Sunday, May 14, 2017

ಇಸ್ರೇಲ್ ವಿರುದ್ಧ ಹಲವರು ಅವಾಗಿದ್ರು , ಇವಾಗಿಲ್ಲ !!!!

                                         ಭಾಗ 1 - ಮ್ಯೂನಿಚ್  ಹತ್ಯಾಕಾಂಡ


ಇಸ್ರೇಲ್ ಕೆಚ್ಚು ಪ್ರತಿಕಾರಕ್ಕೆ ಹೆಸರಾದ ದೇಶ. ಹಮ್ಮುರಭಿಯ '' ಕಣ್ಣಿಗೆ ಕಣ್ಣು , ರಕ್ತಕ್ಕೆ ರಕ್ತ ''ನೀತಿ  ಇನ್ನೆಲ್ಲಿ ಇದೆಯೋ ಗೊತ್ತಿಲ್ಲ. ಆದರೆ ಇಸ್ರೇಲ್ ಮಾತ್ರ ತನ್ನ ಶತ್ರುಗಳನ್ನು ನಿರ್ನಾಮ ಮಾಡುವ ಮೂಲಕ ಇಂದಿಗೂ ಪಾಲಿಸುತ್ತಿದೆ, . ಹಾಲಿವುಡ್ನ ಸಾಹಸ ಸಿನಿಮಾಕ್ಕೆ ಸ್ಪೂರ್ತಿಯಾಗುವ ಕತೆಯೇ ಈ ಲೇಖನ '' ಮ್ಯೂನಿಚ್  ಹತ್ಯಾಕಾಂಡ ''.

ಕ್ರೀಡಾಗ್ರಾಮದಲ್ಲಿರುವ ಧಾಳಿ ನಡೆದ  ಕಟ್ಟಡ 


ಇದು ಶುರುವಾಗುವುದು ಅಂದಿನ ಪಶ್ಚಿಮ ಜರ್ಮನಿ ಆಯೋಜಿಸಿದ 1972 ಒಲಿಂಪಿಕ್ನಿಂದ . ಒಲಿಂಪಿಕ್ಗೆ ಭಾಗವಹಿಸಲು ಪ್ರಪಂಚದ ಎಲ್ಲ ದೇಶಗಳು ತಮ್ಮ ತಂಡಗಳನ್ನು ಕಳುಹಿಸಿ ಕೊಟ್ಟಂತೆ ಇಸ್ರೇಲ್ ತನ್ನ 28 ಕ್ರೀಡಾಪಟುಗಳ  ತಂಡವೊಂದನ್ನು ಕಳುಹಿಸಿಕೊಟ್ಟಿತ್ತು. ಹಾಗೆಯೇ ಅಂದು ಸ್ವಾತಂತ್ರಕ್ಕಾಗಿ ಹೋರಾಡುತ್ತಿದ್ದ ಪಾಲೆಸ್ಟಿನ್ ಲಿಬರೇಷನ್ ಆರ್ಗನ್ಯೆಜೆಷನ್ (ಪಿ.ಎ ಲ್.ಓ) ತನ್ನ 8 ಜನರ ತಂಡವೊಂದನ್ನು ಕಳುಹಿಸಿಕೊಟ್ಟಿತ್ತು  ಕ್ರೀಡಾಪಟುಗಳನಲ್ಲ!!!.  ಬದಲಾಗಿ ಬ್ಲಾಕ್ ಸೆಪ್ಟೆಂಬರ್ ಎಂದು ಕರೆಯಲ್ಪಡುವ ಉಗ್ರಗಾಮಿ ಸಂಘಟನೆಯೊಂದರ ಆತ್ಮಾಹುತಿ ದಳದ ಸದಸ್ಯರನ್ನು . ಮೇ 8 ,1972 ರಲ್ಲಿ ಟೆಲ್ಅವಿಲ್ ನಲ್ಲಿ  ಸಬಿನಾ ಫ್ಲೈಟ್- 571ರ ಹೈಜಾಕ್ ಮಾಡಿದ್ದ ಈ ಸಂಘಟನೆ ಈಗ ಇನ್ನೊಂದು ಕೃತ್ಯಕ್ಕೆ ಕೈಹಾಕಿತ್ತು . ತಮಗೆ ಬೇಕಾದ ರಹಸ್ಯ ಮಾಹಿತಿಗಳು , ಶಸ್ತ್ರಾಸ್ತ್ರ ಮೊದಲಾದ ಅಗತ್ಯಗಳನ್ನು ಪೂರೈಸಲು ಇವರು ಸಂಪರ್ಕಿಸಿದ್ದು , R.A.F (ರೆಡ್ ಆರ್ಮಿ ಫಾಶನ್) ಎನ್ನುವ ಜರ್ಮನಿ ಉಗ್ರಗಾಮಿ ಸಂಘಟನೆಯನ್ನು.  

