Thursday, October 19, 2017

ನಿಮ್ಮ ಕಾಲ ಕೆಳಗೆ ಏನಿದೆ?... ಇಲ್ಲಿ ನೋಡಿ!


"ನೀವು ಹಾಕಾಂಗ್ ನಲ್ಲಿ ನೆಲ ಹೊಕ್ಕರೆ ದ-ಅಮೇರಿಕಾದಲ್ಲಿ ಹೊರಬರಬಹುದು!"



ನಿಮಗೆಲ್ಲಾ ಚಿಕ್ಕಂದಿನಿಂದಲೂ ಒಂದು ಆಸೆ ಇರಬಹುದು, ಕೆಲವರಿಗೆ ಈಗ ಅರಿವಾಗಿರಬಹುದು. ನಮ್ಮ ಕಾಲ ಕೆಳಗಿನಿಂದ ಭೂಮಿಯನ್ನು ಕೊರೆಯುತ್ತ ಆಳಕ್ಕೆ ಹೋದರೆ, ಇನ್ನೊಂದು ಬದಿಯಲ್ಲಿ ಏನು? ಇರಬಹುದು ಎಂದು!. ಪ್ರಾಕ್ಟಿಕಲ್ ಅಗಿ ಇದು ಕಾರ್ಯಸಾಧ್ಯವಾಗಲಾರದು.ಸರಾಸರಿ 12,742 ಕಿ.ಮೀ ಇರುವ ಭೂಮಿಯ ಎರಡು ಮೇಲ್ಮೈ ಆಂತರವನ್ನು ಕೊರೆಯುವುದು, ಸದ್ಯ ಲಭ್ಯವಿರುವ ಯಾವ ಯಂತ್ರದಿಂದಲೂ ಸಾಧ್ಯವಿಲ್ಲ ಬಿಡಿ.

"ಕೋಲ ಸೂಪರ್-ಡೀಪ್ ಪ್ರೊಜೆಕ್ಟ್" ಎನ್ನುವ ಹೆಸರಿನಲ್ಲಿ, ಸೊವಿಯತ್ ರಷ್ಯಾ ಎಪ್ಪತ್ತರ ದಶಕದಲ್ಲಿ ಇಂತಹದೊಂದು ಯೋಜನೆಯನ್ನು ಕೈಗೆತ್ತಿಕೊಂಡಿತು. ರಷ್ಯಾದ 'ಕೋಲ ಪೆನಿಸುನ್ ' ಎನ್ನುವ ಸ್ಥಳದಲ್ಲಿ  ಭೂಮಿ ಕೊರೆಯುವ ಯೋಜನೆ ಆರಂಭಗೊಂಡು, 1994 ರವರೆಗೆ, ಭರ್ತಿ 24 ವರ್ಷ ಎಡೆಬಿಡದೆ 23 ಸೆ.ಮೀ ಅಗಲವಾಗಿ ಕೊರೆದರೂ ಕೂಡ, ಕೊರೆದ ಆಳವೆಷ್ಟು ಗೊತ್ತೆ? 12,262 ಮೀ, ಅರ್ಥಾತ್ 12 ಕಿ.ಮೀ! ಕೊನೆಗೆ 180 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ಭೂಮಿ ಕೊರೆಯುವ ಉಪಕರಣಗಳೂ ಹಾಳಾಗಿ ಯೋಜನೆಯನ್ನು ಸ್ಥಗಿತಗೊಳಿಸ ಬೇಕಾಗಿ ಬಂತು. 2008 ರವರೆಗೆ ಇದೇ ಭೂಮಿಯ ಅತಿ ದೊಡ್ಡ ಮಾನವ ನಿರ್ಮಿತ ಬಾವಿಯಾಗಿತ್ತು. ನಂತರ ಕತಾರ್ ಹಾಗೂ ರಷ್ಯಾದ ತೈಲಬಾವಿಗಳು ಇದನ್ನು ಹಿಂದಿಕ್ಕಿದವು.

ಭೂಮಿಯ ಆಳಕ್ಕೆ ಹೋದಂತೆ ತಾಪ ಆಧಿಕವಾಗುವುದ್ದರಿಂದ ಇವುಗಳ ಕಾರ್ಯಸಾಧ್ಯತೆ ಸುಲಭವಲ್ಲ. ಇನ್ನು ನೀವು ಭೂಮಿಯ ಒಳಗಿನಿಂದ ಆಚೆ ಮೇಲ್ಮೈಯನ್ನು ತಲುಪಲು ಸಾಗುವಾಗ ಸಿಗುವ, ಭೂಮಿಯ ಕೇಂದ್ರ ಭಾಗದ ಉಷ್ಣಾಂಶ ಎಷ್ಟುಗೊತ್ತೆ? 7000 ಡಿಗ್ರಿ ಸೆಲ್ಸಿಯಸ್ ಅಷ್ಟೇ. 35-40 °C ಯ ಬಿಸಿಲಿಗೆ ಬೆವರುವ ನಾವುಗಳು ಅಷ್ಟೊಂದು ತಾಪಕ್ಕೆ ಉಳಿಯಲು ಉಂಟೇ? ಇಷ್ಟು ಆಳಕ್ಕೆ ತಲುಪುವ ಮೊದಲೇ ಉಕ್ಕಿಬರುವ ಲಾವಾರಸದಿಂದ ಪಾರಾಗುವುದು ಹೇಗೆ?
ಇನ್ನೂ ನಮ್ಮ ಕಾಲ ಕೆಳಗೆ, ಅಂದರೆ ಭೂಮಿಯ ಇನ್ನೊಂದು ಬದಿಯಲ್ಲಿ ಏನಿದೆ ಎಂದು ತಿಳಿಸಿಕೊಡುವ ನಕ್ಷೆಗೆ "ಆ್ಯಂಟಿಪೊಡೆಸ್ ಮ್ಯಾಪ್" ಎಂದು ಹೆಸರು. ಇದರ ಮೂಲನಾಮ 'ಆ್ಯಂಟಿಪೋಡ್' ಗ್ರೀಕ್ ನ antípous ಎನ್ನುವ ಶಬ್ದದಿಂದ ಬಂದಿದೆ. ಗೋಳಕಾರವಾಗಿರುವ ಭೂಮಿಯಲ್ಲಿ ನೀವು ನಿಂತಿರುವ ಬಿಂದುವಿನಿಂದ, ಭೂಕೇಂದ್ರೀಯ ಭಾಗಕ್ಕೆ ಎಳೆದ ರೇಖೆಯ ಮುಂದೆ ಕಾಣಸಿಗುವ ಬಿಂದು/ಪ್ರದೇಶವೇ ನಿಮ್ಮ ಆ್ಯಂಟಿಪೋಡ್. ಒಂದು ಪ್ರದೇಶ ಹಾಗೂ ಅದರ ಆ್ಯಂಟಿಪೋಡ್ ಪ್ರದೇಶದ ನಡುವೆ ಸಾಮಾನ್ಯವಾಗಿ 12 ಗಂಟೆಗಳ ವ್ಯತ್ಯಾಸ ಇರುತ್ತದೆ (ಓರೆಕೋರೆಯಾಗಿ ಎಳೆದ 0+ Standard Time ರೇಖೆಯ ಕೆಲವು ಪ್ರದೇಶವನ್ನು ಹೊರತುಪಡಿಸಿ).

ಸಮಭಾಜಕ ವೃತ್ತದಿಂದ ಉತ್ತರ ಭಾಗದಲ್ಲಿರುವ ಭಾರತದ ಆ್ಯಂಟಿಪೋಡ್, ದಕ್ಷಿಣ ಆಮೇರಿಕಾ ಖಂಡವನ್ನು ಆವರಿಸಿರುವ ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿದೆ. ಈ ಪ್ರದೇಶ ದಕ್ಷಿಣ ಧ್ರುವದಲ್ಲಿರಲು ಕಾರಣ, ಭೂಮಿಯ ಆಕ್ಷಾಂಶ 23.5ಡಿಗ್ರಿಗಳಷ್ಟು ವಾಲಿರುವುದು. ಇದರಿಂದಾಗಿ ಭೂಮಧ್ಯ ರೇಖೆಯ ಉತ್ತರದ ಪ್ರದೇಶಗಳ antipode ದಕ್ಷಿಣ ಭಾಗದಲ್ಲಿರುತ್ತದೆ, ಹಾಗು ದಕ್ಷಿಣದ ಪ್ರದೇಶಗಳ ಆ್ಯಂಟಿಪೋಡ್ ಉತ್ತರಭಾಗದಲ್ಲಿದೆ. ಪೆರು ದೇಶದ ತೀರದಿಂದ ಅಂದಾಜು 2000 ಕಿ.ಮೀ ದೂರದಲ್ಲಿ ಭಾರತದ ಆ್ಯಂಟಿಪೋಡ್ ಇದೆ. ಭಾರತೀಯರ ಕಾಲಕೆಳಗೆ ಏನಿದೆ ಎನ್ನುವ ಪ್ರಶ್ನೆಗೆ ಉತ್ತರ- ದಕ್ಷಿಣ ಪೆಸಿಫಿಕ್ ಮಹಾಸಾಗರ.

ಕೆಂಪು ಭಾಗದ ಆಂಟಿಪೋಡ್ಸ್ ಹಳದಿ ಭಾಗದಲ್ಲಿದೆ

ಅಂದ ಹಾಗೆ, ನಿಮ್ಮ ವಿರುದ್ಧ ಮೇಲ್ಮೈನಲ್ಲಿ ಭೂಮಿಯಲ್ಲಿ ಯಾವ ಪ್ರದೇಶವಿದೆ ಎಂದೂ ತಿಳಿಯಲು "http://antipodr.com" ಎನ್ನುವ ಜಾಲತಾಣವಿದೆ.



                        -Tharanatha Sona

Wednesday, October 4, 2017

ಕಾಡಿನಲ್ಲಿ ಒಂಟಿ ವೈಮಾನಿಕ ಭಾಗ-2


ತಮ್ಮ ಸೇನೆಯ ಯುದ್ಧ ವಿಮಾನ ನೆಲಕ್ಕುರುಳಿದ ಸುದ್ದಿ ಲಂಡನ್ನಲ್ಲಿದ್ದ ನ್ಯಾಟೋ ಕೇಂದ್ರಕ್ಕೆ ತಲುಪಿತ್ತು. ಒಂದು ವೇಳೆ ಪೈಲಟ್ ಬದುಕಿದ್ದರೆ, ಸಂಪರ್ಕಿಸಲು ಸಾಧ್ಯವಾಗುವಂತೆ  'US- Kearsarge'  ಎನ್ನುವ ನೌಕಾಪಡೆ ಕಾವಲು ನೌಕೆಯನ್ನು ಬೋಸ್ನಿಯಾದ ಸಮುದ್ರ ತೀರದತ್ತ ಕಳುಹಿಸಲಾಯಿತು. ರಾತ್ರಿಯವರೆಗೆ ಅಡಗಿದ ಸ್ಥಳದಿಂದ ಏಳದೇ, 11 ಗಂಟೆ ಸಮಯದಲ್ಲಿ ಪೈಲಟ್ ತನ್ನ ರೇಡಿಯೋ ಉಪಕರಣ ಹೊರತೆಗೆದರು. ಅದರಿಂದ ಕಳುಹಿಸಿದ ಸಂಕೇತಗಳು 160 km ದೂರ ಸಾಗಬಲ್ಲ ಶಕ್ತಿ ಹೊಂದಿದ್ದವು ದುರಾದೃಷ್ಟವಶಾತ್ ಸಂಪರ್ಕ ಸಾಧ್ಯವಾಗಲಿಲ್ಲ. ಗುಣಮಟ್ಟದ ಸಂಕೇತ ಸಿಗಬೇಕಾದರೆ ಎತ್ತರದ ಪ್ರದೇಶಕ್ಕೆ ಚಲಿಸಬೇಕಿತ್ತು. ಮರುದಿ ಸರ್ಬ್ ಸೇನೆ ಹಾಗೂ ಪೊಲೀಸ್ ರಿಗೆ ನೀವು ಬಿದ್ದ ಪೈಲಟ್ ನ್ನು ಹುಡುಕುವ ಕೆಲಸ ನಿಲ್ಲಿಸಬೇಕೆಂದು ಆದೇಶ ಬಂತು. -ಗ್ರೇಡಿ ಪಾಲಿಗೆ ಇದು ಅಪಾಯಕಾರಿಯಾಗಿತ್ತು, ಆಶ್ಚರ್ಯವಾಯಿತೇ!!!. ಇನ್ನು ಹುಡುಕಾಟದ ಕೆಲಸವನ್ನು ಅರೆಸೇನೆ ಹಾಗು ಕೆಲವು ಶಶಸ್ತ್ರ ಕ್ರಿಮಿನಲ್ ಗ್ಯಾಂಗ್ ಗಳು ನಡೆಸುತ್ತವೆ ಎಂದು ಇದರ ಅರ್ಥ. ಬೊಸ್ನಿಯಾದ ನೆಲ ಅಂದು ಅಂತಹ ಅರಾಜಕತೆಯನ್ನು ಕಂಡಿತ್ತು. ಅಕಸ್ಮಾತ್ ಇವರ ಕೈಗೆ ಸಿಕ್ಕು ಬಿದ್ದರೆ ಕಥೆ ಮುಗಿದಂತೆಯೇ. ಇವರು ತಮ್ಮ ಶತ್ರುಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಮುಗಿಸಬೇಕೆಂಬ ಮನಸ್ಥಿತಿ ಉಳ್ಳವರು. ಸೆರೆಸಿಕ್ಕ ಯುದ್ಧ ಕೈದಿಯ ಜೀವ ಉಳಿಸಬೇಕೆನ್ನುವ ಯಾವ ಯದ್ದಕಾಲದ ನಿಯಮ ಇವರಿಗಿರಲಿಲ್ಲ.

 ಓ-ಗ್ರೇಡಿ ಯಾರಿಗೂ ತಿಳಿಯದಂತೆ ರಾತ್ರಿ ಮಾತ್ರ ಚಲಿಸಲು ನಿರ್ಧರಿಸಿದರು. ಕಾಡಿನಲ್ಲಿ ಎರಡು ದಿನ ಇದ್ದು ಹಸಿವು ಹಾಗು ಬಾಯಾರಿಕೆ ಶುರುವಾಯಿತು. ಕಿಸೆಯಲ್ಲಿ ಉಳಿದಿದ್ದ 3 ಪಾಕೆಟ್ ನೀರು ಖಾಲಿಯಾಯಿತು. ಹಸಿವಿಗೆ ಎಲೆ,ಗೆಡ್ಡೆ ಹಾಗು ಇರುವೆಗಳನ್ನು ಕೂಡ ಸೇವಿಸಿದರುಮೂರನೇ ದಿನದ ಸಂಜೆ ಬಿದ್ದ ಸ್ವಲ್ಪ ಮಳೆ ಅವರ ದಾಹ ತೀರಿಸಿತು. ನಾಲ್ಕನೇ ದಿನ ಬೆಟ್ಟದತ್ತ ರಾತ್ರಿ ಚಲಿಸುತ್ತಿದ್ದಾಗ ಆಕಾಶದಲ್ಲಿ ಅಮೆರಿಕನ್ ಸೇನೆಯ ಮಿಗ್ ವಿಮಾನವೊಂದು ಕಾಣಿಸಿತು. ಆದರೆ ಸಂಪರ್ಕ ಸಾಧ್ಯವಾಗಲಿಲ್ಲ. ನೀರು-ಆಹಾರವಿಲ್ಲದೆ ದೇಹ ಶಕ್ತಿ ಗುಂದಿತ್ತು. ಸೇನೆಯಲ್ಲಿ ಪಡೆದ ಕಠಿಣ ತರಬೇತಿ ಮಾತ್ರ ಅವರನ್ನು ಜೀವಂತವಾಗಿಟ್ಟಿತು. ಇನ್ನು ಎತ್ತರದ ಬೆಟ್ಟದತ್ತ ನಡೆದರೆ ಮಾತ್ರ ಗುಣಮಟ್ಟದ ಸಂಕೇತ ಸಿಗುತಿತ್ತು. ಇನ್ನೂ ಇವರು ಬದುಕಿರುವ ವಿಷಯ ನ್ಯಾಟೊ ಸೇನೆಗೆ ಖಚಿತವಾಗಿರಲಿಲ್ಲ, ಅದರೆ ಮಾಹಿತಿ ಗೊತ್ತಿದ್ದ ಸರ್ಬ್ ಸೇನೆ ಹುಡುಕುತ್ತಿತ್ತು. ಪೈಲಟ್ ರೇಡಿಯೋ ಉಪಕರಣ ಕಳುಹಿಸುತಿದ್ದ ಸಿಗ್ನಲ್ ಗಳನ್ನು ಅವರು ಕೂಡ ಸ್ವೀಕರಿಸುವ ಸಂಭವವಿತ್ತು.

