Saturday, June 10, 2017

ಆಫ್ರಿಕಾದ ಕಾಡಿನಲ್ಲೊಂದು ಸರ್ಜಿಕಲ್ ಸ್ಟ್ರೈಕ್ ಭಾಗ-1


       ಸಿಯಾರ್ ಲಿಯೋನ್ ಸೇನೆಯ ಸೈನಿಕ  ಮುಸ ಬಂಗುರಾ ಬಂಧಿಯಾಗಿದ್ದ  ಗುಂಡಿ ತುಂಬಾ ಆಳವೇನೂ ಇರಲಿಲ್ಲ , ಕೇವಲ 2 ಮೀಟರ್ ಅಷ್ಟೇ. ಆದರೆ ಸುತ್ತಲು ಹರಡಿದ್ದ ಮಾನವ ತ್ಯಾಜ್ಯ , ಕೆಸರು ನರಕದರ್ಶನ ಮಾಡಿಸುತಿತ್ತು . ಅದಲ್ಲದೆ ಹಲ್ಲೆಯಿಂದ ದೇಹದಲ್ಲಿ ಅದ ಗಾಯಗಳು ಅಪಾರ ಹಿಂಸೆ ಉಂಟುಮಾಡುತ್ತಿದ್ದವು. ಮದ್ಯ ಮತ್ತು ಮಾದಕ ಪದಾರ್ಥ ಸೇವಿಸಿ ಕ್ರೂರವಾಗಿ ದಂಡಿಸುತ್ತಿದ್ದ ನರ ರಾಕ್ಷಸರ ಕೈಯಿಂದ ಹೊರಬಂದು ಬದುಕುವ ಸಾಧ್ಯತೆಯೂ ಇರಲಿಲ್ಲ. 


ಪಶ್ಚಿಮ ಆಫ್ರಿಕಾದ ಸಿಯಾರ್ ಲಿಯೋನ್ 
ಅದು ಸಿಯಾರ್ ಲಿಯೋನ್ , ಪಶ್ಚಿಮ ಆಫ್ರಿಕಾದ ಪುಟ್ಟ ರಾಷ್ಟ್ರ. ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧದಷ್ಟು ಇಲ್ಲದ (71,740 km^2 ) ಅತ್ಯಂತ ಕಡು ಬಡತನದಿಂದ ಕೂಡಿದ ರಾಷ್ಟ್ರ. ಇಂತಹ ರಾಷ್ಟ್ರದಲ್ಲಿ 1991ರಿಂದ ಆರಂಭವಾಗಿದ್ದ ನಾಗರಿಕ ಯುದ್ಧ 9 ವರ್ಷ ಆದರೂ ಮುಗಿದಿರಲಿಲ್ಲ, 75,000ಕ್ಕೂ ಹೆಚ್ಚು ಜನರ ಪ್ರಾಣಹರಣವಾಗಿತ್ತು.  ನಾಗರಿಕರ ರಕ್ಷಣೆಗಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಅಡಿಯಲ್ಲಿ ಭಾರತವು ಸೇರಿದಂತೆ ಅನೇಕ ದೇಶಗಳ ಸೇನೆಗಳು ಕಾರ್ಯನಿರ್ವಹಿಸುತ್ತಿದ್ದವು. ಹಿಂದೊಮ್ಮೆ ಬ್ರಿಟಿಷ್ ವಸಾಹತು ಆಗಿದ್ದ ದೇಶದ ರಕ್ಷಣೆಯ ಸಲುವಾಗಿ  ಬ್ರಿಟನ್ , ಸಿಯಾರ್ ಲಿಯೋನ್ ಸೇನೆಗೆ ತರಭೇತಿ ನೀಡುತ್ತಿತ್ತು .





