Tuesday, June 13, 2017

ಆಫ್ರಿಕಾದ ಕಾಡಿನಲ್ಲೊಂದು ಸರ್ಜಿಕಲ್ ಸ್ಟ್ರೈಕ್ ಭಾಗ-2

ಕಾರ್ಯಾಚರಣೆ ನಡೆದ ಸ್ಥಳದ ಚಿತ್ರಣ 

ಸಾಸ್ ಅರಣ್ಯದಲ್ಲಿ  ಇಷ್ಟೆಲ್ಲ ಬೆಳವಣಿಗೆಗಳು ಆಗುತ್ತಿರುವಾಗ ಇತ್ತ ಕಡೆ ಬ್ರಿಟಿಷ್ ಸೇನೆಯಲ್ಲಿ ಸದ್ದಿಲ್ಲದಂತೆ ರೂಪುರೇಷೆಯೊಂದು ತಯಾರಾಗಿತ್ತು. ಅಪಹೃತರನ್ನು ರಕ್ಷಿಸಲು ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ರಹಸ್ಯ ಕಾರ್ಯಾಚರಣೆ ಒಂದಕ್ಕೆ ಅನುಮತಿ ಕೊಟ್ಟರು.  ಅದುವೇ ಆಪರೇಷನ್ ಬರ್ರಾಸ್.  ಇಂತಹ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಗೆಂದು ಸಿದ್ದವಾಗಿದ್ದ ಸಾಸ್ (SAS- Special Air service) ತನ್ನ ಪರಿವೀಕ್ಷಣಾ ತಂಡವೊಂದನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ವೆಸ್ಟ್ ಸೈಡ್ ಬಾಯ್ಸ್ಗಳ ತಾಣದತ್ತ ಕಳುಹಿಸಿತು. ಅಪಹೃತರನ್ನು ಕೂಡಿ ಹಾಕಿದ್ದ ಪ್ರದೇಶದ ಸ್ವಲ್ಪ ದೂರದಲ್ಲಿ ಕಾಡಿನ ಮರೆಯಲ್ಲಿ ಅಡಗಿಕೊಂಡ ಇವರು ಸೂಕ್ಷ್ಮ ಮೈಕ್ರೋಫೋನ್ ಮೂಲಕ ಅಲ್ಲಿಂದ ಕೇಳಿ ಬರುವ ಮಾತುಕತೆಗಳನ್ನು ಆಲಿಸಲಾರಂಭಿಸಿದರು. ಬೇಡಿಕೆಗಳ ಈಡೇರಿಕೆ ತಡವಾದಂತೆ ಉಗ್ರರು ಸೇರಿಹಿಡಿದ ಯೋಧರನ್ನು ಹಿಂಸಿಸಲಾರಂಭಿಸಿದರು. ಗುಂಡಿಯೊಳಗೆ ಜೀವಂತ ಶವವಾಗಿದ್ದ ಮುಸ ಬಂಗುರಾನ ಪರಿಸ್ಥಿತಿ ದಿನಕಳೆದಂತೆ ಬಿಗಡಾಯಿಸುತಿತ್ತು. ಗ್ಯಾಂಗ್ ಜತೆಗಿದ್ದ ಸಣ್ಣ ಸಣ್ಣ ಬಾಲಕರು ಕೂಡ ಅವನಿಗೆ ಕಲ್ಲು ಹೊಡೆಯುತ್ತಿದ್ದರು. ಮೇಜರ್ ಅಲನ್ ಮಾರ್ಷಲ್ರನ್ನು ಅಂತಾರಾಷ್ಟ್ರೀಯ ಮಾಧ್ಯಮದ ಜೊತೆಗೆ ಫೋನ್ನಲ್ಲಿ ಮಾತಾಡುವಂತೆ ಒತ್ತಾಯಿಸಲಾಗುತ್ತಿತ್ತು, ಒಪ್ಪದಿದ್ದಾಗ ಕೊಲ್ಲುವುದಾಗಿ ಹೆದರಿಸುತಿದ್ದರು. ಇದನ್ನು ಪರಿವೀಕ್ಷಣಾ ತಂಡ ಮುಖ್ಯನೆಲೆಗೆ ವರದಿ ಮಾಡುತ್ತಿತ್ತು.