ಜೂನ್ ಎಂಟರಂದು ರಾತ್ರಿ ಕಷ್ಟಪಟ್ಟು ಪೈಲಟ್ ಬೆಟ್ಟದ ತುದಿಗೆ ಹತ್ತಿದ್ದರು. ರಾತ್ರಿ 1.12 ಸಮಯ, ಫ್ಲಾಶ್-ಮ್ಯಾನ್ ಗುಪ್ತನಾಮ ಹೊಂದಿದ್ದ ಲಾಂಗ್-ರೈಟ್ ಚಲಾಯಿಸುತ್ತಿದ್ದ ವಿಮಾನ ಮರ್ಕೋಜಿಕ್-ಗ್ರಾಡ್ ಬಳಿ ಹಾರುತಿತ್ತು. ಕಳೆದ ಆರು ದಿನಗಳಿಂದ -ಗ್ರೇಡಿಯಾ ಸುಳಿವು ಇರಲಿಲ್ಲ. ದೈನಂದಿನ ಹಾರಾಟದಂತೆ ಮೂರು ಗಂಟೆಯಿಂದ ಹಾರುತ್ತಿದ್ದ ವಿಮಾನದಲ್ಲಿ ಇಂಧನ ಮುಗಿದು ರಿಸರ್ವ್ ಆಗಿದ್ದರು ಕೂಡ, ಇನ್ನು ಸ್ವಲ್ಪ ಸಮಯ ಹುಡುಕಲು ನಿರ್ಧರಿಸಿದರು. ಇತ್ತ ಕೆಳಗಡೆಯಿಂದ ವಿಮಾನ ನೋಡಿದ -ಗ್ರೇಡಿ ಸಂಪರ್ಕಿಸಲು ಪ್ರಯತ್ನಿಸಿದರು. ಲಾಂಗ್-ರೈಟ್ರ Headphone ನಲ್ಲಿ "ನಾನು ಬಾಷರ್ ಮ್ಯಾನ್-52 ಮಾತನಾಡುತ್ತಿದ್ದೇನೆ'' ಎಂದು ಕೇಳಿದಾಗ ನಂಬಲು ಸಾಧ್ಯವಾಗಲೇ ಇಲ್ಲ. ಅದು ಪೈಲಟ್ ಓ-ಗ್ರೇಡಿಯ ಗುಪ್ತ ನಾಮ. ಲಾಂಗ್ ರೈಟ್ ಕೂಡಲೇ ವಿಷಯವನ್ನು ನ್ಯಾಟೋ ವಾಯುನೆಲೆಗೆ ತಿಳಿಸಿದರು. ಅಷ್ಟರಲ್ಲಿ ಇಂಧನ ಮುಗಿಯುತ್ತ ಬಂದಿದ್ದರಿಂದ ವಾಯುನೆಲೆಗೆ ಹಿಂತಿರುಗಲೇ ಬೇಕಾಯಿತು. ಕಾಡಿನಲ್ಲಿದ್ದ ಪೈಲಟ್ಗೆ ನ್ಯಾಟೋ ವಿಮಾನದೊಂದಿಗೆ ಸಂಪರ್ಕ ಸಾಧ್ಯವಾದ ವಿಷಯ ಸರ್ಬ್ ಸೇನೆಗೆ ತಿಳಿದು ಅವರು ಚುರುಕಾದರು. ಇತ್ತ ಲಂಡನ್ನಲ್ಲಿದ್ದ ನ್ಯಾಟೋ ಅಡ್ಮಿರಲ್ ಲೈಗ್ಟನ್ ಸ್ಮಿತ್ ರಿಗೆ ವಿಷಯ ತಿಳಿಯಿತು. ಕೂಡಲೇ ಅವರು "US- Kearsarge" ನಲ್ಲಿದ್ದ ಅಮೆರಿಕಾದ ನೌಕಾಸೇನೆಯ ಕರ್ನಲ್ ಮಾರ್ಟಿನ್ ಬರ್ನ್ಟ್ ರಿಗೆ ಕಾರ್ಯಾಚರಣೆ ಆರಂಭಿಸಲು ತಿಳಿಸಿದರು. ಯಾವುದೇ ಪೂರ್ವಸಿದ್ಧತೆಗಳು ಇಲ್ಲದಿದ್ದರೂ ತಕ್ಷಣದ ಕಾರ್ಯಾಚರಣೆ ಅಗತ್ಯವಾಗಿತ್ತು. ಯಾವುದೇ ಸಮಯದಲ್ಲಿ ಪೈಲಟ್ ಸರ್ಬ್ ಸೇನೆಯ ಕೈಗೆ ಸಿಕ್ಕಿ ಬೀಳುವ ಸಂಭವವಿತ್ತು.


.
ಬೆಳಿಗ್ಗೆ 5.05ಕ್ಕೆ ಎರಡು Sea Stallion ಹೆಲಿಕಾಪ್ಟರ್ನಲ್ಲಿ 43 ನೌಕಾಪಡೆಯ ಸ್ಪೆಷಲ್ ತಂಡ ಹೊರಟಿತ್ತು . ಬೆನ್ನಹಿಂದೆಯೇ ಎರಡು ಸೂಪರ್ ಕೋಬ್ರಾ ಹೆಲಿಕ್ಯಾಪ್ಟರ್ , ಹರಿಯೆರ್ ಜೆಟ್ ವಿಮಾನಗಳು ಹಾಗು ಟ್ಯಾಂಕ್ ನಿರೋಧಕ ವಿಮಾನಗಳು ಹೊರಟವು. ಹಗಲಿನ ಸಮಯದಲ್ಲಿ ಪೈಲಟ್ ನ್ನು ರಕ್ಷಿಸಲು ಬರುತ್ತಿರುವ ಹೆಲಿಕ್ಯಾಪ್ಟರ್ ಮೇಲೆ ಸರ್ಬ್ ಸೇನೆ ಸುಲಭವಾಗಿ ಧಾಳಿ ಮಾಡುವ ಸಂಭವವಿತ್ತು, ಅದಕ್ಕೆ ಇಷ್ಟು ವಿಮಾನಗಳ ವ್ಯೂಹ ರಚಿಸಿ
ಶತ್ರುಗಳ ನೋಟವನ್ನು ತಪ್ಪಿಸುತ್ತಾ -ಗ್ರಡಿ ಅಡಗಿದ್ದ ಸ್ಥಳಕ್ಕೆ ಹೆಲಿಕ್ಯಾಪ್ಟರ್ ತಲುಪಿದಾಗ ಸಮಯ ಬೆಳಿಗ್ಗೆ 6.42. 

ಜಿ.ಪಿ.ಎಸ್ (G.P.S) ಉಪಕರಣದ ಸಹಾಯದಿಂದ ತನ್ನ ಸ್ಥಾನ ತಿಳಿಸಿದ -ಗ್ರಡಿ, ತನ್ನ ಇರುವಿಕೆಯನ್ನು ತೋರಿಸಲು ಹೆಲಿಕ್ಯಾಪ್ಟರ್ ಹತ್ತಿರ ಬರುತ್ತಿದ್ದಂತೆಯೇ ಹಳದಿ ಬೆಳಕನ್ನು ಹೊತ್ತಿಸಿದರು. ಹೆಲಿಕಾಪ್ಟರ್ನಿಂದ ಇಳಿದ ವಿಶೇಷ ರಕ್ಷಣಾ ತಂಡದ ಸದಸ್ಯರು ಪೈಲಟ್ ನ್ನು ಹೆಲಿಕ್ಯಾಪ್ಟರ್ಗೆ ಹತ್ತಿಸಿದರು. ಒಂದು ವಾರದಿಂದ ಸರ್ಬ್ ಸೇನೆ ಹುಡುಕುತ್ತಿದ್ದ ಪೈಲಟ್ ನ್ನು ಕೇವಲ 7 ನಿಮಿಷದ ಹುಡುಕಿ ರಕ್ಷಿಸಿದರು. ಸುತ್ತಲೂ ಕಾದು ಕುಳಿತಿದ್ದ ಸರ್ಬ್ ಸೇನೆ ಹೆಲಿಕಾಪ್ಟರ್ನತ್ತ ಗುಂಡಿನ ಮಳೆಗೆರೆಯಿತುಕ್ಷಿಪಣಿಗಳ ರಾಡಾರ್ ಗಳಿಗೆ ಸಿಗದಂತೆ ಕೆಳಭಾಗದಲ್ಲಿ ವೇಗವಾಗಿ ಹಾರಿದ ಹೆಲಿಕ್ಯಾಪ್ಟರ್ 7.30 ಹೊತ್ತಿಗೆ ಸಮುದ್ರ ತೀರದಲ್ಲಿದ್ದ ವಿಮಾನ ವಾಹಕ ಹಡಗಿನಲ್ಲಿ ಇಳಿಯಿತು. ಯಾವುದೇ ಪ್ರಾಣಹಾಣಿಯಿಲ್ಲದೇ ಕಾರ್ಯಾಚರಣೆ ಯಶಸ್ವಿಯಾಯಿತು. ಯಾವುದೇ ಮಾಹಿತಿ ಇಲ್ಲದಿದ್ದರೂ ತನ್ನ ಪೈಲಟ್ ಬದುಕಿರಬಹುದೆಂಬ ಆಶಾಭಾವನೆ ಹಾಗೂ ತನ್ನ ರಕ್ಷಣೆಗೆ ತನ್ನವರು ಬಂದೆ ಬರುತ್ತಾರೆ ಎನ್ನುವ ನೀರಿಕ್ಷೆ ಸಾಫಲ್ಯ ಕಂಡಿತು.


ತನ್ನ ಯೊಧನೊಬ್ಬನನ್ನು ರಕ್ಷಿಸಲು ಸಾಧ್ಯವಾಗಿದ್ದಕ್ಕೆ ಅಮೆರಿಕಾ ಅತೀವ ಹೆಮ್ಮೆಪಟ್ಟಿತ್ತು. ತಮ್ಮ ಕೈಯಿಂದ ತಪ್ಪಿಸಿಕೊಂಡು ಪಾರಾದ ಪೈಲಟ್ ಕುರಿತು ಅಂದು ಸರ್ಬ್ ಸೇನೆಯಲ್ಲಿದ್ದ ಅಧಿಕಾರಿ ಹೇಳುವುದಿಷ್ಟು, ''ಒಬ್ಬ ಮನುಷ್ಯನಾಗಿ ನಾನು ಅವರ ಸಾಹಸವನ್ನು ಮೆಚ್ಚುತ್ತೇನೆ , ಆದರೆ ಕರ್ತ್ಯವ್ಯದ ವಿಷಯ ಬಂದಾಗ, ಇದು ನಮ್ಮದೇ ಲೋಪ. ಅವರಿದ್ದ ಸ್ಥಳದ ಇಂಚಿಂಚು ಮಾಹಿತಿ ನಮ್ಮಲ್ಲಿದ್ದರೂ ಕೂಡ ಹಿಡಿಯಲು ಸಾಧ್ಯವಾಗಲಿಲ್ಲ".

1989 ರಲ್ಲಿ ಅಮೆರಿಕನ್ ವಾಯುಸೇನೆಗೆ ಸೇರಿದ್ದ 51 ಹರೆಯದ ಸ್ಕಾಟ್--ಗ್ರಡಿ ಈಗ ನಿವೃತ್ತರಾಗಿ ಅಮೇರಿಕಾದಲ್ಲಿ ನೆಲೆಸಿದ್ದಾರೆ. ತಮ್ಮ ಸಾಹಸದ ಕುರಿತು "Return With HonorBasher Five-Two speaker" ಎಂಬ ಎರಡು ಪುಸ್ತಕ ಬರೆದಿದ್ದಾರೆ, ಹಾಗೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸಾವು ಬೆನ್ನ ಹಿಂದಿದ್ದರೂ, ಬದುಕಿ ಬರಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ. ತಮ್ಮ ಉಪನ್ಯಾಸಗಳಲ್ಲಿ ಕೊನೆಗೆ ಅವರು ಹೇಳುವುದಿಷ್ಟು '' Never Give Up''!!!

Friday, September 22, 2017

ಹತ್ತು ಕೋಟಿಯಾದರೇನು? ಸಿದ್ದ! ಲಕ್ಷ ಕೋಟಿಯಾದರೇನು ಸಿದ್ದ! ನಾವು ನುಂಗೊದಂತು ಶತಃಸಿದ್ದ!!

                                                           ದೇವರಾಜಾರಸ್.ಕಂ  ಮಾರಾಟಕ್ಕಿದೆ


ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ 'ಭೂಸುಧಾರಣೆಯ ಹರಿಕಾರ' ಎಂದು ಕರೆಯಲ್ಪಡುವವರು ಡಿ.ದೇವರಾಜ್ ಅರಸ್. ಅದುವರೆಗಿನ ಅನೇಕ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದ ಹಿಂದುಳಿದ-ಶೋಷಿತ ವರ್ಗಗಳಿಗಾಗಿ, ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದ ಇವರು ಹಿಂದುಳಿದ ವರ್ಗಗಳ ಹರಿಕಾರರೆಂದು ಹೆಸರಾದವರು. ಮೈಸೂರಿನ ಕಲ್ಲಹಳ್ಳಿಯಲ್ಲಿ 20-08-1915 ರಂದು ಜನಿಸಿದ ಅರಸ್, ಎಸ್.ನಿಜಲಿಂಗಪ್ಪ ನಂತರ ಅತಿ ಹೆಚ್ಚು ಅವಧಿಗೆ (1972-80) ಮುಖ್ಯಮಂತ್ರಿಯಾದವರು. ವೃಕ್ಷ ಸಂರಕ್ಷಣಾ ಯೋಜನೆ, ಜೀತ ಪದ್ಧತಿ ನಿಷೇಧ, ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಮೊದಲಾದವನ್ನು ಜಾರಿಗೆ ತಂದು ಜನಮಾನಸದಲ್ಲಿ ನೆಲೆಯಾದರು. ಇಂದು ಬೆಂಗಳೂರಿನಲ್ಲಿ ಅನೇಕ ವಿದೇಶಿ ಕಂಪೆನಿಗಳು ಇರುವ, ರಾಜ್ಯಕ್ಕೆ ಕೊಟ್ಯಾಂತರ ರೂ. ಆದಾಯ ನೀಡುತ್ತಿರುವ ಇಲೆಕ್ಟ್ರಾನಿಕ್ ಸಿಟಿಯ ನಿರ್ಮಾತೃ. ಸ್ವಪಕ್ಷಿಯರಿಂದಲೇ ವಿರೋಧವಿದ್ದರೂ, ಜಾರಿಗೆ ತಂದ  ಭೂಸುಧಾರಣಾ ಕಾಯಿದೆ ಹಾಗೂ ಅದರ ವ್ಯಾಜ್ಯ ವನ್ನು ಬಗೆಹರಿಸಲು ಭೂಸುಧಾರಣಾ ನ್ಯಾಯಮಂಡಲಿ ಸ್ಥಾಪಿಸಿದರು. ಅ ಕಾಲದಲ್ಲಿ ಕರ್ನಾಟಕ ಕಾಂಗ್ರೆಸ್ ನ ಬಹುದೊಡ್ಡ ನಾಯಕರಾಗಿ ಮೆರೆದರೂ ಕೊನೆಗೆ ಇಂದಿರಾಗಾಂಧಿಯ ವಿರೋಧ ಕಟ್ಟಿಕೊಂಡು ರಾಜಕೀಯವಾಗಿ ಮೂಲೆಗುಂಪಾದರು. ಕೊನೆಗೆ 1982 ರ ಜೂನ್ 6 ರಂದು ವಿಧಿವಶರಾದರು.


1915 ರಲ್ಲಿ ಜನಿಸಿದ ಅರಸರ ಜನ್ಮ ಶತಮಾನದ ಅಚರಣೆಗೆ, ಅವರ ಹಾದಿಯಲ್ಲಿಯೇ ನಡೆಯಬೇಕೆಂದುಕೊಂಡಿರುವ ಇಂದಿನ ಘನ(!) ಸರ್ಕಾರ, ಅರಸರ ಕುರಿತಾಗಿ ಸಮಗ್ರ ಮಾಹಿತಿಯನ್ನು ಒಳಗೊಂಡ ವೆಬ್ಸೈಟ್ ಒಂದನ್ನು ಆರಂಭಿಸಿತು. ಜೂನ್ 6ರಂದು ಇದನ್ನು ಲೋಕಾರ್ಪಣೆ ಮಾಡಿದವರು, ಘನ ಸರ್ಕಾರದ ಸಮಾಜಕಲ್ಯಾಣ ಮಂತ್ರಿಗಳು. ಈಗ ಆಗಸ್ಟ್ 17, ನಾಳೆ ಅರಸರ ಪುಣ್ಯತಿಥಿ. ಅರಸರ ನೆನಪಿಗೆ ಅರಂಭಿಸಿದ "www.devrajurs.com" ಎನ್ನುವ ನಾಮಪದ ಈಗ ಮಾರಾಟಕ್ಕೆ ಇದೆ, ಅದು ಕೂಡ ಕೇವಲ 577 ರೂ ಗಳಿಗೆ. ಎಕರೆಗಟ್ಟಲೆ ಭೂಮಿಯನ್ನು ರೈತರಿಗೆ ಒದಗಿಸಿದ ಅರಸರಿಗೆ ಅಂತರ್ಜಾಲದಲ್ಲೊಂದು ಜಾಗವಿಲ್ಲ. ದೇವರಾಜಾರಸ್.ಕಂ ಎನ್ನುವ ಜಾಲತಾಣ,ಇಂದು ಅಂತರ್ಜಾಲದಲ್ಲಿ ಕಾಣಿಸುತ್ತಿಲ್ಲ.ಅಲ್ಲಿಗೆ ಅರಸು ಅವರ ಸಾಧನೆಯನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಲು ಸರ್ಕಾರದ ಪ್ರಯತ್ನ ವ್ಯರ್ಥವಾಯಿತು. ಜಾಲತಾಣ ಸ್ಥಗಿತಗೊಂಡರೆ ಹೊಗಲೀ, ಕನಿಷ್ಟ ಪಕ್ಷ  ಹೆಸರನ್ನಾದರು (Domain Name)  ಉಳಿಸಿಕೊಳ್ಳುವ ಕಾಳಜಿ ತೊರಲಿಲ್ಲ.



ತಲೆಬರಹಕ್ಕೂ -ಲೇಖನಕ್ಕೂ ಸಂಬಂಧವಿಲ್ಲ ಅಂದುಕೊಳ್ಳಬೇಡಿ; ಸಂಬಂಧ ಇದೆ. ವಾರದ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಲತಾಣ ಕಾಲಕಾಲಕ್ಕೆ ಅಪ್ಡೇಟ್ (Update) ಅಗುತ್ತಿಲ್ಲ ಎಂದು ಚರ್ಚೆಯಾಯಿತು (ಅದು ಕೂಡ ಎರಡು ವರ್ಷಗಳಿಂದ).  ಆಗ ಪ್ರವಾಸೋದ್ಯಮ ಇಲಾಖೆಯ ಆಧಿಕಾರಿಗಳು ಉತ್ತರಿಸಿ, "ಜಾಲತಾಣವನ್ನು ಹೊಸದಾಗಿ ವಿನ್ಯಾಸಗೊಳಿಸಲು ಸುಮಾರು 10 ಕೋಟಿ ರೂಪಾಯಿಗಳ ಯೋಜನೆಯನ್ನು ರೂಪಿಸಿದ್ದು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ, ಅದೇಶ ಬಂದರೆ 2 ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಲತಾಣವನ್ನು ಮರುವಿನ್ಯಾಸಗೊಳಿಸಲಾಗುವುದು". ಇದು ನಮ್ಮ ನಾಡಿನ ಸಂಸ್ಕೃತಿಯನ್ನು, ಪ್ರಸಿದ್ಧ ಸ್ಥಳಗಳನ್ನು ವಿಶ್ವಕ್ಕೆ ಪರಿಚಯಿಸಲು ಸಂಪರ್ಕ ಸೇತುವಾಗುವ ಜಾಲತಾಣದ ಸ್ಥಿತಿಗತಿ. ಅಂದ ಹಾಗೆ ಒಂದು ವೆಬ್ಸೈಟ್ ಆರಂಭಕ್ಕೆ ಹತ್ತು ಕೋಟಿ ಬೇಕಾ? ಎಂಬ ಪ್ರಶ್ನೆಗೆ ಉತ್ತರ ಮೇಲೆಯೇ ನೀಡಿದ್ದೇನೆ.