ಅದು 25 ಆಗಸ್ಟ್ 2000ನೇ ಇಸವಿ,  ಮಧ್ಯಾಹ್ನದ  ವೇಳೆಯಲ್ಲಿ ಮೇಜರ್ ಅಲನ್ ಮಾರ್ಷಲ್ ನೇತೃತ್ವದಲ್ಲಿ 11 ಜನ ರಾಯಲ್ ಐರಿಶ್ ರೆಜಿಮೆಂಟ್ ನ ಮೊದಲನೇ ಬೆಟಾಲಿಯನ್ ಯೋಧರು ಹಾಗು  ಓರ್ವ (ಮುಸ ಬಂಗುರ) ಸಿಯಾರ್ ಲಿಯೋನ್ ಸರ್ಕಾರಿ ಸೇನೆಯ ಸೈನಿಕನನ್ನು ಕೂಡಿದ ಗಸ್ತುಪಡೆ ಸಂಚರಿಸುತ್ತಿತ್ತು. ರಾಜಧಾನಿ ಫ್ರೀಟೌನ್ ನಲ್ಲಿ ಮುಖ್ಯನೆಲೆ ಹೊಂದಿದ್ದ ಪಡೆ, ರೊಕೆಲ್ ಕ್ರೀಕ್ ನದಿದಂಡೆಯ ಸಾಸ್ ಅರಣ್ಯ ಪ್ರದೇಶದಲ್ಲಿ ಸಾಗುತ್ತಿದ್ದಾಗ ಸಮೀಪದಲ್ಲಿ ಬಂಡುಕೋರರ ತಾಣವಿರುವ ವರ್ತಮಾನ ಬಂತು. ಆಕ್ರ ಹಿಲ್ಸ್ ಪ್ರದೇಶದಲ್ಲಿದ್ದ ಮಾಗ್ಬೇನಿ ಮತ್ತು ಗಬೇರಿ ಬಾನದ ಹಳ್ಳಿಗಳು ವೆಸ್ಟ್ ಸೈಡ್ ಬಾಯ್ಸ್ ಎನ್ನುವ ನಟೋರಿಯಸ್ ಗ್ಯಾಂಗ್ನ ತಾಣವಾಗಿತ್ತು. 1991ರಲ್ಲಿ ರೆವೊಲ್ಯೂಷನರಿ ಯುನೈಟೆಡ್ ಫ್ರಂಟ್ (R.U.F ) ಎನ್ನುವ ಸಂಘಟನೆ ಸರ್ಕಾರದ ವಿರುದ್ಧ  ಹೋರಾಟ ಆರಂಭಿಸಿತು. ವೆಸ್ಟ್ ಸೈಡ್ ಬಾಯ್ಸ್ ಗಳು 1997ರ ವರೆಗೆ R.U.F ನ ಜೊತೆ ಸೇರಿ ಕೊನೆಗೆ ಹೋರಾಟದಲ್ಲಿ ಸೋತು ಈ ಕಾಡಿನಲ್ಲಿ ವಾಸವಾಗಿದ್ದರು. ಮಹಿಳೆಯರು ಮಕ್ಕಳನ್ನು ಸೇರಿದಂತೆ  400ಕ್ಕೂ ಹೆಚ್ಚು ಸದಸ್ಯರಿದ್ದ ಈ ತಂಡದ ನಾಯಕ 24ರ ಹರೆಯದ ಪೋಡೇ ಕಲ್ಲೆ, ಸಿಯಾರ್ ಲಿಯೋನ್ ಸೇನೆಯ ಮಾಜಿ ಸೈನಿಕ.  ಸದಾ ಮದ್ಯ,ಅಮಲು ಪದಾರ್ಥಗಳ ನಶೆಯಲ್ಲಿರುತ್ತಿದ್ದ ಇವರುಗಳ ಮುಖ್ಯ ಉದ್ದೇಶ ಅಲ್ಲಿನ ವಜ್ರದ ಗಣಿಗಳ ಮೇಲೆ ಹಿಡಿತ ಸಾಧಿಸುವುದು. ಹಾಗೆಯೇ ಸಿಕ್ಕಿದ ವಜ್ರಗಳನ್ನು ಅಲ್ ಕೈದಾಕ್ಕೆ ಮಾರಿ, ಶಸ್ತ್ರಾಸ್ತ್ರಗಳನ್ನು ಸಂಪಾದಿಸಿದರು.