ಘಟನೆ ಆರಂಭವಾದದ್ದು ಸೆಪ್ಟೆಂಬರ್ 4, 1972 ರ ಸಂಜೆ ಸಮಯ ಸುಮಾರು 4.40 ಕ್ಕೆ  ;

ಶಸ್ತ್ರಸಜ್ಜಿತ 8 ಮಂದಿ ಬ್ಲಾಕ್ ಸೆಪ್ಟೆಂಬರ್ ನ ಉಗ್ರರು ಮ್ಯೂನಿಚ್ ಕ್ರೀಡಾಗ್ರಾಮದ ಕಟ್ಟಡವೊಂದರ ಕೊಠಡಿಯಲ್ಲಿದ್ದ ಇಸ್ರೇಲ್ ಕ್ರೀಡಾಳುಗಳತ್ತ ಹತ್ತಿ ಹೋದರು . 11ಜನರ  ಇಸ್ರೇಲ್ ತಂಡವನ್ನು ಒತ್ತೆಯಾಳುಗಳಾಗಿ ಮಾಡಿಕೊಂಡರು. ಆರಂಭದ  ಅಕ್ರಮಣದಲ್ಲೇ ಇಬ್ಬರು ಇಸ್ರೇಲ್ ಸದಸ್ಯರು ಹತ್ಯೆಯಾದರು.  ಸ್ವಲ್ಪ ಹೊತ್ತಿನಲ್ಲೇ ಸುದ್ದಿ ಹಬ್ಬಿತ್ತು , ಉಳಿದವರು ಕಟ್ಟಡ ಬಿಟ್ಟು ದೂರ ಸರಿದರು. ಸುದ್ದಿ ಇಸ್ರೇಲ್ಗೆ ಮುಟ್ಟಲು ತಡವಾಗಲಿಲ್ಲ , ಆಗ ಇಸ್ರೇಲ್ ಪ್ರಧಾನಿಯಾಗಿದ್ದವರು ಗೋಲ್ಡಾ ಮೆಯ್ರ್. ಉನ್ನತ ಮಟ್ಟದ ಸಭೆಗಳು ನಡೆದು ಇಸ್ರೇಲಿ ಬೇಹುಗಾರಿಕೆ ಸಂಸ್ಥೆ ಮೋಸ್ಸಾದ್ ನ ಅಧಿಕಾರಿಗಳು  ಜರ್ಮನ್ನತ್ತ ಧಾವಿಸಿದ್ದರು. ಉಗ್ರರ ಬೇಡಿಕೆಗಳನ್ನು ಕೇಳಲಾಯಿತು. ಇಸ್ರೇಲ್ ಜೈಲ್ನಲ್ಲಿರುವ 234 P.L.O ಹೋರಾಟಗಾರನ್ನು ಮತ್ತು "ರೆಡ್ ಆರ್ಮಿ ಫಾಶನ್ನ" ಸ್ಥಾಪಕರಾದ ಆಂಡ್ರೆಸ್ ಬಡೆರ್ ಮತ್ತು ಮಾಜಿ ಪತ್ರಕರ್ತೆ ಉಲ್ರಿಕೆ ಮೆಯ್ನೋಫ್ ಎಂಬ ಜರ್ಮನ್ ಪ್ರಜೆಗಳನ್ನು ಬಿಡುಗಡೆಗೊಳಿಸಬೇಕೆಂದು ಉಗ್ರರ ಬೇಡಿಕೆಯಾಗಿತ್ತು. ಇದರಲ್ಲಿ ಉಗ್ರರ ಮುಖಂಡ ಲತೀಫ್ ಅಫಿಫ್ (ಇಸ್ಸಾ) ನ 2 ಜನ ಸಹೋದರರು ಸೇರಿದ್ದರು.  ಕುಖ್ಯಾತ ಕೈದಿಗಳನ್ನು ಬಿಡುಗಡೆಗೊಳಿಸುವುದು  ಇಸ್ರೇಲ್ಗೆ ಯಾವುದೇ ಕಾರಣಕ್ಕೂ ಒಪ್ಪದ ವಿಚಾರವಾಗಿತ್ತು. ಜರ್ಮನ್ ಸರ್ಕಾರ ಉಗ್ರರಿಗೆ ಹಣದ ಆಮಿಷವೊಡ್ಡಿತ್ತು. ಉಗ್ರರು ಸೊಪ್ಪು ಹಾಕಲಿಲ್ಲ.

