ ಎಂದು ನಂಬಲಾಗಿದೆ ಹಾಗು ಉಗ್ರ ಅಬು ನಿದಾಲ್ ನ ಸಂಘಟನೆಯಿಂದ ತನ್ನ ಕೆಲವು ಏಜೆಂಟರನ್ನು ಕಳೆದುಕೊಂಡಿದೆ . ಈ ಘಟನೆಗಳನ್ನು ಆಧಾರವಾಗಿಟ್ಟುಕೊಂಡು 2005 ರಲ್ಲಿ 'ಮ್ಯೂನಿಚ್' ಹೆಸರಿನ ಸಿನಿಮಾ ಬಿಡುಗಡೆಯಾಯಿತು. ಇಲ್ಲಿ ಬೇಟೆ ಮತ್ತು ಹಂತಕನ ಆಟ ಮಾತ್ರ , ಇಲ್ಲಿ ಯಾವ ನಂಬಿಕೆಯು ಕೆಲಸಕ್ಕೆ ಬರುವುದಿಲ್ಲ. ತನ್ನ ಸಹಚರರು ಹತ್ಯೆಗೀಡಾದಾಗ ಮುಂದಿನ ಬಲಿ ನಾನಾಗಿರಬಹುದೆ? ಎಂದು ಭಯಗೊಂಡು ಬದುಕಬೇಕಾದ ಅನಿವಾರ್ಯತೆ ಹಲವು ಬ್ಲಾಕ್ ಸೆಪ್ಟೆಂಬರ್ ತಂಡದ ಸದಸ್ಯರಿಗಿತ್ತು. ಇಂತಹ ವಾತಾವರಣವನ್ನು ನಿರ್ಮಿಸಿದ ಕಾರಣಕ್ಕೆ ಇಸ್ರೇಲ್ ಇಂದಿಗೂ ಉಳಿದಿದೆ. ತನ್ನ ಸಾಹಸ ಕತೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುತ್ತ.
-Tharanatha Sona
ಮಾಹಿತಿ ಮತ್ತು ಚಿತ್ರಗಳು : ಅಂತರ್ಜಾಲ