ವಿಶ್ವಸಂಸ್ಥೆಯ ತಪಾಸಣಾ ಕೇಂದ್ರ ದಾಟಿ ಫ್ರೀಟೌನ್ ನಿಂದ ಸುಮಾರು 50 km ದೂರದಲ್ಲಿರುವ ಗಬೇರಿ ಬಾನದತ್ತ  ಮೂರು  ವಾಹನಗಳಲ್ಲಿ ಬ್ರಿಟಿಷ್ ಗಸ್ತು ಪಡೆ ಹೊರಟಿತ್ತು. ಸ್ವಲ್ಪ ಸಮಯದ ನಂತರ ದಟ್ಟ ಕಾಡಿನಲ್ಲಿ ಸಾಗುತ್ತಿದ್ದಾಗ ಎದುರಾಗಿತ್ತು, ಕಂಟೆಬಿ ಎಂಬಾತನ ನೇತೃತ್ವದಲ್ಲಿದ್ದ 50 ಮಂದಿ ವೆಸ್ಟ್ ಸೈಡ್ ಬಾಯ್ಸ್ ತಂಡ.  ತಮ್ಮದು ಕೇವಲ  ಗಸ್ತು ಪಡೆ ಎಂದು ಮೇಜರ್ ಅಲನ್ ಮಾರ್ಷಲ್ ಹೇಳಿದರೂ ಕೇಳದೆ ಬಂದೂಕು ತೋರಿಸಿ ಬೆದರಿಸಿ ವಾಹನದಿಂದ ಕೆಳಗಿಳಿಸಿದರು. ಯೋಧರು ಬಂದೂಕು ಕೆಳಗಿಳಿಸುತ್ತಿದಂತೆಯೇ ಅವರಲ್ಲಿದ್ದ ಆಯುಧಗಳನ್ನು ಕಸಿದುಕೊಂಡು, ಎಲ್ಲರನ್ನು ವಶಪಡಿಸಿಕೊಂಡರು. ಜೊತೆಗಿದ್ದ ಲಿಫ್ಟಿನಂಟ್ ಮುಸ ಬಂಗುರಾನಿಗೆ ಕೂಡ  ಹಲ್ಲೆಮಾಡಿದರು. ಏಕೆಂದರೆ ಹಿಂದೆ ಈ ಮುಸ ಮತ್ತು ಕೆಲವು ವೆಸ್ಟ್ ಸೈಡ್ ಬಾಯ್ಸ್ ತಂಡದ ಸದಸ್ಯರು ಸೇನೆಯಲ್ಲಿ ಜೊತೆಗಿದ್ದರು. ಮುಸ ಸೇನೆಗೆ ನಿಷ್ಠನಾಗಿದ್ದರೆ, ಇವರುಗಳು ಬಂಡೆದ್ದು ಅರಣ್ಯದಾಚೆ ನೂಕಲ್ಪಟ್ಟಿದ್ದರು. ಈಗ ಪ್ರತಿಕಾರ ತೀರಿಸುವ ಸಮಯ ಒದಗಿತ್ತು. ಎಲ್ಲ 12 ಮಂದಿಯನ್ನು ದಟ್ಟ ಅಡವಿಯಲ್ಲಿದ್ದ ಗಬೇರಿ ಬಾನದತ್ತ  ಕರೆದೊಯ್ದರು. ಮೂಸಾನಿಗೆ ಅಮಾನುಷವಾಗಿ ಹಲ್ಲೆ ಮಾಡಿ ಗುಂಡಿಯೊಂದಕ್ಕೆ ಎಸೆದರು. ಉಳಿದವರನ್ನು ಪೋಡೇ ಕಲ್ಲೆಯ ಮನೆ ಸಮೀಪ  ಕೋಣೆಯೊಂದರಲ್ಲಿ ಕೂಡಿ ಹಾಕಿದರು .