ಕಟ್ಟಡದಿಂದ ಉಗ್ರನೊಬ್ಬನ ಇಣುಕುನೋಟ

ಮರುದಿನ ರಾತ್ರಿ  ಉಗ್ರರು ತಮ್ಮನ್ನು ಕೈರೋಗೆ ಸಾಗಿಸಬೇಕೆಂದು ಹೊಸ ಬೇಡಿಕೆಯಿಟ್ಟರು. ಇದು ಜರ್ಮನ್ ಪೊಲೀಸರಿಗೆ ಒತ್ತೆಯಾಳುಗಳನ್ನು ಕಾಪಾಡಲು ಅವಕಾಶವೊಂದನ್ನು ಒದಗಿಸಿತು . ಅಂತೆಯೇ ಜರ್ಮನಿ ಒದಗಿಸಿದ  2 ಹೆಲಿಕಾಪ್ಟರ್ಗಳಲ್ಲಿ ಸಮೀಪದ ನ್ಯಾಟೋ  ವೈಮಾನಿಕನೆಲೆಯತ್ತ ಉಗ್ರರನ್ನು ಒತ್ತೆಯಾಳುಗಳ ಸಮೇತ ಸಾಗಿಸಿದ್ದರು. ಮ್ಯೂನಿಚ್ ನಗರ ಶಸಸ್ತ್ರದಳ ಪೊಲೀಸರು ವಿಮಾನನಿಲ್ದಾಣವನ್ನು ಸುತ್ತುವರಿದು ಕಾರ್ಯಾಚರಣೆಗೆ ತೊಡಗಿದ್ದರು. ಇವರು ಈ ತರಹದ ಕಾರ್ಯಾಚರಣೆಗೆಂದು ತರಬೇತುಗೊಂಡಿರಲಿಲ್ಲ. ಮತ್ತು ಇದಕ್ಕೆ ಬೇಕಾದ ಶಸ್ತ್ರಗಳನ್ನು ಹೊಂದಿರಲಿಲ್ಲ. ಅಲ್ಲದೆ ಉಗ್ರರ ಸಂಖ್ಯೆಯ ಬಗ್ಗೆ ಹೊಂದಿದ್ದ ಶಸ್ತ್ರಾಸ್ತ್ರಗಳ ಬಗ್ಗೆ ಖಚಿತ ಮಾಹಿತಿಯು  ಇರಲಿಲ್ಲ . ಇಸ್ರೇಲ್ನ ರಕ್ಷಣಾ ಪರಿಣಿತರು ಈ ಕಾರ್ಯಾಚರಣೆಯನ್ನು ಮೌನವಾಗಿ ವೀಕ್ಷಿಸುವಂತಾಯಿತು. ರಾತ್ರಿ 10.30 ರ ಸಮಯದಲ್ಲಿ ಹೆಲಿಕ್ಯಾಪ್ಟರ್ ನಿಲ್ದಾಣದಲ್ಲಿ ಇಳಿಯಿತು . ಮೊದಲೇ ರಹಸ್ಯ ಸ್ಥಳಗಳಲ್ಲಿ ಅವಿತಿದ್ದ  ಪೊಲೀಸರನ್ನು ಉಗ್ರರು ಕಂಡರು ,ಗುಂಡಿನ ಹೋರಾಟ ಶುರುವಾಯಿತು. ಒಬ್ಬ ಉಗ್ರ ಹೆಲಿಕಾಪ್ಟರ್ನಲ್ಲಿದ್ದ ಒತ್ತೆಯಾಳುಗಳತ್ತ ಗ್ರೆನೇಡ್ ಒಂದನ್ನು ಎಸೆದ. ಇನ್ನೊಬ್ಬ ಮತ್ತೊಂದು ಹೆಲಿಕಾಪ್ಟರ್ನಲ್ಲಿದ್ದವರತ್ತ ಗುಂಡು ಹಾರಿಸಿದ. ಪೊಲೀಸ್ ತಂಡದ ಶಾರ್ಪ್ ಶೂಟರ್ಗಳು ಉಗ್ರರನ್ನು ಬೇಟೆಯಾಡಿದ್ದರು.  