ಕಾಡಿನಲ್ಲಿ ಒಂಟಿ ವೈಮಾನಿಕ

ಅಂದು ಬೋಸ್ನಿಯಾ ದೇಶದ ಕಾಡೊಂದರ ಆಗಸದಲ್ಲಿ ಭಾರಿ ಸದ್ದು ಮಾಡುತ್ತಾ ಹೆಲಿಕ್ಯಾಪ್ಟರ್ ಗಳು ಹಾರುತ್ತಿದ್ದವು. ಇತ್ತ ನೆಲದಲ್ಲಿ ಬೋಸ್ನಿಯಾ ಪೊಲೀಸ್, ಮಿಲಿಟರಿ ಪಡೆ, ಅರೆಸೇನಾ ಪಡೆ ಹಾಗು ಇನ್ನು ಅನೇಕ ಬಂದೂಕುಧಾರಿಗಳು ಶೋಧಕಾರ್ಯದಲ್ಲಿ ತೊಡಗಿದ್ದರು. 'ಬೇಟೆ ಸಮೀಪದಲ್ಲೇ ಇದೆ' ಎಂದೂ ಅವರಿಗೆ ಗೊತ್ತಿತ್ತು. ಆದರೆ ನಿಖರ ಸ್ಥಳ ಗೊತ್ತಿರಲಿಲ್ಲ. ಇತ್ತಕಡೆ ಬೇಟೆಗೆ, ತನ್ನ ಸಾವಿನ ಸಮಯ ದೂರವಿಲ್ಲ ಎನ್ನುವುದು ತಿಳಿದಿತ್ತು. ಯಾವ ಕ್ಷಣದಲ್ಲಾದರೂ ಅವರು ತನ್ನನ್ನು ಕಂಡುಹಿಡಿದು, ಸುಟ್ಟುಬಿಡಬಹುದೆಂದು ಗೊತ್ತಿದ್ದರೂ, ಜೀವ ಸಾವನ್ನು ತಪ್ಪಿಸಲು ಹೆಣಗುತ್ತಿತ್ತು. 5 ಮೀಟರ್ ಸಮೀಪದಲ್ಲಿ ಶೋಧ ತಂಡದ ಕೆಲವರು ಕಂಡಾಗ ಜೀವವೇ ಬಾಯಿಗೆ ಬಂದ ಹಾಗಾಯಿತು. ಅಷ್ಟಕ್ಕೂ ಇವರೆಲ್ಲರೂ ಒಂದು ಕಾಡು ಪ್ರಾಣಿಯಂತೆ ಹುಡುಕುತ್ತಿದ್ದದು, ಸ್ಕಾಟ್- ಓ- ಗ್ರಡಿ ಎನ್ನುವ ಅಮೆರಿಕನ್ ಯುದ್ಧ ವಿಮಾನದ ಪೈಲಟ್ ಅನ್ನು.

ಅದು ಬೋಸ್ನಿಯಾ-ಹರ್ಜೆಗೊವಿನಾ; 51,197 Km ^2 ವಿಸ್ತೀರ್ಣದ ಯೂರೋಪ್ ಖಂಡದ ಒಂದು ದೇಶ. 1992ರಲ್ಲಿ ಆರಂಭವಾದ ಜನಾಂಗೀಯ ಹೋರಾಟ ಇನ್ನು ಮುಗಿದಿರಲಿಲ್ಲ. ಸರ್ಬಿಯನ್ ಪ್ರೇರಿತ ಸರ್ಬ್ ಜನಾಂಗದ ಹೋರಾಟಗಾರರು ಬೋಸ್ನಿಯಾದಲ್ಲಿದ್ದ ಬೋಸ್ನಿಯನ್, ಕ್ರೋಟ್ ಜನಾಂಗದ ಮೇಲೆ ಧಾಳಿ ಮಾಡಿದ್ದರು. ಈ ಜನಾಂಗೀಯ ಹೋರಾಟದಲ್ಲಿ ಅನೇಕ ಮುಸ್ಲಿಮರು ಹತರಾದರು. ವಿಶ್ವಸಂಸ್ಥೆಯ ನೇತೃತ್ವದಲ್ಲಿ 1994ರ ಹೊತ್ತಿಗೆ ನ್ಯಾಟೋ ( NATO) ಮಧ್ಯಪ್ರವೇಶಿಸಿ, ಬೋಸ್ನಿಯಾ ನಾಗರೀಕರಿಗೆ ಹಲ್ಲೆ ಮಾಡುತ್ತಿದ್ದ ಸರ್ಬ್ ಪಡೆಗಳ ಮೇಲೆ ಧಾಳಿ ಆರಂಭಿಸಿತು.

ನೀಲನಕ್ಷೆ  

ಅದು ಜೂನ್ ಎರಡು, 1995 ಮಧ್ಯಾಹ್ನ 1.15ರ ಸಮಯ. ಇಟಲಿಯ ಅವಿಯನೋ ವಾಯುಕೇಂದ್ರದಿಂದ ಅಮೆರಿಕನ್ ಸೇನೆಯ ಎರಡು F-16 ಯುದ್ಧ ವಿಮಾನಗಳು ಬೋಸ್ನಿಯಾದ "No Fly Zone'' ಪ್ರದೇಶದತ್ತ ಹೊರಟವು. ಒಂದನ್ನು ರಾಬರ್ಟ್ ರೈಟ್ ಚಲಾಯಿಸುತ್ತಿದ್ದರೆ, ಇನ್ನೊಂದು ಸ್ಕಾಟ್- ಓ- ಗ್ರಡಿಯ ನಿಯಂತ್ರಣದಲ್ಲಿತ್ತು. ಗಂಟೆಗೆ 2000 km ವೇಗದಲ್ಲಿ ಸಾಗಬಲ್ಲ ಕಂಪ್ಯೂಟರ್ ಚಾಲಿತ F- 16 ಯುದ್ಧ ವಿಮಾನ ತನ್ನೆಡೆಗೆ ಹಾರಿಬರುವ ಕ್ಷಿಪಣಿಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿತ್ತು. ಗಂಟೆಗೆ 500 km ವೇಗದಲ್ಲಿ ದೈನಂದಿನ ಹಾರಾಟ ಮಾರ್ಗದಲ್ಲೇ ಎಂಟು ಸಾವಿರ mtr ಎತ್ತರದಲ್ಲೇ ಹಾರುತಿದ್ದರು. 40 km ಸುತ್ತಳತೆಯಲ್ಲೇ ಸರ್ಬ್ ಸೇನೆಯ ಚಟುವಟಿಕೆಗಳನ್ನು ಗಮನಿಸುತ್ತಾ ಸಾಗಿದ್ದರು. ನೆಲದಲ್ಲಿ ದಿನಾಲೂ ಒಂದೇ ಪಥದಲ್ಲಿ ಹಾರುತ್ತ ತಮ್ಮ ಮೇಲೆ ಧಾಳಿ ಮಾಡುತ್ತಿದ್ದ, ವಿಮಾನಗಳನ್ನು ಸರ್ಬ್ ಗಳು ಗಮನಿಸುತ್ತಿದ್ದರು. ಮರ್ಕೋಜಿಕ್ ಗ್ರಾಡ್ ಬಳಿ ಪ್ರತೀಕಾರಕ್ಕಾಗಿ ಕಾಯುತ್ತಿದ್ದ, ಸರ್ಬ್ ಪಡೆಯ ಕರ್ನಲ್ ಬಳಿ ರಷ್ಯನ್ ನಿರ್ಮಿತ SA-6 ಕ್ಷಿಪಣಿ ಇತ್ತು. ಇದರ ರೇಡಾರ್ 75km ದೂರದ 10,000 ಮೀಟರ್ ಎತ್ತರದಲ್ಲಿದ್ದ ವಿಮಾನಗಳನ್ನು ಗುರುತಿಸುವ ಸಾಮರ್ಥ್ಯವಿತ್ತು. 3 ಶಕ್ತಿ ಶಾಲಿ ಆಟೋ ಡಿಟೆಕ್ಟೆಡ್ ಕ್ಷಿಪಣಿಯಿರುವ ಇದನ್ನು "Wings Of Death'' ಎಂದು ಕರೆಯುತ್ತಿದ್ದರು.

ಸೋವಿಯತ್ ನಿರ್ಮಿತ SA-6 ಕ್ಷಿಪಣಿ ವಾಹಕ 


ಮಧ್ಯಾಹ್ನ 2.50 ರ ಸಮಯ, ಎರಡು ವಿಮಾನಗಳು 2 km ಅಂತರದ ನಡುವೆ ಹಾರುತ್ತಿದ್ದಾಗ, ರಾಬರ್ಟ್ ರೈಟ್ ನ ವಿಮಾನಕ್ಕೆ ರೇಡಾರ್ ಒಂದರ ತರಂಗಗಳು ತಲುಪಿದವು. ನೆಲದ ಮೇಲೆಲ್ಲೋ ವಿಮಾನ ನಿರೋಧಕ ಕ್ಷಿಪಣಿ ಇದೆ ಎಂದು ರೈಟ್ ಅಂದಾಜಿಸಿ ಅದನ್ನು ಸ್ಕಾಟ್- ಓ- ಗ್ರಡಿಗೆ ತಿಳಿಸಿದರು. ಅವರ ಊಹೆ ಸರಿಯಾಗಿತ್ತು, ಮರುಕ್ಷಣದಲ್ಲಿ ರಾಡಾರ್ ಸಂಕೇತ ಸ್ಥಗಿತವಾಯಿತು. ನೆಲದಲ್ಲಿ ಕರ್ನಲ್ ಅಪಾಯಕಾರಿ ಆಟಕ್ಕೆ ಕೈ ಹಾಕಿದ್ದರು. ಕರ್ನಲ್ ನಿರಂತರವಾಗಿ ರೇಡಾರ್ ನ್ನು ಚಾಲುಗೊಳಿಸಿದ ಪಕ್ಷದಲ್ಲಿ ಮೇಲೆ ವಿಮಾನದಲ್ಲಿ ರೇಡಾರ್ ಪ್ರತಿಬಂಧಕ ಇದನ್ನು ಗ್ರಹಿಸಬಹುದು. ಹೀಗಾದಾಗ ವಿಮಾನದ ಬಾಂಬ್ ರೇಡಾರ್ ನ್ನು ನಾಶಮಾಡಬಹುದು. ಇದರ ಬದಲಾಗಿ ರಾಡಾರ್ ಆನ್ ಮಾಡದೆಯೇ ಕ್ಷಿಪಣಿಯೊಂದನ್ನು ಮೇಲಕ್ಕೆ ಹಾರಿಸಿದರು. ಕೇವಲ ಹತ್ತು ಸೆಕೆಂಡನಲ್ಲಿ ಅದು ಎರಡು ವಿಮಾನದ ನಡುವೆ ಸ್ಫೋಟಗೊಂಡಿತ್ತು. ಮೊದಲನೇ ಕ್ಷಿಪಣಿ ಹಾರಿದ 5 ಸೆಕೆಂಡ್ ನಲ್ಲಿ ರಾಡಾರ್ ಆನ್ ಮಾಡಿ ಇನ್ನೊಂದು ಕ್ಷಿಪಣಿ ಹಾರಿಸಿದ್ದರು. ತನ್ನೆಡೆಗೆ ಬರುತ್ತಿದ್ದ ಮೊದಲನೇ ಕ್ಷಿಪಣಿಯಿಂದ ಬಚಾವಾದ ಸ್ಕಾಟ್ ಗೆ ಈಗ ಪಾರಾಗಲು ಸಮಯವೇ ಉಳಿದಿರಲಿಲ್ಲ. ಕ್ಷಿಪಣಿ ಸ್ಪೋಟಕ್ಕೆ ವಿಮಾನ ಹೋಳಾಗಿ ಪೈಲಟ್ ಸ್ಕಾಟ್- ಓ- ಗ್ರಡಿ ಹೊರ ಹಾರಿದ್ದರು. ಗಂಟೆಗೆ 190 km ವೇಗದಲ್ಲಿ ಭೂಮಿಗೆ ಧಾವಿಸುತ್ತಿದ್ದ ಅವರು, 4000 ಮೀಟರ್ ಎತ್ತರಕ್ಕೆ ತಲುಪಿದಾಗ ಪ್ಯಾರಾಚೂಟ್ ಬಿಚ್ಚಿದರು. ಪ್ಯಾರಾಚೂಟ್ ತೆರೆದುಕೊಳ್ಳದ ಪಕ್ಷದಲ್ಲಿ, ಅವರು ಭೂಮಿಗೆ ಅಪ್ಪಳಿಸುವ ಸಂಭವವಿತ್ತು. ರಾಬರ್ಟ್ ರೈಟ್ ತನ್ನ ಸಹಚರನ ವಿಮಾನ ನೆಲಕ್ಕೆ ಬಿದ್ದ ಸಂಗತಿಯನ್ನು ವಾಯುನೆಲೆಗೆ ಮುಟ್ಟಿಸಿದರು .

ಭೂಮಿಗೆ ಬೀಳುತ್ತಿದ್ದ ಪೈಲಟ್ ಗೆ ತಾನು ಸರ್ಬ್ ಸೇನೆಯ ನಿಯಂತ್ರಣದಲ್ಲಿದ್ದ ಪ್ರದೇಶಕ್ಕೆ ಬೀಳುತ್ತಿದ್ದೇನೆಂದು ಗೊತ್ತಾಯಿತು. ಅವರ ಕೈಗೆ ಸಿಕ್ಕು ಬಿದ್ದರೆ, ತನ್ನನ್ನು ಉಳಿಸಲಾರರೆಂದು ಗೊತ್ತಾಯಿತು. ಸರ್ಬ್ ಅರೆಸೇನಾಪಡೆಗಳು ಯುದ್ಧ ಕಾಲದ ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ವಾಹನಗಳಲ್ಲಿ ಪ್ಯಾರಾಮಿಲಿಟರಿ ಪಡೆಗಳು ಇವರತ್ತ ಧಾವಿಸುತ್ತಿದ್ದರು, ಆದರೆ ಆಗ ಬೀಸಿದ ಗಾಳಿ ಇವರನ್ನು ಸ್ವಲ್ಪ ದೂರ ಎಳೆದೊಯ್ಯಿತ್ತು. 3.35ಕ್ಕೆ ನೆಲಕ್ಕೆ ಬಿದ್ದ ತಕ್ಷಣ ಪ್ಯಾರಾಚೂಟ್ ನಿಂದ ಕಳಚಿಕೊಂಡು ಓಡಲೂ ಹವಣಿಸಿದರು. ಕೆಲವೇ ಕ್ಷಣಗಳಲ್ಲಿ ಸರ್ಬ್ ಪಡೆ ಇವರನ್ನು ಹುಡುಕಿಕೊಂಡು ಬರುತ್ತಿದ್ದರು. 200 mtr ಓಡಿದ ನಂತರ ನೆನಪಾಯಿತು. ತಮ್ಮ ಸಲಕರಣೆ ಚೀಲವನ್ನು ಅಲ್ಲೇ ಮರೆತು ಬಂದಿದ್ದರು. ತಿರುಗಿ ಹೋಗುವಂತೆ ಇರಲಿಲ್ಲ, ಅದಾಗಲೇ ಪೊಲೀಸರು ಆ ಸ್ಥಳವನ್ನು ತಲುಪಿಯು ಆಗಿತ್ತು. ಅಲ್ಲೇ ಮರೆಯಲ್ಲೇ ಅಡಗಿಕೊಂಡು ಗಮನಿಸತೊಡಗಿದರು.........

                                                                                                               -Tharanatha Sona
 

Saturday, July 1, 2017

ಜಲಾವೃತ ಕಲ್ಲಿದ್ದಲು ಗಣಿಯಲ್ಲೊಂದು ಪವಾಡ ಭಾಗ -2





               ಏಕೆಂದರೆ ಹಿಂದೆ ಕೊರೆದ ಬಾವಿಯೊಳಗೆ ಆಮ್ಲಜನಕ ಪರೀಕ್ಷಕವನ್ನು ಹಾಕಿದ್ದರು. ಅದರಿಂದ ಬಂದ ವರದಿ ನೋಡಿದಾಗ ಬೆಚ್ಚಿ ಬಿದ್ದರು, ಒಳಗೆ ಉಸಿರಾಡುವಷ್ಟು ಪ್ರಮಾಣದ ಆಮ್ಲಜನಕ ಇರಲಿಲ್ಲ. ನೀರು ಗಂಟೆಗೆ 7 mtr ಲೆಕ್ಕದಲ್ಲಿ ಮೇಲೆ ಬರುತಿತ್ತು. ಪ್ರವಾಹದ ರೂಪದಲ್ಲಿ ಒಳಬರುತ್ತಿದ್ದ ನೀರು, ಕಾರ್ಮಿಕರು ಸಿಲುಕಿರುವ ಪ್ರದೇಶವನ್ನು ತಲುಪಲು ಇನ್ನು ಒಂದು ಗಂಟೆ ಸಮಯ ಸಾಕಿತ್ತು. ಅಷ್ಟರೊಳಗೆ ಅವರನ್ನು ಮೇಲೆತ್ತಿ ರಕ್ಷಿಸುವುದು ಸಾಧ್ಯವೇ ಇರಲಿಲ್ಲ. ಯೋಚಿಸುತ್ತ ನಿಂತವರಿಗೆ ಒಂದು ಉಪಾಯ ಹೊಳೆಯಿತು. ಕಾರ್ಮಿಕರ ಉಸಿರಾಟಕ್ಕಾಗಿ ಸುರಂಗದ ಒಳಗೆ ಕಂಪ್ರೆಸರ್ ಮುಖಾಂತರ   ಗಾಳಿಯನ್ನು ಪಂಪ್ ಮಾಡುತ್ತಿದ್ದರು ಎನ್ನುವುದನ್ನು ಈಗಾಗಲೇ ಓದಿದ್ದೀರಿ. ಅದೇ ಕಂಪ್ರೆಸರ್ ಅನ್ನು High ಮೋಡ್ ನಲ್ಲಿ ಇಟ್ಟು, ಅಪಾರ ಪ್ರಮಾಣದ ಗಾಳಿಯನ್ನು ಹಾಯಿಸಿದ್ದರೆ ಸುರಂಗದ ಒಳಗೆ ಒತ್ತಡ ಹೆಚ್ಚಾಗಿ, ಮೇಲೇರುತ್ತಿರುವ ನೀರು ಹಾಗು ಗಾಳಿಯ ಸಂಪರ್ಕದ ಸ್ಥಳದಲ್ಲಿ ಅನಿಲ ಗುಳ್ಳೆಗಳು ಮೂಡುತ್ತವೆ. ಇದರಿಂದ ನೀರಿನ ಮೇಲೆ ಹಿಮ್ಮುಖ ಒತ್ತಡ ಹೆಚ್ಚಾಗಿ, ಗಾಳಿಯು ನೀರನ್ನು ಕೆಳಗೆ ತಳ್ಳಲು ಪ್ರಯತ್ನಿಸುತ್ತದೆ. ಆಗ ನೀರಿನ ಮೇಲೇರುವಿಕೆ ಪ್ರಮಾಣ ನಿಧಾನವಾಗುತ್ತದೆ. ಒಳಗೆ ಗಾಳಿಯು ಉಂಟುಮಾಡಿರುವ ಅಪಾರ ಒತ್ತಡದಿಂದ ಏರ್ ಬ್ಯಾಗ್ ನಂತಹ ಸುರಕ್ಷಾ ಕವಚ ದೊರೆಯುತ್ತದೆ. ಈ ಉಪಾಯವನ್ನು ಈ ಮೊದಲು ಎಲ್ಲಿಯೂ ಬಳಸಿರಲಿಲ್ಲ. ಅಂತೆಯೇ ಕಂಪ್ರೆಸರ್ ನ್ನು ಹೈ-ಮೋಡ್ ನಲ್ಲಿಟ್ಟು ನಿಮಿಷಕ್ಕೆ 950 ಕ್ಯೂಬಿಕ್ ಫೀಟ್ ನಷ್ಟು ಗಾಳಿ ಪಂಪ್ ಮಾಡಲಾರಂಭಿಸಿದರು.