ಉಗ್ರರ ನಾಯಕ ಪೋಡೇ ಕಲ್ಲೆ
ಈ ಸಂಗತಿ ಫ್ರೀಟೌನ್ ನಲ್ಲಿದ್ದ ಸೇನೆಯ ಕಮಾಂಡಿಂಗ್ ಆಫೀಸರ್ ಸೈಮನ್ ಫಾರ್ಡೆಮ್ ಗೆ ಮುಟ್ಟಿ, ಸಂಧಾನಕ್ಕೆ ಮುಂದಾದರು. ಈ 11 ಮಂದಿ ಐರಿಶ್ ಸೇನಾಪಡೆಯ ಯೋಧರು, ಅಪಹರಕಾರರಿಗೆ ಅಮೂಲ್ಯ ನಿಧಿಯಂತೆ ಕಂಡರು. ಅವರ ಬಿಡುಗಡೆ ಮಾಡಿದರೆ ತಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದೆಂದು ಯೋಚಿಸಿದರು. ಸೇನೆಯ ಅಧಿಕಾರಿಗಳು, ವಶದಲ್ಲಿರುವ  ಸೈನಿಕರನ್ನು ತಾವು ಖುದ್ದು ಕಂಡ ನಂತರವೇ ಸಂಧಾನ ಪ್ರಕ್ರಿಯೆ ಆರಂಭಿಸಲು ಸೂಚಿಸಿದರು. ಎರಡು ದಿನಗಳ ನಂತರ ಕಮಾಂಡಿಂಗ್ ಆಫೀಸರ್ ಸೈಮನ್ ಫಾರ್ಡೆಮ್ ಮತ್ತು ನಾಯಕ ಪೋಡೇ ಕಲ್ಲೆಯ ಭೇಟಿ ಆಯಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಅಲನ್ ಮಾರ್ಷಲ್ ಜೊತೆಗಿದ್ದ ಸಹಾಯಕ ಪ್ಲಾಹೆರ್ಟಿ, ತಮ್ಮನ್ನು ಬಂಧಿಸಿರಿಸಿದ ಸ್ಥಳದ ನಕಾಶೆಯನ್ನು ಹಸ್ತಲಾಘವದ ಸಮಯದಲ್ಲಿ ಸೈಮನ್ ಫಾರ್ಡೆಮ್ ಗೆ ನೀಡಿದ್ದರು. ಇದು ಮುಂದೆ ನೆರವಿಗೆ ಬಂತು. ವೆಸ್ಟ್ ಸೈಡ್ ಬಾಯ್ಸ್ಗಳ ಬೇಡಿಕೆ ವಿಲಕ್ಷಣವಾಗಿತ್ತು . ತಮ್ಮನ್ನು   ಒಂದು ರಾಜಕೀಯ ಸಂಘಟನೆಯಾಗಿ ಮಾನ್ಯ ಮಾಡಬೇಕು. ಜೈಲುಗಳಲ್ಲಿ ಬಂಧಿತರಾಗಿರುವ ತಮ್ಮ ಸಹವರ್ತಿಗಳನ್ನು ಬಿಡುಗಡೆ ಮಾಡಬೇಕು. ಲಂಡನ್ನಲ್ಲಿ ತಮ್ಮ ಸದಸ್ಯರೊಬ್ಬರಿಗೆ ಉಚಿತ ಶಿಕ್ಷಣ ನೀಡಬೇಕು. ಕೊನೆಯದು ಮಾತ್ರ ಆಶಾದಾಯಕವಾಗಿತ್ತು, 'ತಮಗೆ ಒಂದು ಸ್ಯಾಟಲೈಟ್ ಫೋನ್ ಮತ್ತು ಔಷಧ ಒದಗಿಸಿದರೆ ಐದು  ಜನ ಒತ್ತೆಯಾಳುಗಳನ್ನು ಬಿಡುಗಡೆ ಗೊಳಿಸುತ್ತೇವೆ' ಎಂದು ಹೇಳಿದರು. ಅಂತೆಯೇ ಸ್ಯಾಟೆಲೈಟ್ ಫೋನ್ ಒಂದನ್ನು ಒದಗಿಸಿ ಆಗಸ್ಟ್ 31ರಂದು ಐದು ಯೋಧರನ್ನು ಬಿಡುಗಡೆ ಮಾಡಿಸಲಾಯಿತು. ಇತ್ತ ಫೋನ್ ಪಡೆದುಕೊಂಡ ಸ್ವಯಂಘೋಷಿತ  ಬ್ರಿಗೇಡಿಯರ್ ಪೋಡೇ ಕಲ್ಲೆ ಅದರ ಮೂಲಕ ಬಿಬಿಸಿ (BBC)ವಾಹಿನಿಯನ್ನು ಸಂಪರ್ಕಿಸಿ ತಮ್ಮ ಬೇಡಿಕೆಗಳ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಯುವಂತೆ ಮಾಡಿದ್ದ. ಅಪಹರಣಕಾರರ ಸಂಯಮ ಕೆಡುವ ಮೊದಲೇ ಒಂದು ನಿರ್ಧಾರಕ್ಕೆ ಬರಲೇಬೇಕಿತ್ತು.

ಶತ್ರುಗಳ ವಶದಲ್ಲಿ ತಮ್ಮ ಸೇನೆಯ ಯೋಧರು ಬಂಧಿಯಾಗಿರುವುದು ಯಾವುದೇ ದೇಶಕ್ಕೂ ಸಹಿಸದ ವಿಷಯ. ಅದು ಕೂಡ ಸೂರ್ಯ ಮುಳುಗದ ಸಾಮ್ರಾಜ್ಯ ಗ್ರೇಟ್ ಬ್ರಿಟನ್ ಗೆ !!!

                                                                                                      -Tharanatha sona


www.nilume.net ನಲ್ಲಿ ಪ್ರಕಟವಾಗಿದ್ದ ಲೇಖನ