ಮಧ್ಯರಾತ್ರಿ ವೇಳೆಗೆ ಕಾರ್ಯಾಚರಣೆ ಮುಕ್ತಾಯವಾಯಿತು. 2 ಹೆಲಿಕಾಪ್ಟರ್ಗಳಲ್ಲಿದ್ದ ಎಲ್ಲ 9 ಮಂದಿ ಕ್ರೀಡಾಪಟುಗಳು ಹತ್ಯೆಯಾಗಿದ್ದರು. ಪೊಲೀಸರ ಗುಂಡಿಗೆ 5 ಜನ ಉಗ್ರರು ಸಾವಿಗೀಡಾದರು. ಅಡಗಿದ್ದ 3 ಉಗ್ರರನ್ನು ಸೆರೆಹಿಡಿಯಲಾಯಿತು, ಓರ್ವ ಜರ್ಮನ್ ಪೊಲೀಸ್ ಪ್ರಾಣ ತ್ಯಜಿಸಿದ್ದರು. 

ಸುದ್ದಿ ಪ್ರಪಂಚದೆಲ್ಲೆಡೆ ಹರಡಿತು. ಒಂದು ಹಂತದಲ್ಲಿ ಒಲಿಂಪಿಕ್ ನಿಲ್ಲಿಸಲು ಯೋಜಿಸಿದ್ದರು, ಆದರೆ ಇಸ್ರೇಲ್ ಸರ್ಕಾರ ಮಧ್ಯ ಪ್ರವೇಶಿಸಿ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಒಲಿಂಪಿಕ್ ನ್ನು  ಯಶಸ್ವಿಯಾಗಿ ನಡೆಸಬೇಕೆಂದು ಹೇಳಿತು. ಕರಿಛಾಯೆಯ ನಡುವೆ ಕ್ರೀಡಾಕೂಟ ನಡೆಯಿತು. ಪೂರ್ಣ ಇಸ್ರೇಲ್ ತಂಡ ,ತಮ್ಮ ಮೃತಪಟ್ಟ ಸದಸ್ಯರೊಂದಿಗೆ ಇಸ್ರೇಲ್ಗೆ ಬಂದಿಳಿಯಿತು. ರಾಷ್ಟ್ರೀಯ  ಶೋಕದ ನಡುವೆ ಅಂತಿಮ ಸಂಸ್ಕಾರ ಕಾರ್ಯಗಳು ನಡೆದವು. ಇನ್ನು ಮೃತರಾದ 5 ಮಂದಿ ಉಗ್ರರ ಶವಗಳು ಲಿಬಿಯದತ್ತ ರವಾನೆಯಾದವು. ಅಲ್ಲಿ ಅವರಿಗೆ ಮಿಲಿಟರಿ ನಮನದೊಂದಿಗೆ ಅಂತಿಮ ವಿಧಿಗಳು ನಡೆದವು. ಏಕೆಂದರೆ ಲಿಬಿಯಾ ಸರ್ವಾಧಿಕಾರಿ ಮಮ್ಮರ್ ಗಢಾಫಿ ಪ್ರಕಾರ ಈ  ಉಗ್ರರು ಅಲ್ಲಿನ ಹೀರೋಗಳಾಗಿದ್ದರು.