ಸಿಯಾರ್ ಲಿಯೋನ್ನ ಮುಖ್ಯ ನದಿಯಾದ ರೊಕೆಲ್ ಕ್ರೀಕ್ ನ ಉತ್ತರ ಭಾಗದಲ್ಲಿ ಒತ್ತೆಯಾಳುಗಳನ್ನು ಕೂಡಿ ಹಾಕಿದ ಗಬೇರಿ ಬಾನ ಇದ್ದರೆ, ನದಿಯ ದಕ್ಷಿಣ ಭಾಗದ ಮ್ಯಾಗ್ಬೇನಿಯಲ್ಲಿ  ಅವರದ್ದೆ ಇನ್ನೊಂದು ತಾಣವಿತ್ತು. ಸಾಸ್ ತಂಡ  ಕೇವಲ ಗಬೇರಿ ಬಾನಕ್ಕೆ ಧಾಳಿ ನಡೆಸಿದರೆ ಅಲ್ಲಿಂದ ಸುಮಾರು 2 km ದೂರದ ಮ್ಯಾಗ್ಬೇನಿಯಲ್ಲಿದ್ದ ಉಗ್ರರ ಪ್ರತಿರೋಧ ಎದುರಿಸಬೇಕಿತ್ತು. ಹಾಗಾಗಿ ಏಕಕಾಲದಲ್ಲಿ ನದಿಯ ಎರಡು ಬದಿ ಧಾಳಿ ಮಾಡಬೇಕಿತ್ತು. ಈ ಸಂಯುಕ್ತ ಧಾಳಿಗೆ ಬ್ರಿಟಿಷ್ ಪ್ಯಾರಾಚೂಟ್ ರೆಜಿಮೆಂಟ್ನ 130 ಯೋಧರನ್ನು ಬಳಸಿಕೊಳ್ಳಲು ನಿರ್ಧರಿಸಿದರು. ದಟ್ಟವಾದ ಅರಣ್ಯ, ಅಪಾಯಕಾರಿ ರಸ್ತೆಮಾರ್ಗ ಮತ್ತು ಹರಿಯುವ ನದಿಯಿಂದಾಗಿ ವಾಯುಮಾರ್ಗದಲ್ಲಿ ಧಾಳಿ ಮಾಡಲು ಯೋಜಿಸಲಾಯಿತು. ಶತ್ರುಗಳು ಹೊಂದಿರುವ ಆಯುಧಗಳು, ಚಲನವಲನ ಹಾಗು ಹೆಲಿಕ್ಯಾಪ್ಟರ್ ಇಳಿಯಲು ಸೂಕ್ತ ಜಾಗ ಮೊದಲಾದ ಮಾಹಿತಿಯನ್ನು ಸಾಸ್ ನ   ಪರಿವೀಕ್ಷಣಾ ತಂಡ ಒದಗಿಸಿತು. ಒಂದು ರಹಸ್ಯ ತಾಣದಲ್ಲಿ ಕಾರ್ಯಾಚರಣೆಯ ರಿಹರ್ಸಲ್ ಕೂಡ ನಡೆಸಿದ್ದರು, ಏಕೆಂದರೆ 12 ಮಂದಿ ಸೇನೆಯ ಒತ್ತೆಯಾಳುಗಳು ಹಾಗು ಹೀಗೆಯೇ ಬಂಧಿತರಾಗಿದ್ದ ಕೆಲವು ಸಿಯರ್ ಲಿಯೋನ್ ನಾಗರಿಕರ ಪ್ರಾಣಕ್ಕೆ ಕುತ್ತು ಉಂಟಾಗಬಾರದಿತ್ತು.