  ಮೊದಲ ಭಾಗ ಇಲ್ಲಿ ಓದಿ   ಜಲಾವೃತ ಕಲ್ಲಿದ್ದಲು ಗಣಿಯಲ್ಲೊಂದು ಪವಾಡ ಭಾಗ -1


ಗಣಿಯೊಳಗೆ ಹೆಚ್ಚುತ್ತಿದ್ದ ನೀರನ್ನು ಹೊರಹಾಕಲು ಹೆಚ್ಚಿನ ಸಾಮರ್ಥ್ಯದ ಪಂಪ್ ಗಳನ್ನು ತರಿಸಿದ್ದರು. ಗುರುವಾರ ಸಾಯಂಕಾಲದ ಹೊತ್ತಿಗೆ ನೀರಿನ ಮಟ್ಟ ಗರಿಷ್ಠ ಅಂದರೆ 566 ಮೀಟರ್ಗೆ ಮುಟ್ಟಿತು. ಜೀವವನ್ನುಳಿಸಿಕೊಳ್ಳಲು ಗಣಿ ಕಾರ್ಮಿಕರು ಸುರಂಗದ ಅಂತ್ಯಂತ ಎತ್ತರಕ್ಕೆ ಪ್ರದೇಶಕ್ಕೆ ಚಲಿಸಿದರು. ಪೆನ್ಸಿಲ್ವೇನಿಯಾ ರಾಜ್ಯದ ಗವರ್ನೆರ್ ಮಾರ್ಕ್ ಸ್ಕ್ವೆಕೇರ್ ಘಟನಾ ಸ್ಥಳಕ್ಕೆ ಭೇಟಿಕೊಟ್ಟು, ರಕ್ಷಣಾ ಕಾರ್ಯ ಚುರುಕಾಗುವಂತೆ ನೋಡಿಕೊಂಡರು. ಗಣಿ ದುರಂತ ಸಂಭವಿಸಿದ ಸುದ್ದಿ ಕೇಳುತ್ತಲೇ, ರಕ್ಷಣಾ ತಂಡದವರು ಅಗಲವಾಗಿ ಬಾವಿ ಕೊರೆಯುವ ಯಂತ್ರದವರನ್ನು ಸಂಪರ್ಕಿಸಿದರು. ಕೆಳಗೆ ಸಿಲುಕಿಕೊಂಡವರನ್ನು ಮೇಲೆತ್ತಲು ಇಷ್ಟು ಅಗಲದ ರಕ್ಷಣಾ ಬಾವಿಯ ಅಗತ್ಯವಿತ್ತು. ಲಿಂಕನ್ ಟೌನ್ ಶಿಪ್ನಿಂದ 188 km ಆಚೆ, ದೂರದ ವೆಸ್ಟ್-ವರ್ಜಿನಿಯಾದಲ್ಲಿ ಇಂತಹ ಯಂತ್ರವಿತ್ತು. 30 ಇಂಚು ಅಗಲ ಬಾವಿ ಕೊರೆಯುವ ಸಾಮರ್ಥ್ಯವಿದ್ದ ಯಂತ್ರವನ್ನು ಪೊಲೀಸ್ ಕಾವಲಿನ ಜೊತೆಗೆ ಜೀರೋ ಟ್ರಾಫಿಕ್ನಲ್ಲಿ ತರಲಾಯಿತು. ಸಾಯಂಕಾಲ ಆರು ಗಂಟೆಗೆ, ಅಂದರೆ ದುರಂತ ಸಂಭವಿಸಿ 18 ತಾಸುಗಳ ಬಳಿಕ ಇದು ಕೆಲಸ ಆರಂಭಿಸಿತು. ಮೊದಲೇ ಕೊರೆದಿದ್ದ 15 ಸೆಂಟಿಮೀಟರ್ ಗುಂಡಿಯ ಆರು ಮೀಟರ್ ದೂರದಲ್ಲಿ, ಕೊರೆಯಲು ಶುರುಮಾಡಿದ ನಂತರ ಮಧ್ಯರಾತ್ರಿ 1.12ಕ್ಕೆ ಯಂತ್ರ ಸ್ಥಗಿತಗೊಂಡಿತು. ಕಾರಣವೇನೆಂದು ಪರಿಶೀಲಿಸಿದಾಗ ಅದರ ಡ್ರಿಲ್ ಬಿಟ್ ತುಂಡಾಗಿತ್ತು. ಆದರೆ ಇನ್ನು ಕೊರೆಯುವುದಕ್ಕೆ 42 ಮೀಟರ್ ಬಾಕಿಯಿತ್ತು. ತುಂಡಾದ ಡ್ರಿಲ್ ಬಿಟ್ ನ ಒಂದು ಭಾಗವನ್ನು ಮೇಲೆತ್ತುವಲ್ಲಿ ಸಫಲರಾದರು, ಇನ್ನೊಂದು ಭಾಗ ಒಳಗೆ ಉಳಿದಿತ್ತು. ಇದನ್ನು ಸರಿಪಡಿಸಲು ಸಾಮಾನ್ಯವಾಗಿ 3-4 ದಿನಗಳು ಬೇಕು. ಆದರೆ ಇಲ್ಲಿ ಅಷ್ಟು ಸಮಯಾವಕಾಶ ಇರಲಿಲ್ಲ. ರಕ್ಷಣಾ ತಂಡದ ಹೆಲಿಕ್ಯಾಪ್ಟರ್ ನಲ್ಲಿ, ಜೆಫರ್ಸನ್ ಕಂಟ್ರಿ  ಭಾಗದಲ್ಲಿ ಇದ್ದ ಭಾರಿ ವರ್ಕ್ ಶಾಪ್ ಗೆ ಒಯ್ದು ಸರಿಪಡಿಸಿದರು.



ಗವರ್ನೆರ್ ಮಾರ್ಕ್ ಸ್ಕ್ವೆಕೇರ್


ತಾಂತ್ರಿಕ ತೊಂದರೆಯಿಂದಾಗಿ ಹದಿನೆಂಟು ಗಂಟೆಗಳಿಂದ ಕೊರೆಯುವ ಕಾರ್ಯ ಸ್ಥಗಿತಗೊಂಡಿತ್ತು. ಮತ್ತೊಂದೆಡೆ, ಗಣಿಯಿಂದ ನೀರು ಹೊರಹಾಕುವ ಕೆಲಸ ಹಾಗು ಗಾಳಿಯನ್ನು ಪಂಪ್ ಮಾಡುವ ಕೆಲಸ ನಿರಂತರವಾಗಿ ಸಾಗಿತ್ತು. ಶುಕ್ರವಾರ ರಾತ್ರಿ ಎಂಟೂವರೆ ಹೊತ್ತಿಗೆ ಕೊರೆಯುವ ಕಾರ್ಯ ಮತ್ತೆ ಶುರುವಾಯಿತು. ರಾತ್ರಿ ಮತ್ತೆ ಅಡಚಣೆ ಉಂಟಾಗಿ ಸಮೀಪದಲ್ಲಿದ್ದ ಇನ್ನೊಂದು 26 ಇಂಚು ಅಗಲದ ಯಂತ್ರದಿಂದ ಕೊರೆಯಲು ನಿರ್ಧರಿಸಿದ್ದರು. ಮರುದಿನ ಬೆಳಿಗ್ಗೆ ಆರೂವರೆ ಹೊತ್ತಿಗೆ, ಯಂತ್ರ ಗಣಿ ಕಾರ್ಮಿಕರು ಸಿಲುಕಿದ್ದ ಸ್ಥಳದಿಂದ ಐದು ಮೀಟರ್ ಮೇಲೆ ತಲುಪಿದಾಗ ಕೆಲಸ ನಿಲ್ಲಿಸಲು ನಿರ್ಧರಿಸಿದ್ದರು. ಏಕೆಂದರೆ ಇಲ್ಲಿ ಇನ್ನೊಂದು ಅಪಾಯವಿತ್ತು, ಕಾರ್ಮಿಕರು ಸಿಲುಕಿದ್ದ ಸ್ಥಳಕ್ಕೆ ನೀರು ಬರದಿರಲೆಂದು, ಅಪಾರ ಪ್ರಮಾಣದ ಗಾಳಿಯನ್ನು 15 ಸೆಂಟಿಮೀಟರ್ ಅಗಲದ ಬಾವಿಯ ಮೂಲಕ ಸುರಂಗದ ಒಳಗೆ ಪಂಪ್ ಮಾಡಿದ್ದೂ ಸರಿಯಷ್ಟೇ; ಇದರಿಂದ ಏರುತ್ತಿದ್ದ ನೀರಿನ ಪ್ರಮಾಣಕ್ಕೆ ಕಡಿವಾಣ ಬಿದ್ದು ಅಲ್ಲೊಂದು ಗಾಳಿಯ ಸುರಕ್ಷಾ ಕವಚ ರಚನೆಯಾಗಿತ್ತು. ಒಂದು ವೇಳೆ ಈಗ ಇನ್ನೊಂದು ಬಾವಿ ಕೊರೆದರೆ, ಆ ಸುರಕ್ಷಾ ಕವಚ ಒಡೆದು ಹೋಗಿ ನೀರು ಇನ್ನು ಮೇಲೆ ಏರಿ ಕಾರ್ಮಿಕರ ಜೀವ ಹರಣವಾಗುತಿತ್ತು. 'ಕಾರ್ಮಿಕರು ಇನ್ನು ಬದುಕಿದ್ದಾರೆ' ಎನ್ನುವ ಆಶಾಭಾವನೆಯಿಂದ ಇನ್ನು ಎಂಟು ಗಂಟೆ ಕಾಯಲು ನಿರ್ಧರಿಸಿದರು.


ಪಾರಾದ ಗಣಿಕಾರ್ಮಿಕ 


ಶನಿವಾರ ಸಾಯಂಕಾಲ ನಾಲ್ಕು ಗಂಟೆ ಹೊತ್ತಿಗೆ ಮತ್ತೆ ಕೆಲಸ ಶುರು ಮಾಡಿದ್ದರು. ಭಾರಿ ಸಾಮರ್ಥ್ಯದ ಹನ್ನೆರಡು ಪಂಪ್ ಗಳನ್ನೂ ಬಳಸಿ ಸೆಕೆಂಡಿಗೆ 1200 ಲೀಟರ್ ನೀರು ಗಣಿಯಿಂದ ಹೊರ ಹೋಗುವಂತೆ ಮಾಡಿದ್ದರು. ನೀರು ನಿಧಾನವಾಗಿ ಇಳಿಯಲಾರಂಭಿಸಿತು. ರಾತ್ರಿ ಹತ್ತೂವರೆ ಹೊತ್ತಿಗೆ ಕೆಲಸ ಮುಗಿದು, ಸುರಂಗದ ಒಳಗಡೆ ಗಾಳಿಯ ಒತ್ತಡವನ್ನು ಪರಿಶೀಲಿಸಿದರು. ಮಾಪಕ, ಸುರಂಗದ  ಒಳಗಿನ ಒತ್ತಡ, ವಾತಾವರಣದ ಒತ್ತಡಕ್ಕೆ ಸಮನಾಗಿದೆ ಎಂದು ತೋರಿಸಿತು. ಒಳಗಡೆ ನಾಲ್ಕು ದಿನಗಳಿಂದ ಅನ್ನಾಹಾರಗಳಿಲ್ಲದೆ ಸಿಲುಕಿಕೊಂಡಿದ್ದ ಕಾರ್ಮಿಕರ ಸ್ಥಿತಿ ತಿಳಿಯುತ್ತಿರಲಿಲ್ಲ. ವಿಶೇಷ ಮೈಕ್ರೋಫೋನ್ ಒಂದನ್ನು ಕೆಳಗೆ ಬಿಟ್ಟು ಸದ್ದನ್ನು ಅಳಿಸಲಾಯಿತು. ರಕ್ಷಣಾ ತಂಡದ ಸದಸ್ಯನೊಬ್ಬ '' You traped 9 members....''  ಎನ್ನುತ್ತಿದ್ದಂತೆ ಒಳಗಡೆಯಿಂದ ಪ್ರತಿಕ್ರಿಯೆ ಬಂತು. ಈ ಶುಭಸುದ್ದಿಯನ್ನು ಅಮೆರಿಕಾದ ಟಿ.ವಿ ಚಾನೆಲ್ಗಳು ನೇರಪ್ರಸಾರ ಮಾಡಿದವು. ನಂತರ ವಿಶೇಷವಾದ ಬುಟ್ಟಿಯನ್ನು ಒಳಗೆ ಬಿಟ್ಟು ಕಾರ್ಮಿಕರನ್ನು ಮೇಲಕ್ಕೆ ಎಳೆದುಕೊಂಡರು. ಕೊನೆಯ ಕಾರ್ಮಿಕ ಮಾರ್ಕ್ ಪೋಪೆರ್ನಾಕ್ ಹೊರಬಂದಾಗ ಸಮಯ, ರಾತ್ರಿ ಎರಡೂವರೆ ಗಂಟೆ ಆಗಿತ್ತು. ಪವಾಡ ಸದೃಶ್ಯವಾಗಿ ಪಾರಾದ ಕಾರ್ಮಿಕರನ್ನು ರಕ್ಷಣಾ ತಂಡದ ಸದಸ್ಯರು ಹಾಗು ನೆರೆದ ಜನರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ನಾವು ಮಾಡಿದ ಪ್ರಯತ್ನಗಳು ವಿಫಲವಾಗಲಿಲ್ಲ; ಎಂದು ಅರಿತ ಅವರ ಕಣ್ಣಲ್ಲಿ ಆನಂದ ಭಾಷ್ಪವಿತ್ತು. ಅಲ್ಲಿಗೆ 77 ಗಂಟೆಗಳ ಕಾತರತೆ ಮುಗಿಯಿತು, ಕುಟುಂಬ ವರ್ಗದವರ ಪ್ರಾರ್ಥನೆ ಫಲಕೊಟ್ಟಿತ್ತು.



ಈಗ ಕ್ಯೂಕ್ರಿಕ್ ಪ್ರದೇಶ ಹೀಗಿದೆ 


ಒಬ್ಬ ಕಾರ್ಮಿಕ ಎದೆನೋವಿನಿಂದ ಬಳಲಿದ್ದು ಬಿಟ್ಟರೆ, ಉಳಿದೆಲ್ಲರೂ ಆರೋಗ್ಯವಾಗಿದ್ದರು. ಅರೋಗ್ಯ ಪರೀಕ್ಷೆಗಳು ಮುಗಿದ ನಂತರ ಅವರನ್ನೆಲ್ಲ ಮನೆಗೆ ಕಳುಹಿಸಿ ಕೊಡಲಾಯಿತು. ಘಟನೆ ಬಗ್ಗೆ ತನಿಖೆ ನಡೆಸಿದ ಸಮಿತಿ  '' ಗಣಿಗಾರಿಕೆಗೆ ಅನುಮತಿ ನೀಡಿದ ಸಂದರ್ಭದಲ್ಲಿ ಕೊಟ್ಟಿದ್ದ ಹಳೆಯ ಮತ್ತು ತಪ್ಪಾದ ನಕ್ಷೆ ಈ ಘಟನೆಗೆ ಕಾರಣ '' ಎಂದಿತು. ಈ ಪವಾಡ ನಡೆದ ಸ್ಥಳ ಇಂದು ಪ್ರವಾಸಿ ತಾಣವಾಗಿದೆ.  www.quecreekrescue.org  ಎನ್ನುವ ಜಾಲತಾಣ ಸ್ಥಾಪಿಸಿ, ದತ್ತಿ ನಿಧಿಯನ್ನು ಸಂಗ್ರಹಿಸಲು ಶುರುಮಾಡಿದ್ದಾರೆ, ಹಾಗೂ ರಕ್ಷಣಾ ಬಾವಿ ಕೊರೆದ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಿದ್ದಾರೆ. ಯಾವೊಂದು ಪೂರ್ವಾನುಭವ ಇಲ್ಲದಿದ್ದರೂ, ಸೂಕ್ತ ತಂತ್ರಜ್ಞಾನದ ಸಹಾಯದಿಂದ ಅವರು ರಕ್ಷಣಾ ಕಾರ್ಯ ನಿರ್ವಹಿಸಿದ ರೀತಿ ಪ್ರಶಂಸೆಗೆ ಕಾರಣವಾಯಿತು. ಅಂದವರಲ್ಲಿ ತೆಗೆದುಕೊಂಡ ಪ್ರತಿ ನಿರ್ಧಾರಗಳು ಸರಿಯಾಗಿದ್ದವು. ಆ ಸಂಕಷ್ಟದ ಸಮಯದಲ್ಲಿ ಇವರ ಮನಸ್ಸಿನಲ್ಲಿದ್ದ ಒಂದೇ ಯೋಚನೆ  '' Never give Up!........  '' .