ಈ ಹತ್ಯಾಕಾಂಡವು ಜರ್ಮನಿಯಲ್ಲಿ ಹಿಟ್ಲರ್ ಮಾಡಿದ ಯಹೂದಿ ಹತ್ಯೆಯ ದಿನಗಳನ್ನು ನೆನಪಿಗೆ ತಂದಿತು. ಯಹೂದಿ ದೇಶ
ಇಸ್ರೇಲ್ನಲ್ಲಿ ಪ್ರತಿಕಾರದ ಕೂಗೆದಿತ್ತು. ಮರುದಿನ ಇಸ್ರೇಲ್ ವಿಮಾನಗಳು ಲೆಬನಾನ್ ಮತ್ತು ಸಿರಿಯಾದಲ್ಲಿದ್ದ ಪ್ಯಾಲೆಸ್ತೀನ್ ನಿರಾಶ್ರೀತರ ಶಿಬಿರಗಳ ಮೇಲೆ ಬಾಂಬ್ ಧಾಳಿ ಶುರುಮಾಡಿದವು. 200 ಮಂದಿ ಅಮಾಯಕರು ಬಲಿಯಾದರು . ಇಸ್ರೇಲ್ ತಪ್ಪಿತಸ್ಥರಿಗೆ ಶಿಕ್ಷೆಯುಂಟಾಗಲು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿತ್ತು . ಪ್ರಧಾನಿ ಗೋಲ್ಡಾ ಮೆಯ್ರ್ , ರಕ್ಷಣಾ ಸಚಿವ ಮೋಶೆ ಡಯನ್ , ಮೋಸ್ಸಾದ್ ಮುಖ್ಯಸ್ಥ  ಜ್ವಿ ಝಮೀರ್ , ರಕ್ಷಣಾ ಸಲಹೆಗಾರ ಅರೋನ್ ಯರೀವ್   ಮೊದಲಾದವರು ಸೇರಿ ಒಂದು ಸಮಾಲೋಚನೆ ನಡೆಯಿತು . ಕಮಿಟಿ -X  ಎನ್ನುವ ಹೊಸ ತಂಡ ರಚನೆಯಾಯಿತು.