 ಅಂತೆಯೇ ಸೆಪ್ಟೆಂಬರ್ 10ರಂದು ಸಂಜೆ 6 ಗಂಟೆಗೆ, ಮೂರು ಚೀನೂಕ್  ಹೆಲಿಕಾಪ್ಟರ್ನಲ್ಲಿ ಎರಡು ತಂಡ ಹೊರಟಿತ್ತು. ಸಾಸ್ ನ ತಂಡ ಗಬೇರಿ ಬಾನದತ್ತ ಹೊರಟರೆ ಮತ್ತೊಂದು ಹೆಲಿಕಾಪ್ಟರನಲ್ಲಿ  ಪ್ಯಾರಾಚೂಟ್ ರೆಜಿಮೆಂಟ್ ಮ್ಯಾಗ್ಬೇನಿಗೆ ಹೋಯಿತು. ನಾಯಕ ಪೋಡೇ ಕಲ್ಲೆ ಸೇರಿದಂತೆ ಅತಿಯಾದ ಅಮಲು ಪದಾರ್ಥ ಸೇವಿಸಿದ  ಉಗ್ರರು ನಿದ್ದೆಯಲ್ಲಿದ್ದರು. ಹಠಾತ್ತಾಗಿ ಹೆಲಿಕ್ಯಾಪ್ಟರ್ ಸದ್ದು  ಕೇಳಿ ಏನೋ ಮಸಲತ್ತಿನ ಶಂಕೆ ಮೂಡಿ, ಒತ್ತೆಯಾಳುಗಳನ್ನು ಕೊಲ್ಲಲು  ಧಾವಿಸಿದರು , ಈ ಹಂತದಲ್ಲಿ ಹೆಲಿಕ್ಯಾಪ್ಟರ್ನಲ್ಲಿದ್ದ ವಿಶೇಷ ತಂಡ ನೆಲಕ್ಕಿಳಿಯದೆ ಏನು ಮಾಡುವಂತಿರಲಿಲ್ಲ. ಆದರೆ ಉಗ್ರರ ಅರಿವಿಗೂ ಬಾರದ ವಿಚಾರವೊಂದಿತ್ತು. ಕಳೆದ ಒಂದು ವಾರದಿಂದ ನೆಲದಲ್ಲಿ ಅಡಗಿ ಕುಳಿತಿದ್ದ ಸಾಸ್ ನ ಪರಿವೀಕ್ಷಣಾ ತಂಡ, ಒತ್ತೆಯಾಳುಗಳನ್ನು ಇಟ್ಟಿದ್ದ ಕಟ್ಟಡದ 50 mtr ಸಮೀಪಕ್ಕೆ ಹೋಗಿತ್ತು. ಕೊಲ್ಲಲು ಓಡಿಬಂದ ಉಗ್ರರು ಗುಂಡೇಟಿಗೆ ಬಲಿಯಾದರು. ಹೆಲಿಕಾಪ್ಟರ್ನಲ್ಲಿದ್ದ  ತಂಡ ಹಗ್ಗದ ಸಹಾಯದಿಂದ ನೆಲಕ್ಕೆ ಇಳಿಯಿತು. ಹೀಗೆ ಇಳಿಯುತ್ತಿರುವಾಗಲೇ ಬ್ರಾಡ್ ಟಿನಿಯನ್ ಫ್ಲ್ಯಾಂಕ್ ಎನ್ನುವ ಯುವ ಯೋಧನಿಗೆ ಗುಂಟೇಟು ತಗುಲಿತು, ಗಾಯಾಳುವನ್ನು ತಕ್ಷಣವೇ ಮತ್ತೆ ಹೆಲಿಕ್ಯಾಪ್ಟರ್ಗೆ ಹತ್ತಿಸಿದರು. ಉಳಿದವರು ಇಳಿದು ಹೋಗಿ ಉಗ್ರರನ್ನು ಸಂಹರಿಸಹತ್ತಿದ್ದರು. ಗುಂಡಿಯ ಕೊಳಕಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಮುಸ ಬಂಗುರಾರನ್ನು ಸೇರಿದಂತೆ ಎಲ್ಲಾ ಒತ್ತೆಯಾಳುಗಳನ್ನು ಹೆಲಿಕಾಪ್ಟರ್ಗೆ ಸುರಕ್ಷಿತವಾಗಿ ಹತ್ತಿಸಲಾಯಿತು. ಸ್ವಯಂಘೋಷಿತ ಬ್ರಿಗೇಡಿಯರ್ ಪೋಡೇ ಕಲ್ಲೆ ತನ್ನ ಬೆಡ್ ಕೆಳಗೆ ಅವಿತುಕೊಂಡಿದ್ದ, ಅವನನ್ನು ಬಂಧಿಸಲಾಯಿತು. ದಿಢೀರ್ ದಾಳಿಯಿಂದ ಬೆಚ್ಚಿದ ಉಗ್ರರು ಸಾವರಿಸಿಕೊಂಡು ಪ್ರತಿಧಾಳಿ ಆರಂಭಿಸಿದ್ದರು. ಆದರೆ ತುಂಬಾ ಹೊತ್ತು ಅವರ ಆಟ ನಡೆಯಲಿಲ್ಲ. 30 ನಿಮಿಷದೊಳಗೆ ಗಾಯಾಳು ಮತ್ತು ರಕ್ಷಿಸಲ್ಪಟ್ಟ ಗಸ್ತುತಂಡದ ಯೋಧರನ್ನು ಹೊತ್ತ ಹೆಲಿಕ್ಯಾಪ್ಟರ್ ಮರು ಪ್ರಯಾಣ ಬೆಳೆಸಿತ್ತು.