                                                                                                            - Tharanatha Sona


ಮಾಹಿತಿ ಮತ್ತು ಚಿತ್ರಗಳು : ಅಂತರ್ಜಾಲ
www.samada.net ನಲ್ಲಿ ಪ್ರಕಟಿತ 

Monday, June 26, 2017

ಜಲಾವೃತ ಕಲ್ಲಿದ್ದಲು ಗಣಿಯಲ್ಲೊಂದು ಪವಾಡ ಭಾಗ -1

   
             ಮಾರ್ಕ್ ಪೋಪೆರ್ನಾಕ್ ಮತ್ತು ಅವರ ಎಂಟು ಮಂದಿ ಸಹೊದ್ಯೋಗಿಗಳಿಗೆ ಬದುಕುವ ಯಾವ ಆಶಾಭಾವನೆಯು ಉಳಿದಿರಲಿಲ್ಲ. ತಮ್ಮ ಬದುಕಿನ ಕಟ್ಟಕಡೆಯ ಕ್ಷಣಗಳನ್ನು ಹೀಗೆ ಧಾರುಣವಾಗಿ ಕಳೆಯಬೇಕಾಯಿತಲ್ಲ ಎಂಬ ದುಃಖವುಂಟಾಗಿತ್ತು. ಮುಂದೆ ತಮ್ಮನ್ನು ಕಳೆದುಕೊಳ್ಳಲಿರುವ ಪತ್ನಿ-ಮಕ್ಕಳಿಗೆ, ಕುಟುಂಬಸ್ಥರಿಗೆ ತಮ್ಮ ಕೊನೆಯ ಸಂದೇಶವನ್ನು ಚೀಟಿಯಲ್ಲಿ ಬರೆದು ಬುಟ್ಟಿಯೊಂದರಲ್ಲಿ ಇಟ್ಟರು. ಗಾಳಿಯಿಲ್ಲದೆ ಉಸಿರಾಡುವುದೇ ಕಷ್ಟವಾಗುತ್ತಿತ್ತು, ದೇಹಸೋತು ಪ್ರಜ್ಞೆ ತಪ್ಪುವಂತೆ ಆಗುತ್ತಿತ್ತು. ಅಕಸ್ಮಾತ್ ತಾವು ಸತ್ತು ಹೋದರೆ ತಮ್ಮ ಶವ ಕಾಣೆಯಾಗಬಾರದೆಂದು, ಒಬ್ಬರನ್ನೊಬ್ಬರು ಹಗ್ಗದಿಂದ ಬಿಗಿದುಕೊಂಡರು. ಹೀಗೆ ಕಲ್ಲಿದ್ದಲು ಗಣಿಯೊಳಗೆ ಅವರನ್ನು  ಚಡಪಡಿಸುವಂತೆ ಮಾಡಿತ್ತು, ಜೀವಜಲ ನೀರು.

ಕಲ್ಲಿದ್ದಲು ಗಣಿಯ  ನಕ್ಷೆ. 


ಸ್ಥಳ ಅಮೇರಿಕಾ ಸಂಯುಕ್ತ ಸಂಸ್ಥಾನ, ಪೆನ್ಸಿಲ್ವೇನಿಯಾ ರಾಜ್ಯದ ಸೊಮರ್ಸೆಟ್ ಕೌಂಟಿಯ ಲಿಂಕನ್ ಟೌನ್ ಶಿಪ್. ಅದು ಎರಡು ವರ್ಷದಿಂದ ಸಕ್ರಿಯವಾಗಿರುವ ಬ್ಲಾಕ್ ವೂಲ್ಫ್ ಕಲ್ಲಿದ್ದಲು ಕಂಪನಿಯ ಕ್ಯೂಕ್ರೀಕ್ ಕಲ್ಲಿದ್ದಲು ಗಣಿ. ಅಂದು ಜುಲೈ 24, 2002ರ ಎಂದಿನಂತೆ ಎರಡನೇ ಶಿಫ್ಟ್ ಗೆ 18 ಮಂದಿ ಗಣಿಕಾರ್ಮಿಕರ ತಂಡ ಆಗಮಿಸಿತು. ಎಂದಿನ ಹಾಗೆ ಮ್ಯಾನ್ ಟ್ರಿಪ್ ವಾಹನದಲ್ಲಿ ತಲಾ 9 ಮಂದಿಯಂತೆ ಎರಡು ತಂಡವಾಗಿ ಗಣಿಯೊಳಗೆ ಕೆಲಸಕ್ಕೆ ಹೋದರು. 2.50 km ಉದ್ದಕ್ಕೆ ಚಾಚಿಕೊಂಡಿದ್ದ ಈ ಗಣಿ ಸಮೀಪವೇ 40 ವರ್ಷದಿಂದ ನಿಷ್ಕ್ರಿಯವಾಗಿದ್ದ ಸಾಕ್ಸ್ ಮ್ಯಾನ್ ಕಲ್ಲಿದ್ದಲು ಗಣಿಯಿತ್ತು. ಗಣಿ ಪ್ರವೇಶ ದ್ವಾರದಿಂದ 900 mtr ದೂರಸಾಗಿದ ನಂತರ ಕವಲು ಒಡೆದ ದಾರಿಯಿತ್ತು. ರಾನ್ ಶೇಡ್ ಮತ್ತು ಎಂಟು  ಮಂದಿ ತಂಡ 500 mtr ದೂರದ ಕೆಳಭಾಗದತ್ತ ಹೋದರು. ಮಾರ್ಕ್ ಪೋಪೆರ್ನಾಕ್ ಮತ್ತು ತಂಡ 1st ಲೆಫ್ಟ್ ಎಂದು ಕರೆಯುವ ಪ್ರದೇಶದತ್ತ ಹೋದರು. ನಿಮಿಷಕ್ಕೆ 20 ಟನ್ ಸಾಮರ್ಥ್ಯದ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದಾಗ, ರಾತ್ರಿ 8.45 ರ ಹೊತ್ತಿಗೆ ಮೇಲಿನಿಂದ   ನೀರು ಜಿನುಗಲು ಶುರುವಾಯಿತು. ಬೆನ್ನಹಿಂದೆಯೇ ಪೋಪೆರ್ನಾಕ್ ತಂಡದ 20 mtr ಎದುರಿಗೆ ಕಂಡುಬಂದದ್ದು ಗಣಿಯೊಳಗೆ ನುಗ್ಗಿ ಬರುತ್ತಿದ್ದ ನೀರು. ಏನಾಗುತ್ತಿದೆ ಎಂದು ಅರಿವಾಗುವ ಮೊದಲೇ ಅವರೆಲ್ಲರೂ ಬದಿಯಲ್ಲಿದ್ದ ಕಟ್ಟೆಯತ್ತ ಹಾರಿದರು. 40 ವರ್ಷದಿಂದ ಸ್ಥಗಿತಗೊಂಡಿದ್ದ ಸಮೀಪದ ಸಾಕ್ಸ್ ಮ್ಯಾನ್ ಕಲ್ಲಿದ್ದಲು ಗಣಿಯಲ್ಲಿ ಬಿಲಿಯನ್ ಗಟ್ಟಲೆ ಲೀಟರ್ ನೀರು ಸಂಗ್ರಹವಾಗಿತ್ತು. ಕ್ಯೂಕ್ರೀಕ್ ಗಣಿಗೆ ಹೋಲಿಸಿದರೆ, ಸಾಕ್ಸ್ ಮ್ಯಾನ್ ಗಣಿಪ್ರದೇಶ ಎತ್ತರದಲ್ಲಿತ್ತು. ಆದರೆ ಅಲ್ಲಿಂದ ಹೀಗೆ ಅಣೆಕಟ್ಟಿನಿಂದ ಚಿಮ್ಮಿದಂತೆ ಅಪಾರ ಪ್ರಮಾಣದ ನೀರಿನ ಪ್ರವಾಹ ಬರಬಹುದೆಂದು ಯಾರು ಯೋಚಿಸಿರಲಿಲ್ಲ. ಏಕೆಂದರೆ ಅವರಿಗೆ ನೀಡಿದ ನಕ್ಷೆ ಪ್ರಕಾರ ಸಾಕ್ಸ್ ಮ್ಯಾನ್ ಗಣಿ, ಕೆಲಸದ ಸ್ಥಳದಿಂದ 91 mtr ದೂರದಲ್ಲಿತ್ತು. ಆದರೆ ಇಂಜಿನೀಯರ್ ಗಳು ಮಾಡಿದ ತಪ್ಪಾದ ನಕ್ಷೆಯಿಂದಾಗಿ, ಹದಿನೆಂಟು ಜೀವಗಳು ಅಪಾಯಕ್ಕೆ ಸಿಲುಕಿದ್ದವು.

ಸಮುದ್ರ ಮಟ್ಟದಿಂದ 1800 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿದ ಗಣಿಯೊಳಗೆ ನುಗ್ಗಿದ ನೀರು ಕೆಳಭಾಗದತ್ತ ಪ್ರವಹಿಸತೊಡಗಿತು. ಈ ಘಟನೆ ಗಣಿಯ ಅತ್ಯಂತ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾನ್ ಶೇಡ್ ಮತ್ತು ತಂಡಕ್ಕೆ ಗೊತ್ತಿರಲಿಲ್ಲ. ಕೂಡಲೇ 1st ಲೆಫ್ಟ್ ತಂಡ ಫೋನ್ ಮೂಲಕ ಅವರಿಗೆ ವಿಷಯ ತಿಳಿಸಿತ್ತು. ಅವರು ವಾಹನದಲ್ಲಿ ಪ್ರವೇಶ ದ್ವಾರದತ್ತ ಹಿಂತಿರುಗಿ ಹೊರಟರು. ಆದರೆ ಕವಲೊಡೆದ ಭಾಗದಲ್ಲಿ ಅದಾಗಲೇ ನೀರು ಬರಹತ್ತಿತ್ತು. ಜೀವಂತ ಜಲಸಮಾಧಿಯಾಗಲು ಹೆಚ್ಚು ಸಮಯ ಉಳಿದಿರಲಿಲ್ಲ. ತತ್ ಕ್ಷಣ ಅವರು ಗಣಿಯೊಳಗೆ ಗಾಳಿ ಸರಬರಾಜು ಮಾಡುತ್ತಿದ್ದ ವೆಂಟಿಲೇಟರ್ ಮುಖಾಂತರ ಹೊರಹೋಗಲು ಹವಣಿಸಿದರು. ಟಾರ್ಚ್ ಲೈಟ್ ಬೆಳಕಿನಲ್ಲೇ ಹಲವಾರು ಮೀಟರ್ಗಳ ದೂರದಷ್ಟು ವೆಂಟಿಲೇಟರ್ ಮುಖಾಂತರ ಸಾಗಿ ಕೊನೆಗೆ 9.45 ರ ಹೊತ್ತಿಗೆ ಹೊರಹೋಗುವ ದಾರಿ ಕಂಡುಕೊಂಡರು. ಇತ್ತಕಡೆ 1st ಲೆಫ್ಟ್ ನಲ್ಲಿ ಸಮಯ ಕಳೆದಂತೆ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಹಠಾತ್ ಆಗಿ ಬಂದ ನೀರನ್ನು ಕಂಡು ಒಂದು ಬದಿಗೆ ಹಾರಿ ಜೀವ ಉಳಿಸಿಕೊಂಡಿದ್ದ ಪೋಪೆರ್ನಾಕ್ ತಮ್ಮ ತಂಡದಿಂದ ಬೇರ್ಪಟ್ಟಿದ್ದರು. ನೀರಿನ ಹರಿವಿನ ರಭಸಕ್ಕೆ ಹಾಗು ಕತ್ತಲೆಗೆ ಅವರಿಗೆ ತಮ್ಮ ತಂಡದ ಸದಸ್ಯರಾರು ಕಾಣಿಸಲಿಲ್ಲ. ಏಕಾಂಗಿಯಾಗಿ ಉಳಿದುಕೊಂಡಿದ್ದ ಅವರಿಗೆ ಸ್ವಲ್ಪ ಹೊತ್ತಿನಲ್ಲಿ ಆಶಾಕಿರಣ ಗೋಚರಿಸಿತು. ಗಣಿ ಅಗೆಯುವ ಯಂತ್ರವೊಂದನ್ನು ತೆಗೆದುಕೊಂಡು ಸಹಾಯಕ್ಕಾಗಿ ಉಳಿದವರು ಅವರೆಡೆಗೆ ಧಾವಿಸಿದ್ದರು. ಅಗಲವಾಗಿ ಹರಿಯುತ್ತಿದ್ದ ನೀರಿನ ಆಚೆ ಬದಿಗೆ ಅವರು ಹಾರಬೇಕಿತ್ತು. ಮನಸಲ್ಲೇ ದೂರವನ್ನು ಅಂದಾಜಿಸಿ ಹಾರಿದರು, ಅವರನ್ನು ಉಳಿದವರು ಎಳೆದುಕೊಂಡರು. ಇಲ್ಲಿಗೆ ಒಂದು ವಿಘ್ನ ಮುಗಿದಿತ್ತು, ಆದರೆ ಸಾವು ಬೆನ್ನ ಹಿಂದೆಯೇ ಇತ್ತು.


ಗಣಿಯೊಳಗೆ ಸಂಭವಿಸಿದ ಅವಘಡ ಗಣಿಯ ಸುರಕ್ಷಾ ವಿಭಾಗಕ್ಕೆ ಗೊತ್ತಾಯಿತು. ಅವರು ತಕ್ಷಣ ಸಮೀಪದ ಸುರಕ್ಷಾದಳಕ್ಕೆ ವಿಷಯ ತಿಳಿಸಿದರು. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಗಣಿ ಕಾರ್ಮಿಕರ ಕುಟುಂಬಗಳಿಗೆ ವಿಷಯ ತಿಳಿದು ಅವರು ಸ್ಥಳಕ್ಕೆ ಧಾವಿಸಿದ್ದರು. ಗಣಿಯ ಪ್ರವೇಶದ್ವಾರದ ತನಕ ತಲುಪಿದ್ದ ನೀರನ್ನು ಪಂಪ್ ಮೂಲಕ ಎತ್ತಿ ಹೊರಬಿಡಲಾರಂಭಿಸಿದರು. ರಕ್ಷಣಾ ತಂಡಕ್ಕೆ ಒಳಗೆ ಸಿಲುಕಿದ ಗಣಿ ಕಾರ್ಮಿಕರ ಸ್ಥಿತಿ ಏನಾಗಿದೆ? ಎನ್ನುವುದರ ಬಗ್ಗೆ ಸುಳಿವಿರಲಿಲ್ಲ, ಮತ್ತು ಸಂಪರ್ಕಿಸಲು ಯಾವುದೇ ಮಾರ್ಗವು ಇರಲಿಲ್ಲ. ಗಣಿ ಎಂಜಿನಿಯೆರ್ ಗಳು, ಜಿ.ಪಿ.ಎಸ್ ಹಾಗು ನಕ್ಷೆಗಳನ್ನು ಬಳಸಿಕೊಂಡು ಒಂದು ಸ್ಥಳವನ್ನು ಗುರುತು ಮಾಡಿದರು, ಇಲ್ಲಿಂದ 75 ಮೀಟರ್ ಕೆಳಭಾಗಕ್ಕೆ ಕೊರೆಯಬೇಕಿತ್ತು. ಅಕಸ್ಮಾತ್ ಗಣಿ ಕಾರ್ಮಿಕರೇನಾದರೂ ಬದುಕಿದ್ದರೆ, ಅವರು ಗಣಿಯೊಳಗೆ ಇದ್ದ ಅತಿ ಎತ್ತರದ ಈ ಜಾಗದಲ್ಲಿ ಸಿಲುಕಿರಬಹುದೆಂದು ಊಹಿಸಿದರು. ಅದು ಕೇವಲ ಊಹೆ ಅಷ್ಟೇ , ಏಕೆಂದರೆ ಸರೋವರದಂತಿದ್ದ ಪ್ರದೇಶದಿಂದ ನುಗ್ಗಿದ ನೀರಿನಲ್ಲಿ, ಈ ಕಾರ್ಮಿಕರು ಜೀವಸಹಿತ ಉಳಿದಿರುವುದು ಖಚಿತವಾಗಿರಲಿಲ್ಲ. ರಾತ್ರಿ ಎರಡು ಗಂಟೆ ಹೊತ್ತಿಗೆ 15 ಸೆಂಟಿಮೀಟರ್ ಅಗಲದ ಬಾವಿಯನ್ನು ಬೋರವೆಲ್ ಯಂತ್ರ ಕೊರೆಯಲಾರಂಭಿಸಿತು. ಕೇವಲ 6 mtr ಅಗಲವಿದ್ದ ಸುರಂಗದ ಸಮಾನಾಂತರವಾಗಿ ಮೇಲೆ ಹಾಕಿದ ಗುರುತಿನ ಸ್ಥಳ ತಪ್ಪಾಗಿದ್ದರೆ, ಇಡೀ ಪರಿಶ್ರಮ ವ್ಯರ್ಥವಾಗುತಿತ್ತು.


ಸುರಂಗದ ಮಾದರಿ ಚಿತ್ರ 



     ಬೋರೆವೆಲ್ ಗಳಿಗೆ ಬಿದ್ದು 40-50 ಅಡಿಗಳಲ್ಲಿ ಸಿಲುಕಿ, ಹೊರಬರಲಾಗದೆ ಸಾವನ್ನಪ್ಪಿದ್ದ ಅನೇಕ ಪುಟಾಣಿ ಮಕ್ಕಳ ಕಥೆಯನ್ನು ನೀವುಗಳು ಓದಿರುತ್ತೀರಿ. ಅಂತಹದರಲ್ಲಿ ಇಲ್ಲಿ 250 ಅಡಿಗಿಂತ ಹೆಚ್ಚಿನ ಆಳದಲ್ಲಿ, ಯಾವುದೋ ಗೊತ್ತಿರದ ಸ್ಥಳವೊಂದರಲ್ಲಿ ಸಿಲುಕಿದ್ದ ಕಾರ್ಮಿಕರು ಹೊರಬರಬೇಕಾದರೆ ಪವಾಡವೊಂದು ಜರುಗಬೇಕಿತ್ತು. ಹಲವು ತಾಸುಗಳಿಂದ ಒಳಗೆ ಸಿಲುಕಿರುವ ಕಾರ್ಮಿಕರಿಗೆ ಆಮ್ಲಜನಕದ ಕೊರತೆಯಿಂದ ಉಸಿರುಕಟ್ಟಿ ಕಣ್ಣುಕತ್ತಲೆ ಆಗುತಿತ್ತು. ಅಷ್ಟರಲ್ಲಿ ಮೇಲಿನಿಂದ ಏನೋ ಸದ್ದು ಕೇಳಿಸಲಾರಂಭಿಸಿತು. ಬರುಬರುತ್ತ ಶಬ್ದ ಜೋರಾದಂತೆ, ನಮ್ಮ ರಕ್ಷಣೆಗೆ ಪ್ರಯತ್ನ ನಡೆಯುತ್ತಿದೆ, ಎಂದು ಖಚಿತವಾಯಿತು. ಮುಂಜಾನೆ ಐದು ಗಂಟೆ ಹೊತ್ತಿಗೆ, 75 ಮೀಟರ್ ಕೆಳಕ್ಕೆ ಬಾವಿ ಕೊರೆದ ನಂತರ ಯಂತ್ರಕ್ಕೆ ಏನೋ? ತಾಕಿದಂತಾಗಿ ಶಬ್ದ ಬರುತಿತ್ತು. ಮೇಲೆ ಎಲ್ಲ ಯಂತ್ರವನ್ನು ನಿಲ್ಲಿಸಿ ಕಿವಿಗೊಟ್ಟು ಕೇಳಿದರು. ಅವರ ಖುಷಿಗೆ ಪಾರವೇ ಇರಲಿಲ್ಲ. ಕೆಳಗೆ ಸಿಲುಕಿದವರು 'ನಾವಿನ್ನು ಬದುಕಿದ್ದೇವೆ ' ಎಂದು ಸೂಚಿಸಲು ಯಂತ್ರದ ಕೆಳಭಾಗಕ್ಕೆಬಡಿಯುತ್ತಿದ್ದರು. ಬೋರವೆಲ್ ಯಂತ್ರದ ಕಂಪ್ರೆಸರ್ ನ ಗಾಳಿ ಅವರಿಗೆ ದೊರಕಿ ಉಸಿರಾಟ ಸರಾಗವಾಯಿತು. ಬದುಕಿ ಬರುವ ಆಶಾಭಾವನೆ ಮೂಡಿತು.