ಈ ಮಧ್ಯೆ  20 ನೇ ಅಕ್ಟೋಬರ್ 1972ರಂದು  ಲುಫ್ತಾನ್ಸ ಫ್ಲೈಟ್ -615  ಎಂಬ ಡಮಾಸ್ಕಸ್ ನಿಂದ ಫ್ರಾಂಕ್ಫ಼ರ್ಟ್ ಗೆ ತೆರಳುತ್ತಿದ್ದ ಪ್ರಯಾಣಿಕ ವಿಮಾನ ಅಪಹರಣವಾಯಿತು. ವಿವಿಧ ದೇಶಗಳ 13 ಪ್ರಯಾಣಿಕರು ಇದ್ದ ವಿಮಾನವನ್ನು ಮತ್ತೆ ಬ್ಲಾಕ್ ಸೆಪ್ಟೆಂಬರ್ ತಂಡದ ಇಬ್ಬರು ಅಪಹರಿಸಿದ್ದರು. ಅವರ ಬೇಡಿಕೆ ಏನೆಂದರೆ ಮ್ಯೂನೀಚ್ ಧಾಳಿಯಲ್ಲಿ ಬಂಧಿತರಾದ ಅದ್ನಾನ್ -ಅಲ್ -ಘಾಸಿ , ಜಮಾಲ್-ಅಲ್-ಘಾಸಿ  ಮತ್ತು ಮೊಹಮ್ಮದ್ ಸಫಾದಿ ಯರನ್ನು ಜೈಲಿಂದ ಬಿಡುಗಡೆಗೊಳಿಸುವುದು . ಅಂತಾರಾಷ್ಟ್ರೀಯ ಸಮುದಾಯದ ಒತ್ತಡದ ನಂತರ ಜರ್ಮನಿ ಇದಕ್ಕೆ ಒಪ್ಪಿತ್ತು. ಲಿಬಿಯಾದ ಟ್ರಿಪೋಲಿಯಲ್ಲಿ ಅಪಹರಣಕಾರರು ಮತ್ತು ಮ್ಯೂನಿಚ್  ಹತ್ಯಾಕಾಂಡದ ಆರೋಪಿಗಳು ಬಂದಿಳಿದಾಗ ಭವ್ಯ ಸ್ವಾಗತ ದೊರಕಿತು. ಅಂದು ಅವರು  ಮಾಡಿದ ಪತ್ರಿಕಾಗೋಷ್ಠಿ ವಿಶ್ವದಾದ್ಯಂತ ಪ್ರಸಾರವಾಯಿತು. ಅಲ್ಲಿಗೆ ಇಸ್ರೇಲ್ನ ಪ್ರತಿಷ್ಠೆಗೆ ಭಂಗವುಂಟಾಯಿತು.

ಭಾರತವು ಕೂಡ ಇಂತಹ ಸಂದರ್ಭವನ್ನು ಕಂದಹಾರ್ ವಿಮಾನ ಅಪಹರಣದಲ್ಲಿ ಕಂಡಿತ್ತು.ಭಾರತ ಉಗ್ರರ ಬೇಡಿಕೆಯನ್ನು ಒಪ್ಪಿ ಒತ್ತೆಯಾಳುಗಳನ್ನು ಬಿಡಿಸಿಕೊಂಡಿತು. ನಂತರ ಅಪಹರಣಕಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬಿಡುಗಡೆಯಾದ ಉಗ್ರರು ಮತ್ತೆ ಭಾರತಕ್ಕೆ ಗಂಡಾಂತರಕಾರಿಯಾಗಿ ಪರಿಣಮಿಸಿದರು.  ಆದರೆ ಇಲ್ಲಿ ಇಸ್ರೇಲ್ ಇದಕ್ಕೆ ಪ್ರತಿಕಾರ ತೆಗೆದುಕೊಳ್ಳುವ ಪ್ರತಿಜ್ಞೆ ಮಾಡಿತ್ತು ಮತ್ತು ಸಾಧಿಸಿತು. ಘಟನೆಗೆ ಕಾರಣರಾದವರನ್ನು ಹುಡುಕಿ ಜಗತ್ತಿಗೆ ಸುಳಿವು ಸಿಗದಂತೆ  ಯಮಲೋಕಕ್ಕೆ ಅಟ್ಟಿತ್ತು. ವ್ರಾತ್ ಆಫ್ ಗಾಡ್ ಎಂದು ಕರೆಯಲ್ಪಡುವ ಈ ಸಾಹಸ ಕತೆಯನ್ನು ಇನ್ನೊಂದು ಭಾಗದಲ್ಲಿ ನೋಡೋಣ.

                                                                                                                -Tharanatha Sona



ಮಾಹಿತಿ ಮತ್ತು ಚಿತ್ರಕೃಪೆ :- ಅಂತರ್ಜಾಲ