ಧಾಳಿಯಲ್ಲಿ ನಾಶವಾದ ಕಟ್ಟಡ 

ಇತ್ತ ಕಡೆ ಮ್ಯಾಗ್ಬೇನಿಯಲ್ಲಿ, 130 ಪ್ಯಾರಾಚೂಟ್ ರೆಜಿಮೆಂಟ್ ಯೋಧರನ್ನು ಹೊತ್ತ ಹೆಲಿಕ್ಯಾಪ್ಟರ್ ಕಾರ್ಯಾಚರಣೆ ಶುರುಮಾಡಿತು. ವಿಮಾನ ನಿರೋಧಕ ಕ್ಷಿಪಣಿ, A.K- 47 ಹಾಗು ಮಷೀನ್ ಗನ್  ಮೊದಲಾದ ಆಧುನಿಕ ಶಸ್ತ್ರ ಹೊಂದಿದ್ದ ಉಗ್ರರ ಒಂದು ಹೊಡೆತ ಬಿದ್ದರೂ ಹೆಲಿಕ್ಯಾಪ್ಟರ್ ನೆಲಕ್ಕೆ ಉರುಳುತ್ತಿತ್ತು.  ದುರದೃಷ್ಟವಶಾತ್ ಯೋಧರು ಹಗ್ಗದಿಂದ ಇಳಿಯುವ ಸ್ಥಳ ಕೆಸರಿನಿಂದ ಕೂಡಿದ ನೆಲವಾಗಿತ್ತು. ಹೇಗೋ ಇಳಿದ ಯೋಧರ ಸೆಕೆಂಡ್ ಇನ್ ಕಮಾಂಡ್ ಡನ್ನಿ ಮ್ಯಾಥ್ಯೂ ಗೆ ಗುಂಡು ತಗುಲಿತ್ತು. ಗಾಬರಿಯಾಗದೆ ಯೋಧರು ಉಗ್ರರ ಬೇಟೆಗೆ ಇಳಿದರು. ಅಡಗಿಸಿಟ್ಟಿದ್ದ ವಜ್ರಗಳನ್ನು ವಶಪಡಿಸಿಕೊಳ್ಳಲಾಯಿತು. ಉಗ್ರರಿಂದ ಗಸ್ತುಪಡೆಯ ವಾಹನಗಳನ್ನು ಮರುವಶಮಾಡಲಾಯಿತು, ಅವರ ಎಲ್ಲ ಸಂಪನ್ನೂಲಗಳನ್ನು ನಾಶ ಮಾಡಿದ ನಂತರ ಬದುಕುಳಿದ ಉಗ್ರರು ದಟ್ಟ ಕಾಡಿನತ್ತ ಪರಾರಿಯಾದರು.