ಆದರೆ ಈ ಖುಷಿ  ತಾತ್ಕಾಲಿಕವಾಗಿತ್ತು, ಏಕೆಂದರೆ?.......................
                                                                                                              (ಮುಂದುವರೆಯುವುದು)

                                                                                                                -Tharanatha Sona



ಮಾಹಿತಿ ಮತ್ತು ಚಿತ್ರಗಳು : ಅಂತರ್ಜಾಲ ಮತ್ತು ಜಿಯೋಗ್ರಾಫಿಕ್ ಚಾನೆಲ್

www.sampada.net ನಲ್ಲಿ ಪ್ರಕಟವಾದ ಲೇಖನ. 

Tuesday, June 13, 2017

ಆಫ್ರಿಕಾದ ಕಾಡಿನಲ್ಲೊಂದು ಸರ್ಜಿಕಲ್ ಸ್ಟ್ರೈಕ್ ಭಾಗ-2

ಕಾರ್ಯಾಚರಣೆ ನಡೆದ ಸ್ಥಳದ ಚಿತ್ರಣ 

ಸಾಸ್ ಅರಣ್ಯದಲ್ಲಿ  ಇಷ್ಟೆಲ್ಲ ಬೆಳವಣಿಗೆಗಳು ಆಗುತ್ತಿರುವಾಗ ಇತ್ತ ಕಡೆ ಬ್ರಿಟಿಷ್ ಸೇನೆಯಲ್ಲಿ ಸದ್ದಿಲ್ಲದಂತೆ ರೂಪುರೇಷೆಯೊಂದು ತಯಾರಾಗಿತ್ತು. ಅಪಹೃತರನ್ನು ರಕ್ಷಿಸಲು ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ರಹಸ್ಯ ಕಾರ್ಯಾಚರಣೆ ಒಂದಕ್ಕೆ ಅನುಮತಿ ಕೊಟ್ಟರು.  ಅದುವೇ ಆಪರೇಷನ್ ಬರ್ರಾಸ್.  ಇಂತಹ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಗೆಂದು ಸಿದ್ದವಾಗಿದ್ದ ಸಾಸ್ (SAS- Special Air service) ತನ್ನ ಪರಿವೀಕ್ಷಣಾ ತಂಡವೊಂದನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ವೆಸ್ಟ್ ಸೈಡ್ ಬಾಯ್ಸ್ಗಳ ತಾಣದತ್ತ ಕಳುಹಿಸಿತು. ಅಪಹೃತರನ್ನು ಕೂಡಿ ಹಾಕಿದ್ದ ಪ್ರದೇಶದ ಸ್ವಲ್ಪ ದೂರದಲ್ಲಿ ಕಾಡಿನ ಮರೆಯಲ್ಲಿ ಅಡಗಿಕೊಂಡ ಇವರು ಸೂಕ್ಷ್ಮ ಮೈಕ್ರೋಫೋನ್ ಮೂಲಕ ಅಲ್ಲಿಂದ ಕೇಳಿ ಬರುವ ಮಾತುಕತೆಗಳನ್ನು ಆಲಿಸಲಾರಂಭಿಸಿದರು. ಬೇಡಿಕೆಗಳ ಈಡೇರಿಕೆ ತಡವಾದಂತೆ ಉಗ್ರರು ಸೇರಿಹಿಡಿದ ಯೋಧರನ್ನು ಹಿಂಸಿಸಲಾರಂಭಿಸಿದರು. ಗುಂಡಿಯೊಳಗೆ ಜೀವಂತ ಶವವಾಗಿದ್ದ ಮುಸ ಬಂಗುರಾನ ಪರಿಸ್ಥಿತಿ ದಿನಕಳೆದಂತೆ ಬಿಗಡಾಯಿಸುತಿತ್ತು. ಗ್ಯಾಂಗ್ ಜತೆಗಿದ್ದ ಸಣ್ಣ ಸಣ್ಣ ಬಾಲಕರು ಕೂಡ ಅವನಿಗೆ ಕಲ್ಲು ಹೊಡೆಯುತ್ತಿದ್ದರು. ಮೇಜರ್ ಅಲನ್ ಮಾರ್ಷಲ್ರನ್ನು ಅಂತಾರಾಷ್ಟ್ರೀಯ ಮಾಧ್ಯಮದ ಜೊತೆಗೆ ಫೋನ್ನಲ್ಲಿ ಮಾತಾಡುವಂತೆ ಒತ್ತಾಯಿಸಲಾಗುತ್ತಿತ್ತು, ಒಪ್ಪದಿದ್ದಾಗ ಕೊಲ್ಲುವುದಾಗಿ ಹೆದರಿಸುತಿದ್ದರು. ಇದನ್ನು ಪರಿವೀಕ್ಷಣಾ ತಂಡ ಮುಖ್ಯನೆಲೆಗೆ ವರದಿ ಮಾಡುತ್ತಿತ್ತು.


ಸಿಯಾರ್ ಲಿಯೋನ್ನ ಮುಖ್ಯ ನದಿಯಾದ ರೊಕೆಲ್ ಕ್ರೀಕ್ ನ ಉತ್ತರ ಭಾಗದಲ್ಲಿ ಒತ್ತೆಯಾಳುಗಳನ್ನು ಕೂಡಿ ಹಾಕಿದ ಗಬೇರಿ ಬಾನ ಇದ್ದರೆ, ನದಿಯ ದಕ್ಷಿಣ ಭಾಗದ ಮ್ಯಾಗ್ಬೇನಿಯಲ್ಲಿ  ಅವರದ್ದೆ ಇನ್ನೊಂದು ತಾಣವಿತ್ತು. ಸಾಸ್ ತಂಡ  ಕೇವಲ ಗಬೇರಿ ಬಾನಕ್ಕೆ ಧಾಳಿ ನಡೆಸಿದರೆ ಅಲ್ಲಿಂದ ಸುಮಾರು 2 km ದೂರದ ಮ್ಯಾಗ್ಬೇನಿಯಲ್ಲಿದ್ದ ಉಗ್ರರ ಪ್ರತಿರೋಧ ಎದುರಿಸಬೇಕಿತ್ತು. ಹಾಗಾಗಿ ಏಕಕಾಲದಲ್ಲಿ ನದಿಯ ಎರಡು ಬದಿ ಧಾಳಿ ಮಾಡಬೇಕಿತ್ತು. ಈ ಸಂಯುಕ್ತ ಧಾಳಿಗೆ ಬ್ರಿಟಿಷ್ ಪ್ಯಾರಾಚೂಟ್ ರೆಜಿಮೆಂಟ್ನ 130 ಯೋಧರನ್ನು ಬಳಸಿಕೊಳ್ಳಲು ನಿರ್ಧರಿಸಿದರು. ದಟ್ಟವಾದ ಅರಣ್ಯ, ಅಪಾಯಕಾರಿ ರಸ್ತೆಮಾರ್ಗ ಮತ್ತು ಹರಿಯುವ ನದಿಯಿಂದಾಗಿ ವಾಯುಮಾರ್ಗದಲ್ಲಿ ಧಾಳಿ ಮಾಡಲು ಯೋಜಿಸಲಾಯಿತು. ಶತ್ರುಗಳು ಹೊಂದಿರುವ ಆಯುಧಗಳು, ಚಲನವಲನ ಹಾಗು ಹೆಲಿಕ್ಯಾಪ್ಟರ್ ಇಳಿಯಲು ಸೂಕ್ತ ಜಾಗ ಮೊದಲಾದ ಮಾಹಿತಿಯನ್ನು ಸಾಸ್ ನ   ಪರಿವೀಕ್ಷಣಾ ತಂಡ ಒದಗಿಸಿತು. ಒಂದು ರಹಸ್ಯ ತಾಣದಲ್ಲಿ ಕಾರ್ಯಾಚರಣೆಯ ರಿಹರ್ಸಲ್ ಕೂಡ ನಡೆಸಿದ್ದರು, ಏಕೆಂದರೆ 12 ಮಂದಿ ಸೇನೆಯ ಒತ್ತೆಯಾಳುಗಳು ಹಾಗು ಹೀಗೆಯೇ ಬಂಧಿತರಾಗಿದ್ದ ಕೆಲವು ಸಿಯರ್ ಲಿಯೋನ್ ನಾಗರಿಕರ ಪ್ರಾಣಕ್ಕೆ ಕುತ್ತು ಉಂಟಾಗಬಾರದಿತ್ತು.

 ಅಂತೆಯೇ ಸೆಪ್ಟೆಂಬರ್ 10ರಂದು ಸಂಜೆ 6 ಗಂಟೆಗೆ, ಮೂರು ಚೀನೂಕ್  ಹೆಲಿಕಾಪ್ಟರ್ನಲ್ಲಿ ಎರಡು ತಂಡ ಹೊರಟಿತ್ತು. ಸಾಸ್ ನ ತಂಡ ಗಬೇರಿ ಬಾನದತ್ತ ಹೊರಟರೆ ಮತ್ತೊಂದು ಹೆಲಿಕಾಪ್ಟರನಲ್ಲಿ  ಪ್ಯಾರಾಚೂಟ್ ರೆಜಿಮೆಂಟ್ ಮ್ಯಾಗ್ಬೇನಿಗೆ ಹೋಯಿತು. ನಾಯಕ ಪೋಡೇ ಕಲ್ಲೆ ಸೇರಿದಂತೆ ಅತಿಯಾದ ಅಮಲು ಪದಾರ್ಥ ಸೇವಿಸಿದ  ಉಗ್ರರು ನಿದ್ದೆಯಲ್ಲಿದ್ದರು. ಹಠಾತ್ತಾಗಿ ಹೆಲಿಕ್ಯಾಪ್ಟರ್ ಸದ್ದು  ಕೇಳಿ ಏನೋ ಮಸಲತ್ತಿನ ಶಂಕೆ ಮೂಡಿ, ಒತ್ತೆಯಾಳುಗಳನ್ನು ಕೊಲ್ಲಲು  ಧಾವಿಸಿದರು , ಈ ಹಂತದಲ್ಲಿ ಹೆಲಿಕ್ಯಾಪ್ಟರ್ನಲ್ಲಿದ್ದ ವಿಶೇಷ ತಂಡ ನೆಲಕ್ಕಿಳಿಯದೆ ಏನು ಮಾಡುವಂತಿರಲಿಲ್ಲ. ಆದರೆ ಉಗ್ರರ ಅರಿವಿಗೂ ಬಾರದ ವಿಚಾರವೊಂದಿತ್ತು. ಕಳೆದ ಒಂದು ವಾರದಿಂದ ನೆಲದಲ್ಲಿ ಅಡಗಿ ಕುಳಿತಿದ್ದ ಸಾಸ್ ನ ಪರಿವೀಕ್ಷಣಾ ತಂಡ, ಒತ್ತೆಯಾಳುಗಳನ್ನು ಇಟ್ಟಿದ್ದ ಕಟ್ಟಡದ 50 mtr ಸಮೀಪಕ್ಕೆ ಹೋಗಿತ್ತು. ಕೊಲ್ಲಲು ಓಡಿಬಂದ ಉಗ್ರರು ಗುಂಡೇಟಿಗೆ ಬಲಿಯಾದರು. ಹೆಲಿಕಾಪ್ಟರ್ನಲ್ಲಿದ್ದ  ತಂಡ ಹಗ್ಗದ ಸಹಾಯದಿಂದ ನೆಲಕ್ಕೆ ಇಳಿಯಿತು. ಹೀಗೆ ಇಳಿಯುತ್ತಿರುವಾಗಲೇ ಬ್ರಾಡ್ ಟಿನಿಯನ್ ಫ್ಲ್ಯಾಂಕ್ ಎನ್ನುವ ಯುವ ಯೋಧನಿಗೆ ಗುಂಟೇಟು ತಗುಲಿತು, ಗಾಯಾಳುವನ್ನು ತಕ್ಷಣವೇ ಮತ್ತೆ ಹೆಲಿಕ್ಯಾಪ್ಟರ್ಗೆ ಹತ್ತಿಸಿದರು. ಉಳಿದವರು ಇಳಿದು ಹೋಗಿ ಉಗ್ರರನ್ನು ಸಂಹರಿಸಹತ್ತಿದ್ದರು. ಗುಂಡಿಯ ಕೊಳಕಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಮುಸ ಬಂಗುರಾರನ್ನು ಸೇರಿದಂತೆ ಎಲ್ಲಾ ಒತ್ತೆಯಾಳುಗಳನ್ನು ಹೆಲಿಕಾಪ್ಟರ್ಗೆ ಸುರಕ್ಷಿತವಾಗಿ ಹತ್ತಿಸಲಾಯಿತು. ಸ್ವಯಂಘೋಷಿತ ಬ್ರಿಗೇಡಿಯರ್ ಪೋಡೇ ಕಲ್ಲೆ ತನ್ನ ಬೆಡ್ ಕೆಳಗೆ ಅವಿತುಕೊಂಡಿದ್ದ, ಅವನನ್ನು ಬಂಧಿಸಲಾಯಿತು. ದಿಢೀರ್ ದಾಳಿಯಿಂದ ಬೆಚ್ಚಿದ ಉಗ್ರರು ಸಾವರಿಸಿಕೊಂಡು ಪ್ರತಿಧಾಳಿ ಆರಂಭಿಸಿದ್ದರು. ಆದರೆ ತುಂಬಾ ಹೊತ್ತು ಅವರ ಆಟ ನಡೆಯಲಿಲ್ಲ. 30 ನಿಮಿಷದೊಳಗೆ ಗಾಯಾಳು ಮತ್ತು ರಕ್ಷಿಸಲ್ಪಟ್ಟ ಗಸ್ತುತಂಡದ ಯೋಧರನ್ನು ಹೊತ್ತ ಹೆಲಿಕ್ಯಾಪ್ಟರ್ ಮರು ಪ್ರಯಾಣ ಬೆಳೆಸಿತ್ತು.

ಧಾಳಿಯಲ್ಲಿ ನಾಶವಾದ ಕಟ್ಟಡ 

ಇತ್ತ ಕಡೆ ಮ್ಯಾಗ್ಬೇನಿಯಲ್ಲಿ, 130 ಪ್ಯಾರಾಚೂಟ್ ರೆಜಿಮೆಂಟ್ ಯೋಧರನ್ನು ಹೊತ್ತ ಹೆಲಿಕ್ಯಾಪ್ಟರ್ ಕಾರ್ಯಾಚರಣೆ ಶುರುಮಾಡಿತು. ವಿಮಾನ ನಿರೋಧಕ ಕ್ಷಿಪಣಿ, A.K- 47 ಹಾಗು ಮಷೀನ್ ಗನ್  ಮೊದಲಾದ ಆಧುನಿಕ ಶಸ್ತ್ರ ಹೊಂದಿದ್ದ ಉಗ್ರರ ಒಂದು ಹೊಡೆತ ಬಿದ್ದರೂ ಹೆಲಿಕ್ಯಾಪ್ಟರ್ ನೆಲಕ್ಕೆ ಉರುಳುತ್ತಿತ್ತು.  ದುರದೃಷ್ಟವಶಾತ್ ಯೋಧರು ಹಗ್ಗದಿಂದ ಇಳಿಯುವ ಸ್ಥಳ ಕೆಸರಿನಿಂದ ಕೂಡಿದ ನೆಲವಾಗಿತ್ತು. ಹೇಗೋ ಇಳಿದ ಯೋಧರ ಸೆಕೆಂಡ್ ಇನ್ ಕಮಾಂಡ್ ಡನ್ನಿ ಮ್ಯಾಥ್ಯೂ ಗೆ ಗುಂಡು ತಗುಲಿತ್ತು. ಗಾಬರಿಯಾಗದೆ ಯೋಧರು ಉಗ್ರರ ಬೇಟೆಗೆ ಇಳಿದರು. ಅಡಗಿಸಿಟ್ಟಿದ್ದ ವಜ್ರಗಳನ್ನು ವಶಪಡಿಸಿಕೊಳ್ಳಲಾಯಿತು. ಉಗ್ರರಿಂದ ಗಸ್ತುಪಡೆಯ ವಾಹನಗಳನ್ನು ಮರುವಶಮಾಡಲಾಯಿತು, ಅವರ ಎಲ್ಲ ಸಂಪನ್ನೂಲಗಳನ್ನು ನಾಶ ಮಾಡಿದ ನಂತರ ಬದುಕುಳಿದ ಉಗ್ರರು ದಟ್ಟ ಕಾಡಿನತ್ತ ಪರಾರಿಯಾದರು.

ನದಿಯ ಎರಡು ಕಡೆ ಉಗ್ರರಿಗೆ ಅಪಾರ ಹಾನಿಯಾಗಿತ್ತು. ವೆಸ್ಟ್ ಸೈಡ್ ಬಾಯ್ ಗಳ 25 ಕ್ಕೂ ಹೆಚ್ಚು ಮೃತದೇಹಗಳು ಸಿಕ್ಕವು. ಇನ್ನು ಹಲವರ ಮೃತದೇಹಗಳು ನಂತರದ ದಿನಗಳಲ್ಲಿ ಕಾಡಿನಲ್ಲಿ ಪತ್ತೆಯಾಯ್ತು.  ಓಡಿ ಹೋಗಿದ್ದ ಉಗ್ರರು ಸೇನೆಗೆ ಶರಣಾದರು. ವಿಶೇಷ ಪಡೆಯ ಯೋಧ ಬ್ರಾಡ್ ಟಿನಿಯನ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಅತಿ ಬಲಿಷ್ಠ ಹಾಗು ಭೀಭತ್ಸ ವೆಸ್ಟ್ ಸೈಡ್ ಬಾಯ್ಸ್ ಗಳ ಸೋಲಿನ ಕತೆ ಕೇಳಿದ ಇನ್ನುಳಿದ ಬಂಡುಕೋರರಲ್ಲಿ ಭೀತಿಹುಟ್ಟಿ ಕೊನೆಗೆ ಅವರು ಶರಣಾದರು. ಕೆಲವೇ ತಿಂಗಳುಗಳಲ್ಲಿ ನಾಗರಿಕ ಯುದ್ಧ ಮುಗಿಯಿತು. ಸೆರೆ ಸಿಕ್ಕ ನಾಯಕ ಪೋಡೇ ಕಲ್ಲೆ ಸೇರಿದಂತೆ ಎಲ್ಲರಿಗೂ ಯುದ್ಧಾಪರಾಧಕ್ಕಾಗಿ ಶಿಕ್ಷೆಯಾಯಿತು. ಸಾಸ್ ನ ಸಾಹಸಕತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಯಿತು. ಅಂದು ಹಿಂಸಿಸಲ್ಪಟ್ಟು ಬದುಕುವ ಅಸೆ ಕಳೆದುಕೊಂಡಿದ್ದ ಮೂಸಾ ಬಂಗೂರ ಇಂದು ಸೇನೆಯಲ್ಲಿ ಮೇಜರ್ ಹುದ್ದೆಗೇರಿದ್ದಾರೆ. ಸಿಯರ್ ಲಿಯೋನ್ನಲ್ಲಿ ಇಂದಿಗೂ ಬಡತನವಿದೆ. ಆದರೆ ಶಾಂತಿ ನೆಲೆಸಿದೆ.


 ಆಫ್ರಿಕಾದ ಕಾಡಿನಲ್ಲೊಂದು ಸರ್ಜಿಕಲ್ ಸ್ಟ್ರೈಕ್ ಭಾಗ-1


                                                                                                               -Tharanatha Sona

www.nilume.net ನಲ್ಲಿ ಪ್ರಕಟವಾಗಿದ್ದ ಲೇಖನ 

Saturday, June 10, 2017

ಆಫ್ರಿಕಾದ ಕಾಡಿನಲ್ಲೊಂದು ಸರ್ಜಿಕಲ್ ಸ್ಟ್ರೈಕ್ ಭಾಗ-1


       ಸಿಯಾರ್ ಲಿಯೋನ್ ಸೇನೆಯ ಸೈನಿಕ  ಮುಸ ಬಂಗುರಾ ಬಂಧಿಯಾಗಿದ್ದ  ಗುಂಡಿ ತುಂಬಾ ಆಳವೇನೂ ಇರಲಿಲ್ಲ , ಕೇವಲ 2 ಮೀಟರ್ ಅಷ್ಟೇ. ಆದರೆ ಸುತ್ತಲು ಹರಡಿದ್ದ ಮಾನವ ತ್ಯಾಜ್ಯ , ಕೆಸರು ನರಕದರ್ಶನ ಮಾಡಿಸುತಿತ್ತು . ಅದಲ್ಲದೆ ಹಲ್ಲೆಯಿಂದ ದೇಹದಲ್ಲಿ ಅದ ಗಾಯಗಳು ಅಪಾರ ಹಿಂಸೆ ಉಂಟುಮಾಡುತ್ತಿದ್ದವು. ಮದ್ಯ ಮತ್ತು ಮಾದಕ ಪದಾರ್ಥ ಸೇವಿಸಿ ಕ್ರೂರವಾಗಿ ದಂಡಿಸುತ್ತಿದ್ದ ನರ ರಾಕ್ಷಸರ ಕೈಯಿಂದ ಹೊರಬಂದು ಬದುಕುವ ಸಾಧ್ಯತೆಯೂ ಇರಲಿಲ್ಲ. 


ಪಶ್ಚಿಮ ಆಫ್ರಿಕಾದ ಸಿಯಾರ್ ಲಿಯೋನ್ 
ಅದು ಸಿಯಾರ್ ಲಿಯೋನ್ , ಪಶ್ಚಿಮ ಆಫ್ರಿಕಾದ ಪುಟ್ಟ ರಾಷ್ಟ್ರ. ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧದಷ್ಟು ಇಲ್ಲದ (71,740 km^2 ) ಅತ್ಯಂತ ಕಡು ಬಡತನದಿಂದ ಕೂಡಿದ ರಾಷ್ಟ್ರ. ಇಂತಹ ರಾಷ್ಟ್ರದಲ್ಲಿ 1991ರಿಂದ ಆರಂಭವಾಗಿದ್ದ ನಾಗರಿಕ ಯುದ್ಧ 9 ವರ್ಷ ಆದರೂ ಮುಗಿದಿರಲಿಲ್ಲ, 75,000ಕ್ಕೂ ಹೆಚ್ಚು ಜನರ ಪ್ರಾಣಹರಣವಾಗಿತ್ತು.  ನಾಗರಿಕರ ರಕ್ಷಣೆಗಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಅಡಿಯಲ್ಲಿ ಭಾರತವು ಸೇರಿದಂತೆ ಅನೇಕ ದೇಶಗಳ ಸೇನೆಗಳು ಕಾರ್ಯನಿರ್ವಹಿಸುತ್ತಿದ್ದವು. ಹಿಂದೊಮ್ಮೆ ಬ್ರಿಟಿಷ್ ವಸಾಹತು ಆಗಿದ್ದ ದೇಶದ ರಕ್ಷಣೆಯ ಸಲುವಾಗಿ  ಬ್ರಿಟನ್ , ಸಿಯಾರ್ ಲಿಯೋನ್ ಸೇನೆಗೆ ತರಭೇತಿ ನೀಡುತ್ತಿತ್ತು .





ಅದು 25 ಆಗಸ್ಟ್ 2000ನೇ ಇಸವಿ,  ಮಧ್ಯಾಹ್ನದ  ವೇಳೆಯಲ್ಲಿ ಮೇಜರ್ ಅಲನ್ ಮಾರ್ಷಲ್ ನೇತೃತ್ವದಲ್ಲಿ 11 ಜನ ರಾಯಲ್ ಐರಿಶ್ ರೆಜಿಮೆಂಟ್ ನ ಮೊದಲನೇ ಬೆಟಾಲಿಯನ್ ಯೋಧರು ಹಾಗು  ಓರ್ವ (ಮುಸ ಬಂಗುರ) ಸಿಯಾರ್ ಲಿಯೋನ್ ಸರ್ಕಾರಿ ಸೇನೆಯ ಸೈನಿಕನನ್ನು ಕೂಡಿದ ಗಸ್ತುಪಡೆ ಸಂಚರಿಸುತ್ತಿತ್ತು. ರಾಜಧಾನಿ ಫ್ರೀಟೌನ್ ನಲ್ಲಿ ಮುಖ್ಯನೆಲೆ ಹೊಂದಿದ್ದ ಪಡೆ, ರೊಕೆಲ್ ಕ್ರೀಕ್ ನದಿದಂಡೆಯ ಸಾಸ್ ಅರಣ್ಯ ಪ್ರದೇಶದಲ್ಲಿ ಸಾಗುತ್ತಿದ್ದಾಗ ಸಮೀಪದಲ್ಲಿ ಬಂಡುಕೋರರ ತಾಣವಿರುವ ವರ್ತಮಾನ ಬಂತು. ಆಕ್ರ ಹಿಲ್ಸ್ ಪ್ರದೇಶದಲ್ಲಿದ್ದ ಮಾಗ್ಬೇನಿ ಮತ್ತು ಗಬೇರಿ ಬಾನದ ಹಳ್ಳಿಗಳು ವೆಸ್ಟ್ ಸೈಡ್ ಬಾಯ್ಸ್ ಎನ್ನುವ ನಟೋರಿಯಸ್ ಗ್ಯಾಂಗ್ನ ತಾಣವಾಗಿತ್ತು. 1991ರಲ್ಲಿ ರೆವೊಲ್ಯೂಷನರಿ ಯುನೈಟೆಡ್ ಫ್ರಂಟ್ (R.U.F ) ಎನ್ನುವ ಸಂಘಟನೆ ಸರ್ಕಾರದ ವಿರುದ್ಧ  ಹೋರಾಟ ಆರಂಭಿಸಿತು. ವೆಸ್ಟ್ ಸೈಡ್ ಬಾಯ್ಸ್ ಗಳು 1997ರ ವರೆಗೆ R.U.F ನ ಜೊತೆ ಸೇರಿ ಕೊನೆಗೆ ಹೋರಾಟದಲ್ಲಿ ಸೋತು ಈ ಕಾಡಿನಲ್ಲಿ ವಾಸವಾಗಿದ್ದರು. ಮಹಿಳೆಯರು ಮಕ್ಕಳನ್ನು ಸೇರಿದಂತೆ  400ಕ್ಕೂ ಹೆಚ್ಚು ಸದಸ್ಯರಿದ್ದ ಈ ತಂಡದ ನಾಯಕ 24ರ ಹರೆಯದ ಪೋಡೇ ಕಲ್ಲೆ, ಸಿಯಾರ್ ಲಿಯೋನ್ ಸೇನೆಯ ಮಾಜಿ ಸೈನಿಕ.  ಸದಾ ಮದ್ಯ,ಅಮಲು ಪದಾರ್ಥಗಳ ನಶೆಯಲ್ಲಿರುತ್ತಿದ್ದ ಇವರುಗಳ ಮುಖ್ಯ ಉದ್ದೇಶ ಅಲ್ಲಿನ ವಜ್ರದ ಗಣಿಗಳ ಮೇಲೆ ಹಿಡಿತ ಸಾಧಿಸುವುದು. ಹಾಗೆಯೇ ಸಿಕ್ಕಿದ ವಜ್ರಗಳನ್ನು ಅಲ್ ಕೈದಾಕ್ಕೆ ಮಾರಿ, ಶಸ್ತ್ರಾಸ್ತ್ರಗಳನ್ನು ಸಂಪಾದಿಸಿದರು.


ವಿಶ್ವಸಂಸ್ಥೆಯ ತಪಾಸಣಾ ಕೇಂದ್ರ ದಾಟಿ ಫ್ರೀಟೌನ್ ನಿಂದ ಸುಮಾರು 50 km ದೂರದಲ್ಲಿರುವ ಗಬೇರಿ ಬಾನದತ್ತ  ಮೂರು  ವಾಹನಗಳಲ್ಲಿ ಬ್ರಿಟಿಷ್ ಗಸ್ತು ಪಡೆ ಹೊರಟಿತ್ತು. ಸ್ವಲ್ಪ ಸಮಯದ ನಂತರ ದಟ್ಟ ಕಾಡಿನಲ್ಲಿ ಸಾಗುತ್ತಿದ್ದಾಗ ಎದುರಾಗಿತ್ತು, ಕಂಟೆಬಿ ಎಂಬಾತನ ನೇತೃತ್ವದಲ್ಲಿದ್ದ 50 ಮಂದಿ ವೆಸ್ಟ್ ಸೈಡ್ ಬಾಯ್ಸ್ ತಂಡ.  ತಮ್ಮದು ಕೇವಲ  ಗಸ್ತು ಪಡೆ ಎಂದು ಮೇಜರ್ ಅಲನ್ ಮಾರ್ಷಲ್ ಹೇಳಿದರೂ ಕೇಳದೆ ಬಂದೂಕು ತೋರಿಸಿ ಬೆದರಿಸಿ ವಾಹನದಿಂದ ಕೆಳಗಿಳಿಸಿದರು. ಯೋಧರು ಬಂದೂಕು ಕೆಳಗಿಳಿಸುತ್ತಿದಂತೆಯೇ ಅವರಲ್ಲಿದ್ದ ಆಯುಧಗಳನ್ನು ಕಸಿದುಕೊಂಡು, ಎಲ್ಲರನ್ನು ವಶಪಡಿಸಿಕೊಂಡರು. ಜೊತೆಗಿದ್ದ ಲಿಫ್ಟಿನಂಟ್ ಮುಸ ಬಂಗುರಾನಿಗೆ ಕೂಡ  ಹಲ್ಲೆಮಾಡಿದರು. ಏಕೆಂದರೆ ಹಿಂದೆ ಈ ಮುಸ ಮತ್ತು ಕೆಲವು ವೆಸ್ಟ್ ಸೈಡ್ ಬಾಯ್ಸ್ ತಂಡದ ಸದಸ್ಯರು ಸೇನೆಯಲ್ಲಿ ಜೊತೆಗಿದ್ದರು. ಮುಸ ಸೇನೆಗೆ ನಿಷ್ಠನಾಗಿದ್ದರೆ, ಇವರುಗಳು ಬಂಡೆದ್ದು ಅರಣ್ಯದಾಚೆ ನೂಕಲ್ಪಟ್ಟಿದ್ದರು. ಈಗ ಪ್ರತಿಕಾರ ತೀರಿಸುವ ಸಮಯ ಒದಗಿತ್ತು. ಎಲ್ಲ 12 ಮಂದಿಯನ್ನು ದಟ್ಟ ಅಡವಿಯಲ್ಲಿದ್ದ ಗಬೇರಿ ಬಾನದತ್ತ  ಕರೆದೊಯ್ದರು. ಮೂಸಾನಿಗೆ ಅಮಾನುಷವಾಗಿ ಹಲ್ಲೆ ಮಾಡಿ ಗುಂಡಿಯೊಂದಕ್ಕೆ ಎಸೆದರು. ಉಳಿದವರನ್ನು ಪೋಡೇ ಕಲ್ಲೆಯ ಮನೆ ಸಮೀಪ  ಕೋಣೆಯೊಂದರಲ್ಲಿ ಕೂಡಿ ಹಾಕಿದರು .

ಉಗ್ರರ ನಾಯಕ ಪೋಡೇ ಕಲ್ಲೆ
ಈ ಸಂಗತಿ ಫ್ರೀಟೌನ್ ನಲ್ಲಿದ್ದ ಸೇನೆಯ ಕಮಾಂಡಿಂಗ್ ಆಫೀಸರ್ ಸೈಮನ್ ಫಾರ್ಡೆಮ್ ಗೆ ಮುಟ್ಟಿ, ಸಂಧಾನಕ್ಕೆ ಮುಂದಾದರು. ಈ 11 ಮಂದಿ ಐರಿಶ್ ಸೇನಾಪಡೆಯ ಯೋಧರು, ಅಪಹರಕಾರರಿಗೆ ಅಮೂಲ್ಯ ನಿಧಿಯಂತೆ ಕಂಡರು. ಅವರ ಬಿಡುಗಡೆ ಮಾಡಿದರೆ ತಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದೆಂದು ಯೋಚಿಸಿದರು. ಸೇನೆಯ ಅಧಿಕಾರಿಗಳು, ವಶದಲ್ಲಿರುವ  ಸೈನಿಕರನ್ನು ತಾವು ಖುದ್ದು ಕಂಡ ನಂತರವೇ ಸಂಧಾನ ಪ್ರಕ್ರಿಯೆ ಆರಂಭಿಸಲು ಸೂಚಿಸಿದರು. ಎರಡು ದಿನಗಳ ನಂತರ ಕಮಾಂಡಿಂಗ್ ಆಫೀಸರ್ ಸೈಮನ್ ಫಾರ್ಡೆಮ್ ಮತ್ತು ನಾಯಕ ಪೋಡೇ ಕಲ್ಲೆಯ ಭೇಟಿ ಆಯಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಅಲನ್ ಮಾರ್ಷಲ್ ಜೊತೆಗಿದ್ದ ಸಹಾಯಕ ಪ್ಲಾಹೆರ್ಟಿ, ತಮ್ಮನ್ನು ಬಂಧಿಸಿರಿಸಿದ ಸ್ಥಳದ ನಕಾಶೆಯನ್ನು ಹಸ್ತಲಾಘವದ ಸಮಯದಲ್ಲಿ ಸೈಮನ್ ಫಾರ್ಡೆಮ್ ಗೆ ನೀಡಿದ್ದರು. ಇದು ಮುಂದೆ ನೆರವಿಗೆ ಬಂತು. ವೆಸ್ಟ್ ಸೈಡ್ ಬಾಯ್ಸ್ಗಳ ಬೇಡಿಕೆ ವಿಲಕ್ಷಣವಾಗಿತ್ತು . ತಮ್ಮನ್ನು   ಒಂದು ರಾಜಕೀಯ ಸಂಘಟನೆಯಾಗಿ ಮಾನ್ಯ ಮಾಡಬೇಕು. ಜೈಲುಗಳಲ್ಲಿ ಬಂಧಿತರಾಗಿರುವ ತಮ್ಮ ಸಹವರ್ತಿಗಳನ್ನು ಬಿಡುಗಡೆ ಮಾಡಬೇಕು. ಲಂಡನ್ನಲ್ಲಿ ತಮ್ಮ ಸದಸ್ಯರೊಬ್ಬರಿಗೆ ಉಚಿತ ಶಿಕ್ಷಣ ನೀಡಬೇಕು. ಕೊನೆಯದು ಮಾತ್ರ ಆಶಾದಾಯಕವಾಗಿತ್ತು, 'ತಮಗೆ ಒಂದು ಸ್ಯಾಟಲೈಟ್ ಫೋನ್ ಮತ್ತು ಔಷಧ ಒದಗಿಸಿದರೆ ಐದು  ಜನ ಒತ್ತೆಯಾಳುಗಳನ್ನು ಬಿಡುಗಡೆ ಗೊಳಿಸುತ್ತೇವೆ' ಎಂದು ಹೇಳಿದರು. ಅಂತೆಯೇ ಸ್ಯಾಟೆಲೈಟ್ ಫೋನ್ ಒಂದನ್ನು ಒದಗಿಸಿ ಆಗಸ್ಟ್ 31ರಂದು ಐದು ಯೋಧರನ್ನು ಬಿಡುಗಡೆ ಮಾಡಿಸಲಾಯಿತು. ಇತ್ತ ಫೋನ್ ಪಡೆದುಕೊಂಡ ಸ್ವಯಂಘೋಷಿತ  ಬ್ರಿಗೇಡಿಯರ್ ಪೋಡೇ ಕಲ್ಲೆ ಅದರ ಮೂಲಕ ಬಿಬಿಸಿ (BBC)ವಾಹಿನಿಯನ್ನು ಸಂಪರ್ಕಿಸಿ ತಮ್ಮ ಬೇಡಿಕೆಗಳ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಯುವಂತೆ ಮಾಡಿದ್ದ. ಅಪಹರಣಕಾರರ ಸಂಯಮ ಕೆಡುವ ಮೊದಲೇ ಒಂದು ನಿರ್ಧಾರಕ್ಕೆ ಬರಲೇಬೇಕಿತ್ತು.