ನದಿಯ ಎರಡು ಕಡೆ ಉಗ್ರರಿಗೆ ಅಪಾರ ಹಾನಿಯಾಗಿತ್ತು. ವೆಸ್ಟ್ ಸೈಡ್ ಬಾಯ್ ಗಳ 25 ಕ್ಕೂ ಹೆಚ್ಚು ಮೃತದೇಹಗಳು ಸಿಕ್ಕವು. ಇನ್ನು ಹಲವರ ಮೃತದೇಹಗಳು ನಂತರದ ದಿನಗಳಲ್ಲಿ ಕಾಡಿನಲ್ಲಿ ಪತ್ತೆಯಾಯ್ತು.  ಓಡಿ ಹೋಗಿದ್ದ ಉಗ್ರರು ಸೇನೆಗೆ ಶರಣಾದರು. ವಿಶೇಷ ಪಡೆಯ ಯೋಧ ಬ್ರಾಡ್ ಟಿನಿಯನ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಅತಿ ಬಲಿಷ್ಠ ಹಾಗು ಭೀಭತ್ಸ ವೆಸ್ಟ್ ಸೈಡ್ ಬಾಯ್ಸ್ ಗಳ ಸೋಲಿನ ಕತೆ ಕೇಳಿದ ಇನ್ನುಳಿದ ಬಂಡುಕೋರರಲ್ಲಿ ಭೀತಿಹುಟ್ಟಿ ಕೊನೆಗೆ ಅವರು ಶರಣಾದರು. ಕೆಲವೇ ತಿಂಗಳುಗಳಲ್ಲಿ ನಾಗರಿಕ ಯುದ್ಧ ಮುಗಿಯಿತು. ಸೆರೆ ಸಿಕ್ಕ ನಾಯಕ ಪೋಡೇ ಕಲ್ಲೆ ಸೇರಿದಂತೆ ಎಲ್ಲರಿಗೂ ಯುದ್ಧಾಪರಾಧಕ್ಕಾಗಿ ಶಿಕ್ಷೆಯಾಯಿತು. ಸಾಸ್ ನ ಸಾಹಸಕತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಯಿತು. ಅಂದು ಹಿಂಸಿಸಲ್ಪಟ್ಟು ಬದುಕುವ ಅಸೆ ಕಳೆದುಕೊಂಡಿದ್ದ ಮೂಸಾ ಬಂಗೂರ ಇಂದು ಸೇನೆಯಲ್ಲಿ ಮೇಜರ್ ಹುದ್ದೆಗೇರಿದ್ದಾರೆ. ಸಿಯರ್ ಲಿಯೋನ್ನಲ್ಲಿ ಇಂದಿಗೂ ಬಡತನವಿದೆ. ಆದರೆ ಶಾಂತಿ ನೆಲೆಸಿದೆ.


 ಆಫ್ರಿಕಾದ ಕಾಡಿನಲ್ಲೊಂದು ಸರ್ಜಿಕಲ್ ಸ್ಟ್ರೈಕ್ ಭಾಗ-1


                                                                                                               -Tharanatha Sona

www.nilume.net ನಲ್ಲಿ ಪ್ರಕಟವಾಗಿದ್ದ ಲೇಖನ