ಶತ್ರುಗಳ ವಶದಲ್ಲಿ ತಮ್ಮ ಸೇನೆಯ ಯೋಧರು ಬಂಧಿಯಾಗಿರುವುದು ಯಾವುದೇ ದೇಶಕ್ಕೂ ಸಹಿಸದ ವಿಷಯ. ಅದು ಕೂಡ ಸೂರ್ಯ ಮುಳುಗದ ಸಾಮ್ರಾಜ್ಯ ಗ್ರೇಟ್ ಬ್ರಿಟನ್ ಗೆ !!!

                                                                                                      -Tharanatha sona


www.nilume.net ನಲ್ಲಿ ಪ್ರಕಟವಾಗಿದ್ದ ಲೇಖನ 

Saturday, May 20, 2017

NASA ದ ಬುಡಕ್ಕೆ ಬೆಂಕಿ ಇಟ್ಟ ಪೋರ !!!


 ಜನವರಿ 26ರ  ಮುಂಜಾನೆ ಬೆಚ್ಚಗೆ ಮಲಗಿದ್ದ ಜೇಮ್ಸ್ ಇನ್ನು ಇದ್ದಿರಲಿಲ್ಲ . ಕೊನೆಯ ಹೊರಗೆ ತಾಯಿ ಕೂಗುವುದನ್ನು ಕೇಳಿ ಎಚ್ಚರಗೊಂಡ . ತಾಯಿ ಹೊರಗೆ ಯಾರೋ ನಿನ್ನನ್ನು ಕರೆಯುತ್ತಿದ್ದಾರೆ ಎಂದು ಹೇಳಿದಾಗ ,ಏನೊಂದು ಅರ್ಥವಾಗದೆ ಕೋಣೆಯಿಂದ ಹೊರಬಂದ. ಹೊರಬಂದಾಗ ಬಂದೂಕುಧಾರಿ ಪೊಲೀಸರು , FBI (ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ - ಅಮೆರಿಕಾದ ತನಿಖಾ ಸಂಸ್ಥೆ )ಯ ವ್ಯಕ್ತಿಗಳು ಇನ್ನು ಕೆಲವರೊಂದಿಗೆ ನಿಂತಿದ್ದರು. ಆಶ್ಚರ್ಯಚಕಿತನಾದ ಜೇಮ್ಸ್ , ಏಕೆಂದರೆ ಆಗ ಅವನಿಗೆ ಕೇವಲ ಹದಿನಾರು ವರ್ಷಗಳು. ನಾಸಾ (NASA) ದ  ಬಟ್ಟೆ ತೊಟ್ಟ ಕೆಲವು ಜನರನ್ನು ಕಂಡಾಗ ಅವನಿಗೆ ವಿಷಯ ಏನೆಂದು ಹೊಳೆಯಿತು. ರಾಕೆಟ್ ನ ಬುಡಕ್ಕೆ ಬೆಂಕಿ ಇಡುವ ನಾಸಾದ ಬುಡಕ್ಕೆ ಈತ ಬೆಂಕಿ ಹಚ್ಚಿದ !!!.



ಅದು ಆಗಸ್ಟ್ 1999 ರ ಸಮಯ, ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಕೆಲವು ತಂತ್ರಜ್ಞರಿಗೆ ಏನೋ ಎಡವಟ್ಟಾದ ಸೂಚನೆ ಸಿಕ್ಕಿತ್ತು. ಅವರ ಕಂಪ್ಯೂಟರ್ಗಳಿಗೆ  ಹೊರಗಿನವರಾರೋ ಪ್ರವೇಶಿಸಿದ್ದಾರೆ ಹಾಗು ಕೆಲವು ದಾಖಲೆಗಳು ಕಳವಾಗಿದೆ. ಇದು ಸಾಮಾನ್ಯ ಸಂಗತಿ ಆಗಿರಲಿಲ್ಲ. ಅಲ್ಲಿರುವ ಕಂಪ್ಯೂಟರ್ಗಳು ಉಪಗ್ರಹ ಸಂವಹನ , ನಿಯಂತ್ರಣ ಕೆಲಸಕ್ಕೆ ಮೀಸಲಿರಿಸಿರುವಂತಹದು.  ಹೊರಗಿನಿಂದ ಒಂದು ಹುಳು ಸಹ ನಾಸಾ ಕೇಂದ್ರಕ್ಕೆ ಪ್ರವೇಶ ಮಾಡುವುದು ಕಷ್ಟವಿತ್ತು. ಅಂತಹದ್ದರಲ್ಲಿ ಮೇಧಾನಿ ವಿಜ್ಞಾನಿಗಳಿದ್ದ ಸಂಸ್ಥೆಯ  ಕಂಪ್ಯೂಟರ್ಗೆ ಯಾರೋ ಕನ್ನ ಕೊರೆಯುವುದೆಂದರೇನು?.  ಕೊನೆಗೆ ಮೂರು ವಾರಗಳ ಕಾಲ ಆ ಕಂಪ್ಯೂಟರ್ಗಳನ್ನು ಸ್ಥಗಿತಗೊಳಿಸಿ ಕೂಲಂಕುಷ ತನಿಖೆಗೆ ಒಳಪಡಿಸಿದ್ದರು. ಅಲ್ಲಿಗೆ ಸುಮಾರು 41,000 ಡಾಲರ್ ವೆಚ್ಚವಾಗಿತ್ತು, ತಂತ್ರಜ್ಞರ ತಲೆಯು ಬಿಸಿಯಾಗಿತ್ತು.

ತನಿಖೆಯಿಂದ ತಿಳಿದು ಬಂದದ್ದೇನೆಂದರೆ, ಅಮೆರಿಕಾದ DARA (Defense Threat Reduction Agency) ಎನ್ನುವ ಭದ್ರತಾ ಸಂಸ್ಥೆಯ ಸುಮಾರು ಹತ್ತು ಕಂಪ್ಯೂಟರ್ಗಳನ್ನು ಯಾರೋ ಹ್ಯಾಕ್ ಮಾಡಿದ್ದರು. c0mrade ಎಂಬ ನಾಮದಿಂದ ನೆಟ್ ವರ್ಕ್ ನ ಸುರಕ್ಷತೆಗೆ ಕನ್ನ ಕೊರೆದು ಒಳನುಗ್ಗಿದ ಅವರು, ಉದ್ಯೋಗಿಗಳ ಬಳಕೆದಾರ ಹೆಸರು ಹಾಗು ಪಾಸ್ವರ್ಡ್ ಕದ್ದಿದ್ದರು. ಅಲ್ಲದೆ ಕೆಲವು ಗೌಪ್ಯ ಸಂದೇಶಗಳನ್ನು ಓದಿದ್ದರು . ಇದರಿಂದ ಇನ್ನೊಂದು ಸರ್ಕಾರಿ  ಸಂಸ್ಥೆ ನಾಸಾದ  ಕಂಪ್ಯೂಟರ್ಗೆ ನುಗ್ಗಲು ಸಾಧ್ಯವಾಯಿತು. ಹೀಗೆ ಪ್ರವೇಶ ಪಡೆದ  ನಂತರ ಅಲ್ಲಿದ್ದ ಕೆಲವು ಮಾಹಿತಿಗಳನ್ನು ಕದ್ದಿದ್ದರು. ಇದರಲ್ಲಿ ನಾಸಾದ ನಿಯಂತ್ರಣದಲ್ಲಿರುವ ಬಾಹ್ಯಾಕಾಶ ನಿಲ್ದಾಣದ ಸಾಫ್ಟ್ವೇರ್ ಕೂಡ ಸೇರಿತ್ತು. ಈ ಸಾಫ್ಟ್ವೇರ್ ಬಾಹ್ಯಾಕಾಶ ನಿಲ್ದಾಣದ ಒಳಗಿರುವ ತಾಪಮಾನ , ತೇವಾಂಶ ಮೊದಲಾದ ವಾತಾವರಣ ಸಂಬಂಧಿ ಕೆಲಸಗಳನ್ನು ನಿಯಂತ್ರಿಸುತ್ತಿತ್ತು . ಭಾರಿ ಬೆಲೆಬಾಳುವ ಈ ಸಾಫ್ಟ್ವೇರ್ನ ಸೊರ್ಸ್ ಕೋಡ್( Source Code)  ಕದ್ದ ದುಷ್ಕರ್ಮಿಗಳನ್ನು ಹುಡುಕುವುದು ಅನಿವಾರ್ಯವಾಗಿತ್ತು.



ಜೊನಾಥನ್ ಜೇಮ್ಸ್ 

ಎರಡು ಸಾವಿರನೇ ಇಸವಿಯ ಜನವರಿ 26 ರಂದು  ತನಿಖೆ ಮಾಡುತ್ತಾ ಹೋದ ತನಿಖಾ ಸಂಸ್ಥೆಗಳು ಕೊನೆಗೆ  ನಿಂತದ್ದು ,ಹದಿನಾರು ವರ್ಷದ ಜೊನಾಥನ್ ಜೇಮ್ಸ್ ಮನೆಯ ಮುಂದೆ. ಭಾರಿ ಸುರಕ್ಷತಾ ಕ್ರಮ ಹೊಂದಿದ್ದ ಸಂಸ್ಥೆಯ ಕಂಪ್ಯೂಟರ್ಗೆ 16 ವರ್ಷದ ಪೋರನೊಬ್ಬ ತನ್ನ ಸಾಮಾನ್ಯ ಪೆಂಟಿಯಂ ಆವೃತ್ತಿಯ ಗಣಕ ಬಳಸಿ  ಲಗ್ಗೆ ಇಟ್ಟಿದ್ದ. ಅವನನ್ನು ವಿಚಾರಣೆಗೆ ಒಳಪಡಿಸಿ ಅವನಲ್ಲಿದ್ದ 5 ಕಂಪ್ಯೂಟರ್, ಸಿಡಿಗಳು  ಸೇರಿದಂತೆ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡರು. ವಿಚಾರಣೆ ಮಾಡಿದಾಗ ತನ್ನ ತಪ್ಪನ್ನು ಒಪ್ಪಿಕೊಂಡ . ಇನ್ನು ವಯಸ್ಕನಾಗದ ಕಾರಣ 6 ತಿಂಗಳು ಗೃಹಬಂಧನದಲ್ಲಿ ಇರಿಸಿ, ಕಂಪ್ಯೂಟರ್ನ ಬಳಕೆಯನ್ನು ಪ್ರತಿಬಂಧಿಸಿದರು. ಕೊನೆಗೆ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಿದ್ದರು. 



1983ರಲ್ಲಿ ಹುಟ್ಟಿದ್ದ ಜೇಮ್ಸ್ 6 ವರ್ಷದ ಬಾಲಕನಾಗಿದ್ದಾಗಲೇ ಕಂಪ್ಯೂಟರ್ ಬಳಸಲು ಆರಂಭಿಸಿದ. ಒಮ್ಮೆ ಇವನ ಕಂಪ್ಯೂಟರ್ ಬಳಕೆ ಅತಿಯಾಯಿತೆಂದು , ಇನ್ನು ಕಂಪ್ಯೂಟರ್ ಬಳಸಬಾರದೆಂದು ತಂದೆ ರೇಗಿದಾಗ ರಚ್ಚೆ ಹಿಡಿದು ಮನೆ ಬಿಟ್ಟು ಓದಿ ಹೋಗಿದ್ದ. ಹೀಗೆ ಕಂಪ್ಯೂಟರ್ ಹುಚ್ಚು ಹಿಡಿಸಿಕೊಂಡಿದಾತನಿಗೆ ಯೂನಿಕ್ಸ್ (Unix) ಹಾಗು ಸಿ(C)  ಭಾಷೆಯಲ್ಲಿ ಪರಿಣತಿಯಿತ್ತು. ಇದನ್ನು ನಾಸಾದ ಮೇಲೆ ಪ್ರಯೋಗಿಸಿ ತನ್ನ ಜೀವನವನ್ನು ಹಾಳು ಮಾಡಿಕೊಂಡ.


ಈ ಘಟನೆಯ ನಂತರ ನಡೆದ ಸಂದರ್ಶನದಲ್ಲಿ ಆತ ಹೇಳಿದಿಷ್ಟು '' ನಾಸಾದ ಕಂಪ್ಯೂಟರ್ಗಳು ಸಾಕಷ್ಟು ಸುರಕ್ಷಿತವಾಗಿಲ್ಲೆಂದು ನಾನು ಮೊದಲೇ ಅದರ ಗಣಕ ವಿಭಾಗದ ಮುಖ್ಯಸ್ಥರಿಗೆ ತಿಳಿಸಿದ್ದೆ. ಅವರು ಅದರ ಬಗ್ಗೆ ನಿರ್ಲಕ್ಷ ತೋರಿದ್ದರಿಂದ ನಾನು ಈ ಕೆಲಸ ಮಾಡಿದೆ''. ತಾನು ಕೇವಲ ಕುತೂಹಲಕ್ಕಾಗಿ ಹ್ಯಾಕ್ ಮಾಡಿದ್ದೆಂದು, ಆ ಸಾಫ್ಟ್ವೇರ್ ನ ಸೊರ್ಸ್ ಕೋಡ್ ನ್ನು ಅಧ್ಯಯನಕ್ಕಾಗಿ ಬಳಸಿಕೊಂಡೆನೆಂದು  ಹೇಳಿದ.


ಹೀಗಿರುವಾಗ 2008ನೇ ಜನವರಿ 17 ರಂದು ಅಮೇರಿಕಾದಲ್ಲಿ ಬೃಹತ್ ಸೈಬರ್ ಧಾಳಿ ನಡೆಯಿತು. TJX ಎನ್ನುವ ಗೃಹಪಯೋಗಿ ವಸ್ತು ತಯಾರಿಕಾ ಸಂಸ್ಥೆ, ಬೋಸ್ಟನ್ ಮಾರ್ಕೆಟ್ ,ಆಫೀಸ್ ಮ್ಯಾಕ್ಸ್ ಎನ್ನುವ ಸಂಸ್ಥೆಗಳ ಸರ್ವರ್ಗಳಿಗೆ ದುಷ್ಕರ್ಮಿಗಳು ಧಾಳಿ ನಡಿಸಿದ್ದರು, ಹಾಗು ಈ  ಧಾಳಿಯ ಸಮಯ  ಸರ್ವರ್ಗಳಲ್ಲಿ ಶೇಖರವಾಗಿದ್ದ  ಗ್ರಾಹಕರ ಖಾಸಗಿ ಮಾಹಿತಿ ಹಾಗು ಕ್ರೆಡಿಟ್ ಕಾರ್ಡ್ನ ಮಾಹಿತಿಗಳನ್ನು ಕದ್ದಿದ್ದರು.  ಪೊಲೀಸರು ಮತ್ತೆ ಜೇಮ್ಸ್ ಮೇಲೆ ಸಂದೇಹ ಪಟ್ಟರು ಮತ್ತು ಅವನ ಸಂಬಂಧಿಕರ ಮನೆಗಳ ಮೇಲೂ ಧಾಳಿ ಮಾಡಿದ್ದರು. ಆದರೆ ಜೇಮ್ಸ್ ನ ಪಾಲ್ಗೊಳ್ಳುವಿಕೆ ಬಗ್ಗೆ ಸೂಕ್ತ ಸಾಕ್ಷ್ಯಧಾರಗಳು ದೊರೆಯಲಿಲ್ಲ. ಈ ಘಟನೆಗಳಿಂದ  ಮಾನಸಿಕವಾಗಿ ಕುಗ್ಗಿ ಹೋದ ಜೇಮ್ಸ್ ಕೊನೆಗೆ ಮೇ ಹದಿನೆಂಟು, 2008 ರಂದು ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ.

ಅವನು ಬರೆದಿಟ್ಟ ಆತ್ಮಹತ್ಯಾ ಪತ್ರದಲ್ಲಿ  ಘಟನೆಗೂ ತನಗೂ ಸಂಬಂಧವಿಲ್ಲವೆಂದು , ತನಗೆ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲವೆಂದು , ನಾನು ಘಟಿಸಿದ ಸಂಗತಿಗಳ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದ್ದು, ಆತ್ಮಹತ್ಯೆಯೊಂದೇ ನನಗೆ ಆಯ್ಕೆಯಾಗಿದೆ ಎಂದು ಬರೆದಿದ್ದ . ' TJX ಸೈಬರ್  ಧಾಳಿಯಲ್ಲಿ ಅವನ ಕೈವಾಡವಿರಲಿಲ್ಲ ಮತ್ತು  ಅವನ ಬಳಿ ಸಾಕಷ್ಟು ಹಣವಿರಲಿಲ್ಲ'  ಎಂದು ಅವನ ತಂದೆ ಹೇಳುತ್ತಾರೆ. ಆ ವೇಳೆಗಾಗಲೇ ಜೇಮ್ಸ್, ಕ್ಯಾನ್ಸರ್ ನಿಂದಾಗಿ  ತನ್ನ ತಾಯಿಯನ್ನು ಕಳೆದುಕೊಂಡಿದ್ದ.

ತಪ್ಪಾದ ದಾರಿ ಒಬ್ಬ ಬುದ್ದಿವಂತನನ್ನು ಎಳೆವಯಸ್ಸಿನಲ್ಲೇ ಅವನತಿಗೆ ತಲುಪಿಸಿತು. ಹರೆಯದ ವಯಸ್ಸಿನ ಹುಚ್ಚು ಸಾಹಸವೊಂದು ಅವನ ಬದುಕಿಗೆ ಕೊಳ್ಳಿಯಾಯಿತು . ಇಂದಿಗೂ ಜಗತ್ತು ಅವನನ್ನು ಟಾಪ್-5 ಹ್ಯಾಕರ್ಗಳಲ್ಲಿ ಒಬ್ಬ ಎಂದು ಗುರುತಿಸುತ್ತದೆ.  ಈ ಘಟನೆಗಳ ನಂತರ ಇಂತಹ ಹ್ಯಾಕರ್ಗಳ ಪ್ರತಿಭೆಯನ್ನು(?) ಗುರುತಿಸಿ ಸೈಬರ್ ಭದ್ರತಾ ಸಂಸ್ಥೆಗಳು ಅವರನ್ನು ಉದ್ಯೋಗಿಗಳನ್ನಾಗಿ ನೇಮಕ ಮಾಡಿಕೊಂಡಿವೆ. ಕಳ್ಳರ ದಾರಿ ಇನ್ನೊಬ್ಬ ಮಾತ್ರ ಗೊತ್ತು ಅಲ್ಲವೇ ?.

ಮಾಹಿತಿ ಮತ್ತು ಚಿತ್ರಕೃಪೆ ::- ಅಂತರ್ಜಾಲ
                                                                                                        - Tharanatha Sona